ವ್ಯಕ್ತಿಯ ಕನಸಲ್ಲಿ ಬಂದ ಗೋಪಾಲಕೃಷ್ಣ ದೇವರು, ಬೆಳ್ತಂಗಡಿಯ ಬಳಿ ಸುಮಾರು 700 ವರ್ಷಗಳ ಹಿಂದಿನ ದೇವಸ್ಥಾನದ ಕುರುಹು ಪತ್ತೆ

5:42 PM, Tuesday, November 7th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ತೆಕ್ಕಾರು ಬಟ್ರಬೈಲು ಎಂಬಲ್ಲಿ 700 ವರ್ಷಗಳ ಹಿಂದಿನ ದೇವಸ್ಥಾನದ ಕುರುಹು ಪತ್ತೆಯಾಗಿದೆ. ಮುಸ್ಲಿಮರ ವಶದಲ್ಲಿದ್ದ ಜಮೀನನ್ನು ಶಾಸಕರ ಮುತುವರ್ಜಿಯಿಂದ ಮತ್ತೆ ಪಡೆದುಕೊಂಡು, ಉತ್ಖನನ ನಡೆಸಿದಾಗ 12ನೇ ಶತಮಾನದ ಎನ್ನಲಾದ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹ ಪತ್ತೆಯಾಗಿದೆ. ಈ ಹಿನ್ನೆಲೆ ಊರವರು ಇಲ್ಲಿ ಭವ್ಯ ದೇವಸ್ಥಾನ ನಿರ್ಮಿಸುವ ಪಣ ತೊಟ್ಟಿದ್ದಾರೆ.

ಬೆಂಗಳೂರು ಮೂಲದ ಲಕ್ಷ್ಮಣ್ ಎಂಬವರು ತೆಕ್ಕಾರಿನಲ್ಲಿ ಜಮೀನು ಖರೀದಿಸಿದ್ದರು. ಇವರಿಗೆ ಬಿದ್ದ ಕನಸಿನಲ್ಲಿ ತಾನು ಖರೀದಿಸಿದ ಜಮೀನಿನ ಪಕ್ಕದಲ್ಲಿರುವ ಮುಸ್ಲಿಂ ವ್ಯಕ್ತಿ ಅಹಮ್ಮದ್ ಬಾವ ಅವರಿಗೆ ಸೇರಿದ ಕೃಷಿ ಜಮೀನಿನಲ್ಲಿ ದೇವಸ್ಥಾನ ಇರುವ ಸುಳಿವು ಸಿಕ್ಕಿದೆ. ಈ ಬಗ್ಗೆ ಲಕ್ಷ್ಮಣ್ ಅವರು ಗ್ರಾಮದ ಜನರಿಗೆ ಮಾಹಿತಿ ನೀಡಿದ್ದರು.

ಅದರಂತೆ ಜ್ಯೋತಿಷಿಗಳ ಮೂಲಕ ಚಿಂತನೆ ನಡೆಸಿದಾಗ ಭೂಗರ್ಭದಲ್ಲಿ ದೇವರಿರುವ ಬಗ್ಗೆ ಸುಳಿವು ಸಿಕ್ಕಿದೆ. ಹೀಗಾಗಿ ಜೆಸಿಬಿ ಮೂಲಕ ಭೂಮಿಯ ಅಗೆತ ನಡೆಸಿದ್ದರು. ಹತ್ತಾರು ಅಡಿ ಅಗೆಯುತ್ತಿದ್ದಂತೆ ಭಗ್ನಗೊಂಡ ಗೋಪಾಲ ಕೃಷ್ಣ ದೇವರ ವಿಗ್ರಹ ಪತ್ತೆಯಾಗಿದೆ.

ಆರಂಭದಲ್ಲಿ ಜಮೀನಿನಲ್ಲಿ ಭೂ ಉತ್ಖನನ ನಡೆಸಿದಾಗ ಕೆಲವು ಕಡೆಗಳಲ್ಲಿ ದೇವರ ವಿಗ್ರಹಗಳು ಕಂಡು ಬಂದಿತ್ತು. ಮುಸ್ಲಿಮರ ವಶದಲ್ಲಿದ್ದ ಜಮೀನಿನಲ್ಲಿ ಸುಮಾರು 12ನೇ ಶತಮಾನದ ಎನ್ನಲಾದ ಗೋಪಾಲಕೃಷ್ಣ ದೇವರ ಕಲ್ಲಿನ ವಿಗ್ರಹ ಪತ್ತೆಯಾಗಿದೆ.

ಇಲ್ಲಿ ಹಿಂದೆ ದೇವಸ್ಥಾನ ಇತ್ತು ಎಂಬ ಮಾತುಗಳನ್ನು ಸ್ಥಳೀಯರು ಆಡಿಕೊಳ್ಳುತ್ತಿದ್ದರು. ಈ ಜಾಗವನ್ನು ಸ್ಥಳೀಯ ಮುಸ್ಲಿಂ ನಿವಾಸಿಯೊಬ್ಬರು ತಮ್ಮ ವಶದಲ್ಲಿ ಇರಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಈ ಭಾಗದ ಜನರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಬಳಿ ಈ ವಿಚಾರವನ್ನು ತಿಳಿಸಿದ್ದರು. ಜಾಗದ ದಾಖಲೆ ಪರಿಶೀಲಿಸುವ ಸಂದರ್ಭದಲ್ಲಿ ಆ ಜಾಗ ಸರ್ಕಾರಿ ಭೂಮಿ ಎಂದು ತಿಳಿದುಬಂದಿತ್ತು.

ಶಾಸಕರು ಅನ್ಯಮತೀಯ ವ್ಯಕ್ತಿಯ ವಶದಲ್ಲಿದ್ದ ಸುಮಾರು 25 ಸೆಂಟ್ಸ್ ಜಾಗವನ್ನು ಧಾರ್ಮಿಕ ದತ್ತಿ ಇಲಾಖೆಗೆ ದಾಖಲೆ ಮಾಡಿಕೊಂಡಿದ್ದರು. ಭೂಮಿ ಧಾರ್ಮಿಕ ದತ್ತಿ ಇಲಾಖೆ ಹೆಸರಿನಲ್ಲಿ ದಾಖಲೆಯಾಗುತ್ತಿದ್ದಂತೆ ಸ್ಥಳೀಯರು ಈ ಭೂಮಿಯಲ್ಲಿ ದೇವಸ್ಥಾನದ ಪಳೆಯುಳಿಕೆಗಳ ಬಗ್ಗೆ ಶೋಧ ನಡೆಸಿದ್ದರು. ಶೋಧನೆ ಮಾಡುತ್ತಾ, ಬಾವಿಯನ್ನು ಅಗೆಯುವ ಸಂದರ್ಭದಲ್ಲಿ ಅದರಲ್ಲಿ ಸುಮಾರು 12 ನೇ ಶತಮಾನಕ್ಕೆ ಸೇರಿದೆ ಎನ್ನಲಾದ ಗೋಪಾಲಕೃಷ್ಣ ಸ್ವಾಮಿಯ ಕಲ್ಲಿನ ವಿಗ್ರಹ ಪತ್ತೆಯಾಗಿದೆ.

ನೂರಾರು ವರ್ಷಗಳ ಹಿಂದೆ ದಂಡಯಾತ್ರೆ ವೇಳೆ ಟಿಪ್ಪು ಸುಲ್ತಾನ್ ದಾಳಿಗೆ ಗೋಪಾಲಕೃಷ್ಣ ದೇವಸ್ಥಾನ ತುತ್ತಾಗಿದೆ ಎನ್ನಲಾಗಿದೆ. ಹತ್ತಾರು ವರ್ಷಗಳ ಹಿಂದೆಯೇ ಗ್ರಾಮದಲ್ಲಿ ದೇವಸ್ಥಾನ ಇರುವ ಬಗ್ಗೆ ಪ್ರಶ್ನಾಚಿಂತನೆ ವೇಳೆ ಬಯಲಾಗಿದೆ.

ಪ್ರಸ್ತುತ ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್​​ ನಿರ್ಮಾಣವಾಗಿದ್ದು ಜಾಗ ದೇವಸ್ಥಾನ ನಿರ್ಮಾಣಕ್ಕೆ ನೀಡಲು ಡಿಸಿಗೆ ಮನವಿ ಮಾಡಲಾಗಿದೆ. ಅದರಂತೆ ಜಿಲ್ಲಾಧಿಕಾರಿ ಧಾರ್ಮಿಕ ದತ್ತಿ ಇಲಾಖೆಗೆ ದೇವಸ್ಥಾನ ನಿರ್ಮಿಸಲು ಜಾಗ ಕಾಯ್ದಿರಿಸಿದ್ದಾರೆ.

ನಿನ್ನೆ ಜೆಸಿಬಿಯಲ್ಲಿ ಉತ್ಖನನದ ವೇಳೆ ಹತ್ತಾರು ಅಡಿ ಆಳದ ಬಾವಿಯಲ್ಲಿ ಕನಸಿನಲ್ಲಿ ಬಂದಂತೆ ಮೂಲ ದೇವರ ವಿಗ್ರಹ ಪತ್ತೆಯಾಗಿದೆ. ಸದ್ಯ ಸುತ್ತಲಿನ ತನ್ನ 75 ಸೆಂಟ್ಸ್ ಜಾಗವನ್ನೂ ಸೌಹಾರ್ದಯುತವಾಗಿ ದೇವಸ್ಥಾನ ಟ್ರಸ್ಟ್​ಗೆ ಅಹಮ್ಮದ್ ಬಾವಾ ಮಾರಾಟ ಮಾಡಿದ್ದಾರೆ.

ಪ್ರಸ್ತುತ ದೇವಸ್ಥಾನವಿದ್ದ 25 ಸೆಂಟ್ಸ್ ಭೂಮಿಯ ಜೊತೆಗೆ ಮತ್ತೆ 75 ಸೆಂಟ್ಸ್ ಭೂಮಿಯನ್ನು ಖರೀದಿಸಲಾಗಿದೆ. ಮುಂದೆ ಊರವರು ಸ್ಥಳದಲ್ಲಿ ಶೀಘ್ರವೇ ಗೋಪಾಲಕೃಷ್ಣ ಭವ್ಯ ದೇವಸ್ಥಾನ ನಿರ್ಮಾಣ ಮಾಡುವ ಸಂಕಲ್ಪ ಮಾಡಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English