ರೆಡ್ ಅಲಟ್೯ ಜಿಲ್ಲೆಗಳಲ್ಲಿ ಸರ್ಕಾರದಿಂದ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳು: ಸಚಿವ ಆರ್. ಅಶೋಕ್

8:41 PM, Thursday, July 7th, 2022
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ರೆಡ್ ಅಲರ್ಟ್ ಘೋಷಣೆಯಾಗಿರುವ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಆರು ಜಿಲ್ಲೆಗಳಲ್ಲಿ ಸರ್ಕಾರದಿಂದ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು ಹಾಗೂ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಹಾಗೂ ಮುಖ್ಯಮಂತ್ರಿಗಳು, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೂ ಈ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಕಂದಾಯ ಸಚಿವರಾದ ಆರ್. ಅಶೋಕ್ ಅವರು ತಿಳಿಸಿದರು.

ಅವರು ಜು.7ರ ಗುರುವಾರ ಸಂಜೆ ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯಲ್ಲಿ ಮುಂದೆ ಕಡಲ್ಕೊರೆತ ಆಗದಂತೆ ಕೈಗೊಳ್ಳಬೇಕಾದ ಶಾಶ್ವತ ಪರಿಹಾರ ಕಾರ್ಯಗಳ ಬಗ್ಗೆ ಜಿಲ್ಲೆಯ ಎಲ್ಲಾ ಶಾಸಕರೊಂದಿಗೆ ಮುಖ್ಯಮಂತ್ರಿಗಳ ಜತೆಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು, ಮಳೆ ಹಾಗೂ ಪ್ರವಾಹದಿಂದಾಗಿ ಮನೆ ಸಂಪೂರ್ಣವಾಗಿ ಹಾನಿಯಾದರೆ ಐದು ಲಕ್ಷ ರೂ.ಗಳು, ಶೇ.50 ರಷ್ಟು ಜಖಂ ಆದಲ್ಲೀ 3 ಲಕ್ಷ, ಬಾಗಶಃ ಹಾನಿಯಾದರೆ ಐವತ್ತು ಸಾವಿರ ಹಾಗೂ ಮನೆಗೆ ನೀರು ನುಗ್ಗಿದರೆ ಹತ್ತು ಸಾವಿರ‌ ರೂ.ಗಳ ಪರಿಹಾರ ನೀಡಲಾಗುವುದು, ಪರಿಹಾರ ನೀಡುವ ಪರಿಷ್ಕೃತ ಆದೇಶವನ್ನು ಬೆಂಗಳೂರಿಗೆ ತೆರಳಿದ ಕೂಡಲೇ ಹೊರಡಿಸಲಾಗುವುದು, ಇದೀಗ ಮನೆ ಕುಸಿದ ಸಂಪೂರ್ಣ, ಬಾಗಶಃ ಹಾನಿಗೀಡಾದ ಪ್ರಕರಣಗಳಲ್ಲಿ ನೀಡಲಾದ ಪರಿಹಾರದಲ್ಲಿನ ವ್ಯತ್ಯಾಸದ ಮೊತ್ತವನ್ನು ಪಾವತಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದ ಕಂದಾಯ ಸಚಿವರು, ಸಂಪೂರ್ಣ ಮನೆ ಹಾನಿಯಾದ ಮೊದಲ ಕಂತು 1 ಲಕ್ಷ ರೂ.ಗಳನ್ನು ಮೂರು ದಿನದೊಳಗೆ ನೀಡಬೇಕು, ಐವತ್ತು ಸಾವಿರ ಪರಿಹಾರವನ್ನು ಒಂದೇ ಬಾರಿ ನೀಡಬೇಕು, ಮನೆಗೆ ನೀರು ನುಗ್ಗಿದ ಪರಿಹಾರ 10 ಸಾವಿರ ರೂ.ಗಳನ್ನು ಒಂದೇ ಬಾರಿ ನೀಡಬೇಕು, ಇದಕ್ಕೆ ಅಧಿಕಾರಿಗಳು ಯಾವುದೇ ಸಬೂಬು ನೀಡಬಾರದು, ಮನೆಗೆ ನೀರು ನುಗ್ಗಿದ ಕೂಡಲೇ ಮನೆಯವರ ಹಾಸಿಗೆ, ಬಟ್ಟೆ, ಆಹಾರ ಧಾನ್ಯಗಳು ಹಾಳಾಗುವ ಕಾರಣ ಕೂಡಲೆ ಪರಿಹಾರ ನೀಡಬೇಕು ಎಂದು ಅವರು ಒತ್ತಿ ಹೇಳಿದರು.

ಕಡಲ್ಕೊರೆತ ತಡೆಗಟ್ಟುವ ನಿಟ್ಟಿನಲ್ಲಿ ಎಡಿಬಿಯಿಂದ ಕೈಗೊಳ್ಳಲಾದ ಕಾಮಗಾರಿಗಳು ಕಳಪೆ ಎಂದು ಕಂಡುಬಂದ ನಿಟ್ಟಿನಲ್ಲಿ ಈಗಾಗಲೇ ಬಂದರು ಸಚಿವರು ತನಿಖೆಗೆ ಸೂಚನೆ ನೀಡಿದ್ದಾರೆ, ಮಳೆ ಹಾಗೂ ಪ್ರವಾಹದಿಂದ ಬೆಳೆ ಹಾನಿಯಾದ ಪರಿಹಾರವನ್ನು ಒಂದು ತಿಂಗಳಲ್ಲಿ ನೀಡಲಾಗುತ್ತಿದೆ, ಪರಿಹಾರದ ಮೊತ್ತ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ ಎಂದರು.

ರಸ್ತೆ ಸಂಚಾರಕ್ಕೆ ತಡೆಯಾದಲ್ಲಿ ಕೂಡಲೇ ತೆರವುಗೊಳಿಸುವ ಕೆಲಸ ಮಾಡಬೇಕು, ಅದಕ್ಕೆ ಬೇಕಾದ ಜೆಸಿಬಿ ಸೇರಿದಂತೆ ಅಗತ್ಯ ಉಪಕರಣಗಳನ್ನು ಸನ್ನದವಾಗಿರಿಸಿಕೊಳ್ಳಬೇಕು, ಅಗ್ನಿಶಾಮಕ ದಳಕ್ಕೆ ಪ್ರತಿಯೊಂದು ತಾಲೂಕಿನಲ್ಲೂ ಪ್ರವಾಹ ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಲು ಬೋಟ್ ,ಟಾರ್ಚ್, ಅಗತ್ಯ ಉಪಕರಣ ಖರೀದಿಸಲು ಅನುದಾನ ನೀಡಲಾಗುವುದು, ತೆರೆಯಲಾಗುವ ಕಾಳಜಿ ಕೇಂದ್ರದಲ್ಲಿ ರುಚಿಕರ ಊಟ, ಉಪಹಾರ ನೀಡಬೇಕು, ಹೋಟೆಲ್ ನಂತೆಯೇ ನೀಡಬೇಕು, ಅದರಂತೆ ಹಾಸಿಗೆ , ಹೊದಿಕೆಗಳನ್ನು ನೀಡಬೇಕು ಎಂದರು.

ಸತತವಾಗಿ ಮಳೆಯಾಗುತ್ತಿರುವ ಕಾರಣ ಭೂ ಕುಸಿತವಾಗುತ್ತದೆ, ಸುಳ್ಯದಲ್ಲಿ ಪರಿಸರದಲ್ಲಿ ಏಳು ಬಾರಿ ಭೂಕಂಪವಾಗಿದ್ದು ಹೈದರಾಬಾದ್ ಹಾಗೂ ಬೆಂಗಳೂರಿನ ಅಧಿಕಾರಿಗಳು ಈ ಬಗ್ಗೆ ಪರಿಶೀಲನೆ ನಡೆಸಿದ್ದು, ರೀಯಾಕ್ಟ್ರ್ ನಲ್ಲಿ ಕಂಪನ ಮೂರರೊಳಗೆ ಇರುವ ಕಾರಣ ಯಾವುದೇ ರೀತಿಯ ಸಮಸ್ಯೆ ಕಂಡು ಬಂದಿಲ್ಲ, ಇಂತಹ ಕಂಪನಕ್ಕೆ ಹೆದರುವ ಅವಶ್ಯಕತೆಯಿಲ್ಲ. ಅತೀ ಕಡಿಮೆ ಪ್ರೀಕ್ವೆನ್ಸಿ ಆದ ಕಾರಣ ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿಸಿದರು.

ಇಂತಹ ಸಂದರ್ಭಗಳಲ್ಲಿ ಎಲ್ಲಾ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು ಹಾಗೂ ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು, ರಜೆ ಪಡೆಯಬಾರದು ಇದು ಸರ್ಕಾರದ ಆದೇಶ ಕೂಡ ಎಂದ ಅವರು ಅಧಿಕಾರಿಗಳು ಜನರ ಕೆಲಸ ಮಾಡಬೇಕು, ದ.ಕ. ಜಿಲ್ಲಾಧಿಕಾರಿಗಳು ಹಾಗೂ ಇಲಾಖಾ ಅಧಿಕಾರಿಗಳಿಂದ ಉತ್ತಮ ಕೆಲಸಗಳಾಗುತ್ತಿದೆ, ಇಂದಿನ ಸಭೆಗೆ ಗೈರಾದ ರಾಷ್ಟ್ರೀಯ ಹೆದ್ದಾರಿ ಯೋಜನಾ ನಿರ್ದೇಶಕರು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಿದರು.

ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ವಿ. ಸುನಿಲ್ ಕುಮಾರ್ ಅವರು ಮಾತನಾಡಿ, ರಾತ್ರಿಯ ಮಳೆ ಹಾಗೂ ಹವಾಮಾನ ಪರಿಸ್ಥಿತಿ ಪರಿಶೀಲಿಸಿ ಶಾಲಾ – ಕಾಲೇಜುಗಳಿಗೆ ರಜೆ ನೀಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದರು.

ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲ ಸಾರಿಗೆ ಸಚಿವರಾದ ಎಸ್. ಅಂಗಾರ ಅವರು ಮಾತನಾಡಿ, ಕಡಲ್ಕೊರೆತ ತಡೆಗಟ್ಟಲು ಎಡಿಬಿಯಿಂದ ನಿರ್ವಹಿಸಿದ ಕಾಮಗಾರಿಗಳ ಬಗ್ಗೆ ತನಿಖೆಗೆ ಸೂಚಿಸಲಾಗಿದೆ, ವರದಿ ಬಂದ ನಂತರ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಸ್ಮಾರ್ಟ್ ಸಿಟಿ ಎಂ.ಡಿ ಪ್ರಶಾಂತ್ ಮಿಶ್ರ ಮಾತನಾಡಿದರು. ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ,ನಗರ ಪೋಲಿಸ್ ಆಯುಕ್ತ ಶಶಿಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಋಷಿಕೇಷ್ ಭಗವಾನ್ ಸೋನಾವಣೆ ವೇದಿಕೆಯಲ್ಲಿದ್ದರು.

ಶಾಸಕರಾದ ವೇದವ್ಯಾಸ್ ಕಾಮತ್, ರಾಜೇಶ್ ನಾಯಕ್, ಯು.ಟಿ. ಖಾದರ್, ಹರೀಶ್ ಪೂಂಜ, ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್, ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English