- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಗುತ್ತಿಗೆದಾರರೊಬ್ಬರ ಮನೆಯಲ್ಲಿ ಸಿಕ್ಕಿದ 42 ಕೋಟಿ ರೂ. ಕಮಿಷನ್ ಹಣ ಎಂಬ ಮಾಹಿತಿ ಇದೆ : ನಳಿನ್ ಕುಮಾರ್ ಕಟೀಲ್

[1]

ಮಂಗಳೂರು : ‘ಗುತ್ತಿಗೆದಾರರೊಬ್ಬರ ಮನೆಯಲ್ಲಿ ಐಟಿ ಅಧಿಕಾರಿಗಳು ಪತ್ತೆ ಹಚ್ಚಿದ 42 ಕೋಟಿ ರೂ. ಕಮಿಷನ್ ಹಣ ಎಂಬ ಮಾಹಿತಿ ಇದೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಶುಕ್ರವಾರ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ‘ಬೆಂಗಳೂರಿನಲ್ಲಿ ಅಂಬಿಕಾಪತಿ ಎಂಬ ಗುತ್ತಿಗೆದಾರನ ಮನೆಗೆ ಐಟಿ ದಾಳಿ ಆಗಿದೆ. ಕೆಲ ದಿನಗಳ ಹಿಂದೆ 600 ಕೋಟಿ ರೂ.ಬಾಕಿ ಹಣ ಸರ್ಕಾರ ಬಿಡುಗಡೆ ಮಾಡಿತ್ತು. ಈಗ ಸಿಕ್ಕ ಹಣ ಕಮಿಷನ್ ಹಣ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯದಲ್ಲಿ ಇವತ್ತು ಎಟಿಎಂ ಸರ್ಕಾರ ಕೆಲಸ ಮಾಡುತ್ತಿದೆ. ತೆಲಂಗಾಣದ ಚುನಾವಣೆಗೆ ಸಂಗ್ರಹಿಸಲಾದ ಹಣ ಎನ್ನಲಾಗುತ್ತಿದೆ. ಕೆಲ ಅಧಿಕಾರಿಗಳೇ ಈ ಹಿಂದೆ ರಾಜ್ಯಪಾಲರಿಗೆ ಕಮಿಷನ್ ಬಗ್ಗೆ ದೂರು ಕೊಟ್ಟಿದ್ದರು. ನಾವು ಚುನಾವಣೆ ಹೊತ್ತಲ್ಲೇ ಇದು ಎಟಿಎಂ ಸರಕಾರ ಅಂದಿದ್ದೆವು’ ಎಂದರು.

‘ಸಿಕ್ಕಿದ ಹಣ ಸಂಪೂರ್ಣ ಭ್ರಷ್ಟಾಚಾರದ ಹಣ.ಕಾಂಗ್ರೆಸ್ ದೇಶದಲ್ಲಿ ಬೌದ್ದಿಕವಾಗಿಯೂ ದಿವಾಳಿಯಾಗಿದೆ. ರಾಜ್ಯದಲ್ಲಿ ಆಡಳಿತ ಹಳಿ ತಪ್ಪಿದೆ ಅನ್ನೋದಕ್ಕೆ ಸಾಕ್ಷಿ ಇದು. ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಯಾವುದೇ ಕೆಲಸಕ್ಕೆ ಹಿಂಜರಿಯಲ್ಲ. ಈಗಾಗಲೇ ಎರಡು ಗುತ್ತಿಗೆದಾರರು ಇವರ ಕಿರುಕುಳಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ’ ಎಂದರು.

‘ಐಟಿ ಯಾರ ಒತ್ತಡದಿಂದಲೂ ದಾಳಿಗಳನ್ನು ಮಾಡುವುದಿಲ್ಲ. ಗುತ್ತಿಗೆದಾರರಿಗೆ ಹಣ ಬಿಡುಗಡೆ ಬೆನ್ನಲ್ಲೇ ಇದು ಹಣ ಸಿಕ್ಕಿರೋದು ಅನುಮಾನ ಹುಟ್ಟಿಸಿದೆ’ ಎಂದರು.

‘ವರ್ಗಾವಣೆಗೆ ರೇಟ್ ಫಿಕ್ಸ್ ಆಗಿದೆ ಅನ್ನೋದು ಈಗ ಸ್ಪಷ್ಟವಾಗಿದೆ. ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ರಾಜೀನಾಮೆ ಕೊಡಬೇಕು’ ಎಂದರು.

‘ಇದೊಂದು ಭ್ರಷ್ಟಾಚಾರದ ಹಾಗೂ ಪರ್ಸಂಟೇಜ್ ಸರ್ಕಾರ. ಭ್ರಷ್ಟಾಚಾರಿಗಳ ಬೆಂಗಾವಲಿಗಿರುವ ಕಲೆಕ್ಷನ್ ಮತ್ತು ಎಟಿಎಂ ಸರ್ಕಾರ. ಸುಳ್ಳು ಹೇಳಿ,ಭರವಸೆ ಕೊಟ್ಟು ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಕರ್ನಾಟಕ ಕತ್ತಲೆಯಲ್ಲಿದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆಗುತ್ತಿದೆ. ರೈತರಿಗೆ ವಿದ್ಯುತ್ ಇಲ್ಲ, ನಿದ್ದೆಗೆಟ್ಟರೂ ರೈತರಿಗೆ ಕರೆಂಟ್ ಇಲ್ಲ’ ಎಂದು ಕಿಡಿ ಕಾರಿದರು.