ಕಾರ್ಕಳ : ಅದ್ದೂರಿ ಮದುವೆಯಾಗಿ ಬೇಕಾಬಿಟ್ಟಿ ಖರ್ಚು ಮಾಡಿ ಹೆಸರು ಗಳಿಸುವ ಈ ಕಾಲದಲ್ಲಿ. ಇಲ್ಲೊಬ್ಬ ಯುವಕ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟು 10 ಲಕ್ಷ ರೂ.ಗಳನ್ನು ಬಡ ಜನರಿಗೆ ಹಂಚಿ ಆಪತ್ಭಾಂಧವ ನಾಗಿದ್ದಾನೆ.
ಈ ರೀತಿ ಮಾಡಿದ ವ್ಯಕ್ತಿ ಕನ್ನಡಿಬೆಟ್ಟು ತೆಲ್ಲಾರ್ ನಿವಾಸಿ ದಿ. ಶಂಕರ್ ಶೆಟ್ಟಿ ಮತ್ತು ಗುಲಾಬಿ ಶೆಟ್ಟಿ ದಂಪತಿ ಪುತ್ರ ಸುಕೇಶ್ ಶೆಟ್ಟಿ. ಸುಕೇಶ್ ಮುಂಬೈಯಲ್ಲಿ ಉದ್ಯಮಿಯಾಗಿದ್ದು, ಅವರ ಮದುವೆ ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸರಳವಾಗಿ ನಡೆದಿದೆ. ಸರಳ ಮದುವೆಯಾಗುವ ಮೂಲಕ ಮದುವೆಗಾಗುವ ಖರ್ಚನ್ನು ಉಳಿತಾಯ ಮಾಡಿ ಬಡವರಿಗೆ, ಸಮಸ್ಯೆಯಲ್ಲಿರುವವರಿಗೆ ಹಂಚಿದ್ದಾರೆ. ಮದುವೆ ದಿನದಂದೇ 10 ಲಕ್ಷ ರೂ.ಗಳನ್ನು ಈ ಕಾರ್ಯಕ್ಕೆ ಬಳಸುವ ಮೂಲಕ ಮಾದರಿಯಾಗಿದ್ದಾರೆ. ಸುಕೇಶ್ ಅವರ ಈ ನಿರ್ಧಾರಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಕಿವುಡುತನ ಸಮಸ್ಯೆ, ಶ್ರವಣ ಸಮಸ್ಯೆ, ಬಿದ್ದು ಕಾಲಿನ ಸ್ವಾಧೀನ ಕಳೆದುಕೊಂಡವರಿಗೆ ಕೃತಕ ಕಾಲು, ಅನಾರೋಗ್ಯದಿಂದ ಬಳಲುತ್ತಿರುವವರಿಗೆ ಹಣಕಾಸಿನ ನೆರವು ನೀಡಿದ್ದಾರೆ. ಹೃದಯ ಸಂಬಂಧಿ ತೊಂದರೆಯಿಂದ ಬಳಲುತ್ತಿರುವ ಹೊಟೇಲ್ ಕಾರ್ಮಿಕರೊಬ್ಬರ ಆರು ವರ್ಷದ ಮಗುವಿಗೆ ಮತ್ತು ಕಿಡ್ನಿ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿರುವ ವರಿಗೂ ಆರ್ಥಿಕ ನೆರವು ನೀಡಿದ್ದಾರೆ. ಸಾಕುದನ ಕಳವಾಗಿ ನೊಂದಿದ್ದ ಮಹಿಳೆಯೊಬ್ಬರಿಗೆ ದನಗಳನ್ನು ಕೂಡಾ ದಾನ ಮಾಡಿದ್ದಾರೆ. ಅಗ್ನಿ ಅವಘಡದಿಂದ ಮನೆ ಕಳೆದುಕೊಂಡವರಿಗೆ ಆರ್ಥಿಕ ನೆರವು, ತಂದೆಯಿಲ್ಲದ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ, ಮನೆ ರಿಪೇರಿಗಾಗಿ ಧನಸಹಾಯ. ಮನೆ ನಿರ್ಮಾಣಕ್ಕೆ ಧನಸಹಾಯ, ಸ್ವಂತ ಮನೆ ಹೊಂದಿಲ್ಲದ ಮಹಿಳೆಯೊಬ್ಬರಿಗೆ ಆರ್ಥಿಕ ನೆರವು, ಕ್ಯಾನ್ಸರ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ಧನಸಹಾಯ, ಹಿರಿಯ ನಾಗರಿಕ ರಿಗೆ ಧನ ಸಹಾಯ ಹೀಗೆ ಹತ್ತು ಹಲವು ಸಮಸ್ಯೆಗಳಿಗೆ ಧನ ಸಹಾಯ ಮಾಡಿ ಮಾದರಿ ವ್ಯಕ್ತಿಯಾಗಿದ್ದಾರೆ.
Click this button or press Ctrl+G to toggle between Kannada and English