ಎಲ್ಲಾ ಧರ್ಮಗಳು ಮಾನವೀಯತೆಯನ್ನು ಸಾರುತ್ತವೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

8:46 PM, Thursday, June 9th, 2022
Share
1 Star2 Stars3 Stars4 Stars5 Stars
(No Ratings Yet)
Loading...


ಬೆಂಗಳೂರು : ಎಲ್ಲಾ ಧರ್ಮಗಳು ಮಾನವೀಯತೆಯನ್ನು ಸಾರುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ನಗರದ ಹಜ್ ಭವನದಲ್ಲಿ ಹಜ್‍ಯಾತ್ರೆ -2022 ರ ಮೊದಲ ಮೊದಲ ವಿಮಾನಯಾನಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಹಜ್ ಗೆ ಹೋಗಿ ಬಂದ ನಂತರ ಹಾಜಿಯಾಗಿ ಕಟ್ಟುನಿಟ್ಟಿನ ಬದುಕು ನಡೆಸಬೇಕು. ಅತ್ಯಂತ ಶುದ್ಧ ಬದುಕನ್ನು ನಡೆಸಬೇಕು. ಆಗ ಅಲ್ಲಿಗೆ ಹೋಗಿ ಬಂದದ್ದು ಸಾರ್ಥಕವಾಗುತ್ತದೆ. ನಿಮ್ಮ ದುವಾ ಪೂರ್ಣವಾಗಬೇಕಾದರೆ ಒಳ್ಳೆತನದಿಂದ ನಡೆದುಕೊಳ್ಳುವುದು ಅಗತ್ಯ. ಕೆಲವರು ಮಾತ್ರ ಮನುಷ್ಯತ್ವದಿಂದ ನಡೆದುಕೊಂಡು ದೇವಮಾನವರಾಗುತ್ತಾರೆ. ಬದುಕಿನಲ್ಲಿ ಏನಾದರೂ ಪ್ರಾಪ್ತಿಯಾಗಬೇಕಾದರೆ ಒಳ್ಳೆಯ ಗುಣಗಳು ಮತ್ತು ಆಚಾರ ವಿಚಾರಗಳಿಂದ ಮಾತ್ರ ಸಾಧ್ಯ. ಎಲ್ಲಿ ಒಳ್ಳೆತನವಿದೆ ಅಲ್ಲಿ ಭಗವಂತನಿರುತ್ತಾನೆ ಎಂದರು.

ದೇಶದ ಮೇಲೆ ಭಕ್ತಿ ಇರಬೇಕು
ಪ್ರತಿ ಮನುಷ್ಯನಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಇರುತ್ತದೆ. ನಮ್ಮಲ್ಲಿರುವ ಯಾವ ಗುಣ ಅಂತಿಮವಾಗಿ ಜಯಶಾಲಿಯಾಗುತ್ತದೆ ಎನ್ನುವುದು ನಮ್ಮ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಮಾನವೀಯತೆಯ ಆಧಾರದ ಮೇಲೆ ನಡೆದುಕೊಂಡಾಗ ಭಗವಂತನಿಗೆ ಅತ್ಯಂತ ಪ್ರಿಯವಾಗುತ್ತದೆ. ಭಗವಂತನಿಗೆ ಪ್ರೀತಿಯಾಗಿರುವ ಬದುಕನ್ನು ನಾವು ಬದುಕಬೇಕು. ಇದೇ ಎಲ್ಲಾ ಧರ್ಮಗಳ ಸಾರವಾಗಿದೆ. ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನನ್ನು ಪ್ರೀತಿಸಿದಾಗ ಇದು ಸಾಧ್ಯವಾಗುತ್ತದೆ. ಯಾವ ಮಣ್ಣಿನಲ್ಲಿ ಹುಟ್ಟಿರುತ್ತೇವೋ ಆ ದೇಶದ ಮೇಲೆ ಪ್ರೀತಿ ಭಕ್ತಿ ಇರಬೇಕು.
ಹಜ್ ಗೆ ಹೋಗುವವರೆಲ್ಲರೂ ನಾಡು ಸುಭಿಕ್ಷವಾಗಲಿ, ಅಭಿವೃದ್ಧಿಶೀಲವಾಗಲಿ ಎಂದು ಪ್ರಾರ್ಥನೆ ಮಾಡಬೇಕೆಂದು ತಿಳಿಸಿದ ಮುಖ್ಯಮಂತ್ರಿಗಳು, ದೇಶದಲ್ಲಿಯೇ ಅತ್ಯುತ್ತಮವಾಗಿರುವ ಹಜ್ ಭವನ ಕರ್ನಾಟಕದಲ್ಲಿರುವುದು ಹೆಮ್ಮೆಯ ಸಂಗತಿ. ಸರ್ಕಾರ ಇದರ ಅಭಿವೃದ್ಧಿಗೆ ಎಲ್ಲಾ ರೀತಿಯ ಸಹಕಾರವನ್ನು ನೀಡುತ್ತದೆ ಎಂದು ತಿಳಿಸಿದರು.

ಒಳ್ಳೆಯ ನಸೀಬ್ ಇರುವವರಿಗೆ ಹಜ್ ಯಾತ್ರೆ ಪ್ರಾಪ್ತಿಯಾಗುತ್ತದೆ. ಬಹಳಷ್ಟು ಜನರ ಪ್ರಯತ್ನಿಸುತ್ತಾರೆ. ಒಳ್ಳೆಯ ಕೆಲಸವನ್ನು, ವಿಚಾರವನ್ನು ಬದುಕಿನಲ್ಲಿ ಅಳವಡಿಸಿಕೊಂಡರಡ ಹಜ್ ಯಾತ್ರೆ ಸಿಗುತ್ತದೆ. ಹಜ್ ಗೆ ತೆರಳಲಿರುವ ಎಲ್ಲಾ ಯಾತ್ರಾರ್ಥಿಗಳಿಗೆ ಶುಭಾಶಯಗಳನ್ನು ಕೋರಿದರು. ದೇವರ ದರ್ಶನ ಉತ್ತಮವಾಗಿ ಆಗಿ, ಮನೋಕಾಮನೆ ಪೂರ್ತಿಯಾಗಲಿ. ತಮ್ಮ ದುವಾ ಅಲ್ಲಾಹುವಿಗೆ ಮುಟ್ಟಿ ಇಡೀ ಭಾರತ, ವಿಶ್ವಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

ಒಟ್ಟು 450 ಜನ ನಾಳೆ ಮೊದಲ ವಿಮಾನದ ಮೂಲಕ ಹಜ್ ಯಾತ್ರೆ ಕೈಗೊಳ್ಳಲಿದ್ದಾರೆ.

ಸಮಾರಂಭದಲ್ಲಿ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನ ಶಾಪಿ ಸಾದಿ, ಹಜ್ ಕಮಿಟಿ ಅಧ್ಯಕ್ಷ ರವುಫ ಉದ್ದೀನ್ ಕಚೇರೆವಾಲೆ, ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್, ಸಂಸದ ನಾಸೀರ್ ಹುಸೇನ್ , ಮಾಜಿ ಸಚಿವರಾದ ಯು ಟಿ ಖಾದರ್ , ರೋಷನ್ ಬೇಗ್ ಹಜ್ ಕಮಿಟಿ ಸದಸ್ಯರು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English