ಮಂಗಳೂರು : ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಗೌರವ ನೀಡಿ ಪಕ್ಷದ ಹಿರಿಯ ನಾಯಕರು ಟಿಕೆಟ್ ನೀಡಿದ್ದಾರೆ. ಟಿಕೆಟ್ ಬಳಿಕ ಮತದಾರರನ್ನು ಭೇಟಿಯಾಗಲು ಸಿಕ್ಕಿದ ಕೆಲವೇ ದಿನಗಳ ಕಾಲಾವಧಿಯಲ್ಲಿ ಜಿಲ್ಲೆಯ 6.15 ಲಕ್ಷ ಮತದಾರರ ಮನಸ್ಸು ಗೆಲ್ಲಲು ಸಾಧ್ಯವಾಗಿರುವ ಬಗ್ಗೆ ಖುಷಿ ಇದೆ ಎಂದು ದ.ಕ. ಜಿಲ್ಲಾ ಲೋಕಸಭಾ ಅಭ್ಯರ್ಥಿಯಾಗಿದ್ದ ಪದ್ಮರಾಜ್ ಆರ್. ಪೂಜಾರಿ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಪಕ್ಷ ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಬೂತ್ ಮಟ್ಟದಲ್ಲಿ ಸಂಘಟಿಸುವ ಕಾರ್ಯವನ್ನು ನಡೆಸುವುದಾಗಿ ಹೇಳಿದರು.
ಬಿಜೆಪಿ ಅಭ್ಯರ್ಥಿ ಹಾಗೂ ಸಂಸದರಾಗಿ ಆಯ್ಕೆಯಾದ ಕ್ಯಾ.ಬ್ರಿಜೇಶ್ ಚೌಟರನ್ನು ಅಭಿನಂದಿಸುವುದಾಗಿ ಹೇಳಿದ ಅವರು, ಜಿಲ್ಲೆಯ ಅಭಿವೃದ್ಧಿ ಹಾಗೂ ಕೋಮು ಸೌಹಾರ್ದಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ನೂತನ ಸಂಸದರನ್ನು ಮುಂದೆಯೂ ಎಲ್ಲಾ ರೀತಿಯಲ್ಲಿ ಬೆಂಬಲಿಸಲು ಸದಾ ಸಿದ್ಧನಿರುವುದಾಗಿ ಹೇಳಿದರು.
ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಜಿಲ್ಲೆಯಲ್ಲಿ ಸ್ಪರ್ಧೆಗೆ ಟಿಕೆಟ್ ಪಡೆಯುವ ಸಂದರ್ಭ ಇಲ್ಲಿ ಟಿಕೆಟ್ ಪಡೆಯುವುದು ವ್ಯರ್ಥ ಎಂಬ ಮಾತು ಕೇಳಿ ಬಂದಿತ್ತು. ಹಿಂದಿನ ಅಭ್ಯರ್ಥಿಗಿಂತ ಹೆಚ್ಚಿನ ಮತಗಳನ್ನು ಪಡೆದ ಬಗ್ಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.
ಸೋಲಿನ ನೈತಿಕ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇನೆ. ಆದರೆ ಅದಕ್ಕಾಗಿ ಸುಮ್ಮನಾಗುವುದಿಲ್ಲ. ಪಕ್ಷ ಸಂಘಟನೆಯನ್ನು ಬಲಗೊಳಿಸುವ ಕಾರ್ಯ ಮಾಡುವುದಾಗಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ರಮಾನಾಥ ರೈ, ಶಶಿಧರ ಹೆಗ್ಡೆ, ಶಾಹುಲ್ ಹಮೀದ್, ಶುಭೋದಯ ಆಳ್ವ, ಅಶ್ರಫ್, ಲ್ಯಾನ್ಸಿ ಲೋಟ್ ಪಿಂಟೋ, ಸಂಶುದ್ದೀನ್, ಅಬ್ದುಲ್ ಲತೀಫ್, ಅಬ್ದುಲ್ ಖಾದರ್, ಅಬ್ದುಲ್ ರವೂಫ್, ಸುಹಾನ್ ಆಳ್ವ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English