- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಪುತ್ತೂರು ಬಿಜೆಪಿ ನಾಯಕರ ಪ್ರಬಲ ವಿರೋಧದಿಂದ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಗೆ ತಡೆ

[1]

ಪುತ್ತೂರು: ಬಿಜೆಪಿಗೆ ಬಂಡಾಯವಾಗಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಯನ್ನು 3ನೇ ಸ್ಥಾನಕ್ಕೆ ತಳ್ಳಿದ್ದ ಅರುಣ್ ಕುಮಾರ್ ಪುತ್ತಿಲ ಅವರು ಬಿಜೆಪಿಗೆ ಮರು ಸೇರ್ಪಡೆಯಾಗಲು ಪುತ್ತೂರು ಬಿಜೆಪಿ ಮುಖಂಡರಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಬಿಜೆಪಿ ಸೇರ್ಪಡೆ ತಡೆಹಿಡಿಯಲಾಗಿದೆ.

ಪುತ್ತಿಲ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧೆ ನಡೆಸಿದ ಬಳಿಕ ಪುತ್ತಿಲ ಪರಿವಾರವನ್ನು ಸ್ಥಾಪಿಸಿಕೊಂಡು ತನ್ನ ಅಸ್ತಿತ್ವವನ್ನು ಜಿಲ್ಲಾ ಮಟ್ಟಕ್ಕೆ ವಿಸ್ತರಿಸಿಕೊಳ್ಳುವ ಪ್ರಯತ್ನ ನಡೆಸಿದ್ದರು. ಇದಕ್ಕೆ ಕಡಿವಾಣ ಹಾಕಲು ಅವರನ್ನು ಮತ್ತೊಮ್ಮೆ ಬಿಜೆಪಿಗೆ ಸೇರ್ಪಡೆಗೊಳಿಸಲು ಹಲವಾರು ಬಿಜೆಪಿ ಮುಖಂಡರು ಪ್ರಯತ್ನ ನಡೆಸಿದ್ದರು.

ಬಿ.ವೈ.ವಿಜಯೇಂದ್ರ ಅವರು ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಳಿಕ ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಪುತ್ತಿಲ ಪರಿವಾರದ ಮುಖಂಡರು ಬೆಂಗಳೂರಿಗೆ ತೆರಳಿ ವಿಜಯೇಂದ್ರ ಅವರನ್ನು ಭೇಟಿಯಾಗಿ ಬಂದಿದ್ದರು. ಇದರೊಂದಿಗೆ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಯಾಗುವ ಬಗ್ಗೆ ಸ್ಪಷ್ಟವಾಗಿತ್ತು. ಅಲ್ಲದೆ ಶುಕ್ರವಾರ ಸಂಜೆ ಮಂಗಳೂರಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಧಿಕೃತವಾಗಿ ಬಿಜೆಪಿ ಸೇರುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಪುತ್ತೂರು ಬಿಜೆಪಿ ನಾಯಕರಿಂದ ಕಂಡು ಬಂದ ಪ್ರಬಲ ವಿರೋಧದ ಕಾರಣದಿಂದ ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆಯನ್ನು ಮುಂದೂಡಲಾಗಿದೆ.

ಶುಕ್ರವಾರ ಪುತ್ತೂರು ಬಿಜೆಪಿಯಲ್ಲಿ ನಡೆದ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಅವರಿಗೆ ಯಾವುದೇ ಸ್ಥಾನಮಾನ ನೀಡಬಾರದು, ಅವರ ಅಧಿಕೃತ ಸೇರ್ಪಡೆಗೆ ಮುನ್ನ ಪಕ್ಷದ ಎಲ್ಲ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಪುತ್ತೂರು ಬಿಜೆಪಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವಾ ಗುರುವಾರ ಪುತ್ತಿಲ ಜತೆ ಬೆಂಗಳೂರಿಗೆ ಹೋಗಿರುವುದು ತಪ್ಪು. ಅರುಣ್ ಕುಮಾರ್ ಪುತ್ತಿಲ ಬಿಜೆಪಿಗೆ ಅಧಿಕೃತ ಸೇರ್ಪಡೆಯಾಗುವ ಮುನ್ನ ಪಕ್ಷದ ನಿಯಮಗಳನ್ನು ಪಾಲಿಸಬೇಕು. ಸ್ಥಳೀಯ ಪದಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಅರುಣ್ ಪುತ್ತಿಲರಿಗೆ ಮಂಡಲ ಅಧ್ಯಕ್ಷತೆ ಸೇರಿದಂತೆ ಯಾವುದೇ ಸ್ಥಾನಮಾನ ಈಗ ನೀಡಬಾರದು. ಸಂಘ ಪರಿವಾರ ಮತ್ತು ಸ್ಥಳೀಯ ಬಿಜೆಪಿಯ ಹಿರಿಯರಿಗೆ ಪುತ್ತಿಲ ಪರಿವಾರ ಕಡೆಯಿಂದ ಅವಮಾನವಾಗಿದೆ. ಅದನ್ನು ಸರಿಪಡಿಸಬೇಕು. ಗುರುವಾರ ಅವರು ಬಿಜೆಪಿ ಸೇರ್ಪಡೆಯಾಗಿದ್ದಾರೆ ಎಂಬ ಸುದ್ದಿ ಹರಡಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಹಲವು ಬರಹ ಪೋಸ್ಟ್ ಮಾಡಲಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎಂಬ ಆಗ್ರಹ ವ್ಯಕ್ತವಾಗಿವೆ ಎನ್ನಲಾಗಿದೆ. ಬಿಜೆಪಿ ಸ್ಥಳೀಯ ನಾಯಕರ ಆಗ್ರಹಕ್ಕೆ ಮಣಿದ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ಅರುಣ್ ಕುಮಾರ್ ಪುತ್ತಿಲ ಬಿಜೆಪಿ ಸೇರ್ಪಡೆ ನಿರ್ಧಾರವನ್ನು ಮುಂದೂಡಿರುವುದಾಗಿ ತಿಳಿದು ಬಂದಿದೆ.

ಜಿಲ್ಲಾ ಬಿಜೆಪಿ ಕಚೇರಿ ಮತ್ತು ಚುನಾವಣಾ ಕಚೇರಿಗೆ ತೆರಳಲು ಅರುಣ್ ಕುಮಾರ್ ಪುತ್ತಿಲ ಶುಕ್ರವಾರ ಸಿದ್ಧವಾಗಿದ್ದರು. ಸಂಜೆ ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಪುತ್ತಿಲ ಪರಿವಾರ ಕಚೇರಿಯಲ್ಲಿ ಕುಳಿತು ಮಂಗಳೂರಿಗೆ ತೆರಳಲು ಜಿಲ್ಲಾಧ್ಯಕ್ಷರ ಸಂದೇಶಕ್ಕೆ ಕಾಯುತ್ತಿದ್ದರು ಎನ್ನಲಾಗಿತ್ತು. ಪುತ್ತಿಲ ಪರಿವಾರದ ಕಾರ್ಯಕರ್ತರು ಮಂಗಳೂರಿಗೆ ತೆರಳಲು 40 ಕಾರುಗಳು ಸಿದ್ಧವಾಗಿದ್ದವು. ಈ ನಡುವೆ, ಸಂಜೆ 5.30ರ ಹೊತ್ತಿಗೆ ಪುತ್ತೂರಿಗೆ ಆಗಮಿಸಿದ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅವರು ರಾತ್ರಿ 8 ಗಂಟೆ ತನಕ ಪಕ್ಷದ ಕಚೇರಿಯಲ್ಲಿ ಬಾಗಿಲು ಮುಚ್ಚಿ ಸಭೆ ನಡೆಸಿದರು. ಬಳಿಕ ಹೊರ ಬಂದು ಪುತ್ತಿಲ ಬಿಜೆಪಿ ಸೇರ್ಪಡೆ ಮಾಧ್ಯಮಗಳ ಸೃಷ್ಟಿ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದರು. ಇದರಿಂದಾಗಿ ಪುತ್ತಿಲ ಬಿಜೆಪಿ ಸೇರ್ಪಡೆಗೆ ಮುಖಂಡರ ತಡೆ ಇರುವುದು ಸ್ಪಷ್ಟವಾಗಿದೆ.

ಶುಕ್ರವಾರ ನಡೆದ ಸಭೆಯಲ್ಲಿ ಪಕ್ಷದ ಮುಖಂಡರಾದ ಸುಲೋಚನಾ ಭಟ್, ಪ್ರೇಮಾನಂದ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್, ಮಾಜಿ ಶಾಸಕ ಸಂಜೀವ ಮಠಂದೂರು, ಡಾ.ಎಂ.ಕೆ. ಪ್ರಸಾದ್, ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್, ಒಬಿಸಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್. ಸಿ. ನಾರಾಯಣ್, ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಅಪ್ಪಯ್ಯ ಮಣಿಯಾಣಿ, ಭಾಮಿ ಅಶೋಕ್ ಶೆಣೈ, ರಾಧಾಕೃಷ್ಣ ಬೋರ್ಕರ್ ಜೀವಂಧರ ಜೈನ್, ರಾಜೇಶ್ ಬನ್ನೂರು, ಚಂದ್ರಶೇಖರ ರಾವ್ ಬಪ್ಪಳಿಗೆ, ಅಜಿತ್ ರೈ ಹೊಸಮನೆ, ದಿನೇಶ್ ಪಂಜಿಗ ಮತ್ತಿತರರು ಉಪಸ್ಥಿತರಿದ್ದರು.