- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ರೈತರ ಬೆಳೆಗೆ ಬೆಲೆ ಮೊದಲೇ ನಿಗದಿಯಾಗುವ ಕಾನೂನು ಬರಬೇಕು: ಬಸವರಾಜ ಬೊಮ್ಮಾಯಿ

[1]

ಚಿತ್ರದುರ್ಗ: ರೈತರ ಬೆಳೆಗೆ ಬೆಲೆಯು ಮೊದಲೇ ನಿಗದಿಯಾಗುವ ಕಾನೂನು ಜಾರಿಯಾಗಬೇಕು. ರೈತನನ್ನು ಗಟ್ಟಿ ಮಾಡಿದರೆ ಕೃಷಿ ಗಟ್ಟಿಯಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟರು.

ಸಿರಿಗೆರೆಯಲ್ಲಿ ಭಾನುವಾರ ಜರುಗಿದ ಲಿಂ.ಶಿವಕುಮಾರ ಸ್ವಾಮೀಜಿಯವರ 31ನೇ ಶ್ರದ್ಧಾಂಜಲಿ ಸಮಾರಂಭದಲ್ಲಿ ಮಾತನಾಡಿದ ಅವರು, ರಾಜಕಾರಣಿಗಳಿಗೆ ಮುಂದಿನ ಚುನಾವಣೆ ಮೇಲೆ ಕಣ್ಣಿದ್ದರೆ, ಪ್ರಸ್ತುತ ನಮ್ಮ ಪೂಜ್ಯರಿಗೆ ಮುಂದಿನ ಜನಾಂಗದ ಮೇಲೆ ಕಣ್ಣಿರುತ್ತದೆ. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ರೈತರ ನೀರಾವರಿ ಯೋಜನೆಗಳಿಗೆ ಒತ್ತು ನೀಡಿ ಯಶಸ್ವಿಯಾಗಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ನಾವು ಪ್ರಸ್ತಾಪಿಸಿದ ಬಜೆಟ್‌ನಲ್ಲಿ ರೈತರಿಗೆ 5ಲಕ್ಷರೂಗಳ ಶೂನ್ಯ ಬಡ್ಡಿದರದಲ್ಲಿ ಹಣ ನೀಡುವ ಯೋಜನೆ ಜಾರಿತಂದಿದ್ದೇವೆ. ಅದನ್ನು ಈ ಸರ್ಕಾರವೂ ಸಹ ಮುಂದುವರೆಯಿಸಿಕೊಂಡು ಹೋಗುತ್ತಿದೆ. ಕಾವೇರಿ ನೀರಿನ ಅಂತರರಾಜ್ಯ ನದಿ ವಿವಾದದ ಕಾನೂನುಗಳು ವಿವಾದಗಳನ್ನು ಹುಟ್ಟುಹಾಕುವ ಕಾನೂನಾಗಿದೆ. ಇಂತಹ ವ್ಯವಸ್ಥೆಗಳು ಸರ್ಕಾರದಲ್ಲಿವೆ. ಈ ನಿಯಮಗಳು ಬದಲಾಗಬೇಕು. ಲಿಂ.ಶ್ರೀಗಳ ಪುಣ್ಯಸ್ಮರಣೆ ಸಾಧಕರ ಪುಣ್ಯಸ್ಮರಣೆಯಾಗಿದೆ ಎಂದರು.

ದಿವ್ಯಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ತರಳಬಾಳು ಶ್ರೀ
ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು, ರೈತರು ಮತ್ತು ಉದ್ದಿಮೆದಾರ ಮಧ್ಯೆ ಹೊಸ ಕಾನೂನು ಜಾರಿಗೆ ತರಬೇಕಾಗಿದೆ. ಉದ್ದೇಶಕ್ಕೆ ವಶಪಡಿಸಿಕೊಂಡ ಜಮೀನು ಬಳಕೆಯಾಗುತ್ತಿರುವುದರ ಬಗ್ಗೆ ಪರಿಶೀಲನೆ ಮಾಡಬೇಕು. ಯುವಕರಿಗೆ ನೀಡುವ ಯುವನಿಧಿ ನೀಡುವುದರ ಜೊತೆಗೆ ಯುವಕರನ್ನು ದೇಶದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಹಿರಿಯ ಶ್ರೀಗಳವರದು ಮಾತೃ ಹೃದಯ ಹಾಗೂ ಅದ್ಭುತ ಚೇತನ. ಈ ಶ್ರದ್ಧಾಂಜಲಿ ಸಮಾರಂಭ ರೈತರ ಸಮ್ಮೇಳನವಾಗಬೇಕು. ಸರ್ಕಾರ ಐದು ಗ್ಯಾರಂಟಿಗಳ ಜೊತೆ 6ನೇಯ ಗ್ಯಾರಂಟಿಯಾಗಿ ಜಲಭಾಗ್ಯ ನೀಡಿದರೆ ರೈತರು ಕಾಯಕದ ಜೊತೆಗೆ ಆರ್ಥಿಕವಾಗಿ ಸಬಲರಾಗುತ್ತಾರೆ ಎಂದರು. ರೈತರ ಭೂಮಿಯ ಮಾಲಿಕರು ರೈತರೇ ಆಗಬೇಕು. ರೈತರು ಮತ್ತು ಉದ್ಯಮಿಗಳ ನಡುವೆ ಒಪ್ಪಂದ ಆಗಬೇಕು. ಒಮ್ಮೆ ಇಡಿಗಂಟು ನೀಡುವುದರ ಬದಲಿಗೆ ನಿರಂತರ ಪರಿಹಾರ ಕೊಡುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಈಶ್ವರ್ ಖಂಡ್ರೆ, ಸುಧಾಕರ್, ಮಾಜಿ ಸಚಿವ ಹೆಚ್ ಆಂಜನೇಯ, ಶಾಸಕರಾದ ಡಿ.ಜಿ.ಶಾಂತನಗೌಡ, ಎಂ ಚಂದ್ರಪ್ಪ, ಬಿ.ವೈ ವಿಜಯೇಂದ್ರ ಹಾಗೂ ಚಿತ್ರದುರ್ಗದ ಕಾಂಗ್ರೆಸ್ ಅಧ್ಯಕ್ಷರಾದ ತಾಜ್‌ಪೀರ್, ಯುವ ಬಿಜೆಪಿ ಮುಖಂಡರಾದ ಅನಿತ್ ಕುಮಾರ್ ಅನೇಕ ಗಣ್ಯರು ಭಾಗವಹಿಸಿದ್ದರು.