ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗಬೇಕು – ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

12:47 AM, Sunday, August 14th, 2022
Share
1 Star2 Stars3 Stars4 Stars5 Stars
(No Ratings Yet)
Loading...
ಬಸವರಾಜ ಬೊಮ್ಮಾಯಿ

ಬೆಂಗಳೂರು : ಭವ್ಯ ಭಾರತ ಕಟ್ಟಲು ಯುವಜನತೆ ಸನ್ನದ್ಧರಾಗಬೇಕು. ದೇಶ ಮೊದಲು, ದೇಶದ ನಂತರ ನಾವೆಲ್ಲರೂ ಎಂಬುದನ್ನು ಪ್ರತಿಪಾದಿಸಬೇಕು. ಸಂಕುಚಿತ , ಸ್ವಾರ್ಥ ಮನೋಭಾವನೆಯನ್ನು ತೊರೆದು, ದೇಶಕ್ಕಾಗಿ ನಿಲ್ಲುವ ಕರ್ತವ್ಯ ನಮ್ಮೆಲ್ಲರದ್ದಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯುವಜನತೆಗೆ ಕರೆ ನೀಡಿದರು.

ಅವರು ಇಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ವಿಧಾನಸೌಧದ ಬೃಹತ್ ಮೆಎಟ್ಟಿಲುಗಳ ಮುಂಭಾಗದಲ್ಲಿ ಆಯೋಜಿಸಿದ್ದ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಸ್ವಾತಂತ್ರ್ಯಪೂರ್ವದಲ್ಲಿ ಜನರು ದೇಶಕ್ಕಾಗಿ ಪ್ರಾಣ ಕೊಡುತ್ತಿದ್ದರು. ಈಗ ದೇಶಕ್ಕಾಗಿ ಬದುಕಿ, ದುಡಿಯಬೇಕು. ಭವ್ಯ ಭಾರತದ ನಿರ್ಮಾಣದಲ್ಲಿ ಯುವಕರು ತಮ್ಮ ದುಡಿಮೆಯ ಮೂಲಕ ಪಾಲನ್ನು ನೀಡಬೇಕು. ಇನ್ನು ಮುಂದಿನ 25 ವರ್ಷಗಳ ಕಾಲ ದೇಶಕ್ಕಾಗಿ ನಾನೇನು ಮಾಡಿದ್ದೇನೆ ಎಂಬುದಕ್ಕೆ ಉತ್ತರ ಕಂಡುಕೊಳ್ಳಬೇಕಾಗಿದೆ. ಯುವಕರೆಂದರೆ ಶಕ್ತಿ, ಯುವಕರೆಂದರೆ ಭವಿಷ್ಯ. ನಮ್ಮ ನಾಡಿಗೆ ನವಕರ್ನಾಟಕದಿಂದ ನವಭಾರತ ನಿರ್ಮಾಣ ಮಾಡಬೇಕಿದೆ. ಪ್ರಧಾನಮಂತ್ರಿಗಳು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಸಂಕಲ್ಪ ಮಾಡಿದ್ದು, ಅದಕ್ಕೆ ಕರ್ನಾಟಕದಿಂದ 1 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಕೊಡುಗೆಯನ್ನು ನೀಡುವ ಗುರಿ ಇದೆ ಎಂದರು.

ಭಾರತದ ಶಕ್ತಿ ಇಡೀ ವಿಶ್ವವೇ ಗಮನಿಸುತ್ತಿದೆ :

ಯುವಕರು ಭಾರತದ ಮುಂದಿನ ಭವಿಷ್ಯವನ್ನು ನಿರ್ಮಿಸುವ ಭಾಗ್ಯಶಾಲಿಗಳು. 75 ವರ್ಷ ವ್ಯಕ್ತಿ ಗಾದರೆ ದೊಡ್ಡ ವಯಸ್ಸು. ಅದೇ ದೇಶಕ್ಕಾದರೆ ನವ ತರುಣನ ವಯಸ್ಸು. ಯುವಕರಿಗೆ ಸೇರಿರುವ ಯುವ ದೇಶ ಭವ್ಯ ಭವಿಷ್ಯವಿರುವ ದೇಶ ನಮ್ಮದು. 46 % ಯುವಶಕ್ತಿ ಇರುವ ದೇಶ ಭಾರತ. ಸರ್ಕಾರದ ವತಿಯಿಂದ 1 ಕೋಟಿ 8 ಲಕ್ಷ ಧ್ವಜಗಳನ್ನು ನೀಡಿದ್ದೇವೆ. ಜನ ಸ್ವಪ್ರೇರಣೆಯಿಂದ ಧ್ವಜ ಕೊಂಡಿದ್ದಾರೆ. 25 ಲಕ್ಷ ಮನೆಗಳ ಮೇಲೆ ಧ್ವಜ ಹಾರಾಡುತ್ತಿವೆ. ಪ್ರತಿ ಗ್ರಾಮ, ಮನೆಯಲ್ಲಿ ಧ್ವಜ ಹಾರಾಡುತ್ತಿದೆ. ತ್ರಿವರ್ಣ ದ ಶಕ್ತಿ ಎಲ್ಲರನ್ನು ಒಗ್ಗೂಡಿ ಸುವ ಶಕ್ತಿ ಭಾರತದ ಶಕ್ತಿ ಇಡೀ ವಿಶ್ವವೇ ಗಮನಿಸುತ್ತಿದೆ ಎಂದರು.

ಸ್ವಾತಂತ್ರ್ಯ ಹೋರಾಟಕ್ಕೆ ದಿವ್ಯ ಇತಿಹಾಸವಿದೆ :

ಸ್ವಾತಂತ್ರ್ಯ ಸುಲಭವಾಗಿ ಬಂದಿಲ್ಲ. ಹಲವರ ಹೋರಾಟ, ತ್ಯಾಗ, ಬಲಿದಾನದಿಂದ ಬಂದಿವೆ. ಸಾವಿರಾರು ಜನ ಅನಾಮಧೇಯ ಹೋರಾಟಗಾರರು ಪ್ರಾಣ ತ್ಯಾಗ ಮಾಡಿದ್ದಾರೆ. ಸ್ವಾತಂತ್ರ್ಯ ಎಲ್ಲರ ಹಕ್ಕು. ಹೋರಾಟವೂ ಸಾವಿರಾರು ಅನಾಮಧೇಯರಿಗೆ ಸೇರಿದೆ. ಯಾರದ್ದೇ ಸ್ವತ್ತಲ್ಲ. ಹೋರಾಟದಲ್ಲಿ ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ವಿದ್ಯಾವಂತರು ಎಲ್ಲರೂ ಸೇರಿದ್ದರು. ಸ್ವಾತಂತ್ರ್ಯ ಹೋರಾಟಕ್ಕೆ ದಿವ್ಯ ಇತಿಹಾಸವಿದೆ. ಮೊಟ್ಟ ಮೊದಲು ಸ್ವಾತಂತ್ರ್ಯ ಹೋರಾಟದ ಕಹಳೆಯನ್ನು ಮೊಳಗಿಸಿದ್ದು ಕನ್ನಡ ನಾಡಿನ ಹೆಮ್ಮೆಯ ರಾಣಿ ಕಿತ್ತೂ ರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ. ಸ್ವಾತಂತ್ರ್ಯ ಕ್ಕಾಗಿ ಪ್ರಾಣ ಕೊಟ್ಟವರು ರಾಜ್ಯದಲ್ಲಿ ಇದ್ದಾರೆ. ಮೈಲಾರ.ಮಹಾದೇವಪ್ಪ ಬ್ರಿಟಿಷರ ಗುಂಡಿಗೆ ಬಲಿಯಾದರು. ಸಾಹುಕಾರ ಚೆನ್ನಯ್ಯ, ಇವರನ್ನು ನೆನಪಿಡಬೇಕು. ಇತಿಹಾಸದಲ್ಲಿದ್ದವರು ಭಾರತದ ಭವಿಷ್ಯ ಬರೆದಿದ್ದಾರೆ ಎಂದರು.

ಭಾರತವನ್ನು ಶ್ರೇಷ್ಟವಾಗಿಸುವ ಜವಾಬ್ದಾರಿ ಯುವಕರ ಮೇಲಿದೆ:

ಪ್ರಧಾನ ಮಂತ್ರಿ ನರೇಂದ್ರಮೋದಿ ಅವರು ದೇಶವನ್ನು ದಕ್ಷತೆಯಿಂದ ನಡೆಸುತ್ತಿದ್ದಾರೆ. ಧೀಮಂತ ನಾಯಕ ರಾದ ಅವರು ಸಶಕ್ತ, ಸಂಪದ್ಭರಿತ ಭಾರತ ಕಟ್ಟಲು ಶ್ರಮಿಸುತ್ತಿದ್ದಾರೆ. ಆತ್ಮನಿರ್ಭರ ಭಾರತ ಎಂದು ಕರೆ ಕೊಟ್ಟಿದ್ದಾರೆ. ರೈತರು, ವಿದ್ಯಾರ್ಥಿಗಳು, ಬಡವರು, ಮಹಿಳೆಯರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನುಹಮ್ಮಿಕೊಂಡು ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್,ಸಬ್ ಕಾ ಪ್ರಯಾಸ್’ ಎಂಬುದು ಅವರ ಪ್ರಧಾನಮಂತ್ರಿಯವರ ಮೂಲಮಂತ್ರ. ಸ್ವಾತಂತ್ರ್ಯೋತ್ಸವ 75 ವರ್ಷಗಳ ಮುಂದಿನ 25 ವರ್ಷದ ಅಮೃತಕಾಲ ದಲ್ಲಿ ವಿಶ್ವದಲ್ಲಿ ಭಾರತವನ್ನು ಶ್ರೇಷ್ಟವಾಗಿಸುವ ಜವಾಬ್ದಾರಿ ನಮ್ಮೆಲ್ಲ ಯುವಕರ ಮೇಲಿದೆ. ಇದು ನಮ್ಮ ಬದ್ಧತೆ ಮತ್ತು ಸಂಕಲ್ಪ. ಸಮಬಾಳಿನ, ಸಮಪಾಲಿನ ಭಾರತ ನಿರ್ಮಾಣದ ಸಂಕಲ್ಪ ಮಾಡಬೇಕೆಂದು ಯುವಕರಿಗೆ ಕರೆ ನೀಡಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English