ಬಟ್ಟೆ ಅಂಗಡಿಯಲ್ಲಿ ಬಾಲಕಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿಯಾನ್ನಾಗಿಸಿದ ಆರೋಪಿಗೆ 10 ವರ್ಷ ಕಠಿಣ ಸಜೆ

8:04 PM, Thursday, June 23rd, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ತನ್ನ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಮಂಗಳೂರಿನ ಹೆಚ್ಚುವರಿ ಸತ್ರ ಹಾಗೂ ಎಫ್‌ಟಿಎಸ್‌ಸಿ-2 ನ್ಯಾಯಾಲಯ ಅಪರಾಧಿಗೆ 10 ವರ್ಷ ಕಠಿಣ ಸಜೆ, 60 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ಮಂಗಳೂರು ತಾಲೂಕು ಕಂದಾವರ ಗ್ರಾಮದ ಅಬ್ದುಲ್ ಲತೀಫ್ ಆಲಿಯಾಸ್ ಇಚ್ಚಾ(42) ಶಿಕ್ಷೆಗೊಳಗಾದ ಅಪರಾಧಿ.

ಅಬ್ದುಲ್ ಲತೀಫ್ ತೆಂಕ ಉಳೆಪಾಡಿ ಗ್ರಾಮದ ಕೈಕಂಬದಲ್ಲಿ ಬಟ್ಟೆ ಅಂಗಡಿ ಹೊಂದಿದ್ದ. ಅಂಗಡಿಗೆ ಅಪ್ರಾಪ್ತೆ ಕೆಲಸಕ್ಕೆ ಸೇರಿದ್ದಳು. 2017ರ ಏಪ್ರಿಲ್‌ನಲ್ಲಿ ಮಧ್ಯಾಹ್ನ ವೇಳೆ ಬಾಲಕಿ ತಲೆನೋವೆಂದು ಹೇಳಿದಾಗ ಔಷಧ ತರುವುದಾಗಿ ಹೇಳಿದ ಅಬ್ದುಲ್ ಲತೀಫ್ ಯಾವುದೋ ಒಂದು ಮಾತ್ರೆ ಮತ್ತು ಜ್ಯೂಸ್ ತಂದುಕೊಟ್ಟಿದ್ದ. ಅದನ್ನು ಸೇವಿಸಿದ ಬಾಲಕಿ ಪ್ರಜ್ಞೆ ತಪ್ಪಿದ್ದಳು.

ಆ ಸಂದರ್ಭ ಅತ್ಯಾಚಾವೆಸಗಿದ್ದ. ಅನಂತರ ಈ ವಿಚಾರವನ್ನು ಯಾರಿಗೂ ಹೇಳಬಾರದು. ಎಲ್ಲವನ್ನೂ ವಿಡಿಯೋ ಮಾಡಿದ್ದೇನೆ. ಹೇಳಿದರೆ ಅದನ್ನು ವೈರಲ್ ಮಾಡುತ್ತೇನೆ. ನಾನು ಹೇಳಿದಂತೆ ಮುಂದೆಯೂ ಕೇಳಬೇಕು ಎಂದು ಬೆದರಿಕೆ ಹಾಕಿದ್ದ. ಆ ಬಳಿಕ ಬೆದರಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದಳು. ಬಾಲಕಿ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದಾಗ 2017ರ ಆ.11ರಂದು ಬಜ್ಪೆ ಪೊಲೀಸರಿಗೆ ದೂರು ನೀಡಿದ್ದಳು. ನಂತರ ಮಗುವಿಗೆ ಜನ್ಮ ನೀಡಿದ್ದಳು. ಪೊಲೀಸರು ಡಿಎನ್‌ಎ ಪರೀಕ್ಷೆಗೆ ಒಳಪಡಿಸಿದಾಗ ಅಬ್ದುಲ್ ಲತೀಫ್ ಮಗುವಿನ ತಂದೆ ಎಂಬುದು ದೃಢಪಟ್ಟಿತ್ತು.

ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-2 ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ.ರಾಧಾಕೃಷ್ಣ ಅವರು ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿದರು. ನೊಂದ ಬಾಲಕಿ ಮತ್ತು ಆಕೆಯ ಮನೆಯವರು ಪೂರಕ ಸಾಕ್ಷೃ ನುಡಿಯದಿದ್ದರೂ ಡಿಎನ್‌ಎ ವರದಿ, ವೈದ್ಯಕೀಯ ಪ್ರಮಾಣಪತ್ರ ಮತ್ತು ತನಿಖಾಧಿಕಾರಿಗಳ ಸಾಕ್ಷೃವನ್ನು ಪರಿಗಣಿಸಿ ಆರೋಪಿ ತಪ್ಪಿತಸ್ಥನೆಂದು ನ್ಯಾಯಾಧೀಶರು ತೀರ್ಪು ನೀಡಿದರು.

ಆರೋಪಿಗೆ ಸಹಕರಿಸಿದ ಆರೋಪದಲ್ಲಿ ಬಟ್ಟೆ ಅಂಗಡಿಯ ಗೀತಾ ಎಂಬಾಕೆ ಮೇಲೂ ಪ್ರಕರಣ ದಾಖಲಾಗಿತ್ತು. ಆದರೆ ಸಾಕ್ಷಾೃಧಾರದ ಕೊರತೆಯಿಂದ ಆಕೆಯನ್ನು ನ್ಯಾಯಾಧೀಶರು ಪ್ರಕರಣದಿಂದ ಬಿಡುಗಡೆಗೊಳಿಸಿದ್ದಾರೆ.

ಸರ್ಕಾರದ ಪರವಾಗಿ ಹೆಚ್ಚುವರಿ ಸತ್ರ ನ್ಯಾಯಾಲಯ ಹಾಗೂ ಎಫ್‌ಟಿಎಸ್‌ಸಿ-2 ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ಸಿ.ವೆಂಕಟರಣ ಸ್ವಾಮಿ ವಾದಿಸಿದ್ದರು. ಬಜ್ಪೆ ಠಾಣೆ ಅಂದಿನ ಇನ್‌ಸ್ಪೆಕ್ಟರ್‌ಗಳಾದ ಟಿ.ಡಿ.ನಾಗರಾಜ್, ಪರಶಿವ ಮೂರ್ತಿ ಮತ್ತು ಕೆ.ಆರ್.ನಾಯಕ್ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English