- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕೆವಿಜಿ ಮೆಡಿಕಲ್ ಕಾಲೇಜಿನ ಪ್ರೊ.ಎ.ಎಸ್.ರಾಮಕೃಷ್ಣ ಕೊಲೆ ಐದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

[1]

ಮಂಗಳೂರು : ಸುಳ್ಯದ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಪ್ರೊ.ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣದ ಆರೋಪಿಗಳಾದ ಡಾ. ರೇಣುಕಾ ಪ್ರಸಾದ್ ಸಹಿತ ಐದು ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ರಾಜ್ಯ ಹೈಕೋರ್ಟ್ ಗುರುವಾರ ತೀರ್ಪು ನೀಡಿದೆ.

ಪುತ್ತೂರಿನ ಐದನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು ಡಾ. ರೇಣುಕಾ ಪ್ರಸಾದ್ ಸಹಿತ ಏಳು ಮಂದಿ ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿ ಏಳು ವರ್ಷದ ಹಿಂದೆ ತೀರ್ಪು ನೀಡಿತ್ತು. ಅದರ ವಿರುದ್ಧ ಸರಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಮತ್ತು ಮತ್ತು ಬಸವರಾಜ್ ಅವರಿದ್ದ ದ್ವಿಸದಸ್ಯ ನ್ಯಾಯ ಪೀಠವು ಪುರಸ್ಕರಿಸಿ ಪುತ್ತೂರು ನ್ಯಾಯಾಲಯದ ಆದೇಶವನ್ನು ಸೆ.27ರಂದು ರದ್ದುಗೊಳಿಸಿದ್ದರಲ್ಲದೆ ಏಳು ಮಂದಿಯ ಪೈಕಿ ಆರು ಮಂದಿ ಆರೋಪಿಗಳನ್ನು ದೋಷಿಗಳು ಎಂದು ತೀರ್ಮಾನಿಸಿ ಗುರುವಾರ ಶಿಕ್ಷೆಯ ಪ್ರಮಾಣ ಪ್ರಕಟಿಸುವುದಾಗಿ ತಿಳಿಸಿದ್ದರು.

ಅದರಂತೆ ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳಾದ ಸುಳ್ಯದ ಡಾ. ರೇಣುಕಾ ಪ್ರಸಾದ್, ವಿಟ್ಲ ಅಳಕೆಯ ಮನೋಜ್ ರೈ, ಸಕಲೇಶಪುರದ ನಾಗೇಶ್ ಎಚ್. ಆರ್., ವಾಮನ್ ಪೂಜಾರಿ, ಬಜಾಲ್‌ನ ಶಂಕರ್ ಯಾನೆ ಭವಾನಿ ಶಂಕರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ. ಪ್ರಮುಖ ಆರೋಪಿ ಆಕಾಶ ಭವನದ ಶರಣ್ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಕಾರಣ ಆತನ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿಲ್ಲ. ಇನ್ನೋರ್ವ ಅರೋಪಿ ಎಚ್.ವಿ. ನಾಗೇಶ್‌ನನ್ನು ಖುಲಾಸೆಗೊಳಿಸಲಾಗಿದೆ.

ಪ್ರಮುಖ ಆರೋಪಿ ಡಾ.ರೇಣುಕಾ ಪ್ರಸಾದ್‌ಗೆ 10 ಲಕ್ಷ ರೂ. ದಂಡವನ್ನು ವಿಧಿಸಲಾಗಿದ್ದು, ಅದನ್ನು ಕೊಲೆಗೀಡಾದ ಪ್ರೊ.ಎ.ಎಸ್. ರಾಮಕೃಷ್ಣ ಅವರು ಕುಟುಂಬಕ್ಕೆ ನೀಡುವಂತೆ ಆದೇಶಿಸಲಾಗಿದೆ. ಉಳಿದ ಆರೋಪಿಗಳಿಗೆ ಜೀವಾವಧಿ ಶಿಕ್ಷೆಯ ಜೊತೆಗೆ ತಲಾ 10 ಸಾವಿರ ರೂ. ದಂಡ ವಿಧಿಸಲಾಗಿದೆ.

ಆರೋಪಿಗಳ ಪರವಾಗಿ ವಾದಿಸಿದ್ದ ನ್ಯಾಯವಾದಿ ಶಾಂತರಾಮ ಶೆಟ್ಟಿ ಶಿಕ್ಷೆ ಪ್ರಕಟನೆಯ ಸಂದರ್ಭ ನ್ಯಾಯಾಲಯದಲ್ಲಿ ಹಾಜರಿದ್ದು, ರೇಣುಕಾ ಪ್ರಸಾದ್ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.