ಬಿಜೆಪಿಯ ವಿಜಯೋತ್ಸವದಲ್ಲಿ ಚೂರಿ ಇರಿತ, 10 ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಿಸಿದ ಪೊಲೀಸರು

5:55 PM, Monday, June 10th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಪ್ರಮಾಣ ವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯ ಬೋಳಿಯಾರ್‌ ಗ್ರಾಮ ಸಮಿತಿಯು ಬೋಳಿಯಾರುದಿಂದ ಧರ್ಮನಗರದವರೆಗೆ ವಿಜಯೋತ್ಸವವನ್ನು ಆಚರಿಸುತ್ತಿರುವ ವೇಳೆ ಬಿಜೆಪಿ ಕಾರ್ಯಕರ್ತರಿಬ್ಬರಿಗೆ ಚಾಕುವಿನಿಂದ ಇರಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರ ಬೇಜವಾಬ್ದಾರಿ ವರ್ತನೆಯನ್ನು ಪ್ರಶ್ನಿಸಿ ಬಿಜೆಪಿ ಮತ್ತು ಹಿಂದೂ ಕಾರ್ಯಕರ್ತರು ಭಾನುವಾರ ತಡರಾತ್ರಿ ಕೊಣಾಜೆ ಪೊಲೀಸ್ ಠಾಣೆಗೆ ಘೇರಾವ್ ಹಾಕಿದ್ದಾರೆ.

ವಿಜಯೋತ್ಸವ ಮೆರವಣಿಗೆ ವೇಳೆ ಮಸೀದಿ ಬಳಿ ಡಿಜೆ ಮ್ಯೂಸಿಕ್ ನುಡಿಸದಂತೆ ಮೆರವಣಿಗೆಯಲ್ಲಿದ್ದವರಿಗೆ ಗ್ಯಾಂಗ್ ಸೂಚನೆ ನೀಡಿತ್ತು. ಇದರಿಂದ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಧರ್ಮನಗರದ ನಿವಾಸಿಗಳಾದ ಹರೀಶ್ ಪೂಜಾರಿ ಹಾಗೂ ಅವರ ಸೋದರ ಮಾವ ನಂದನ್ ಬೈಕ್ ನಲ್ಲಿ ವಿಜಯಯಾತ್ರೆ ಮುಗಿಸಿ ಹಿಂತಿರುಗುತ್ತಿದ್ದ ವೇಳೆ ಮಸೀದಿಯ ಬಳಿ ಯುವಕರ ಗುಂಪೊಂದು ಚಾಕುವಿನಿಂದ ಇರಿದಿದೆ. ಚಾಕುವಿನಿಂದ ಇರಿದ ಬಳಿಕ ತಂಡ ಸ್ಥಳದಿಂದ ಪರಾರಿಯಾಗಿದೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮುಖಂಡ ಸಂತೋಷ್ ರೈ ಬೋಳಿಯಾರ್‌ ಭಾನುವಾರ ತಡರಾತ್ರಿ ಕೊಣಾಜೆ ಠಾಣೆಗೆ ಭೇಟಿ ನೀಡಿದ್ದರು. ಈ ನಡುವೆ ಪೊಲೀಸ್ ಠಾಣೆಗೆ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆ ಕೂಗಿದರು. ಬೋಳಿಯಾರು ಮಸೀದಿ ಬಳಿ ನಡೆದ ಘರ್ಷಣೆಯ ವಿಡಿಯೋದಲ್ಲಿ ಪೊಲೀಸರು ಸಾಕ್ಷ್ಯ ಸಂಗ್ರಹಿಸಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

ಆರೋಪಿಗಳನ್ನು ಶೀಘ್ರವೇ ಬಂಧಿಸುವುದಾಗಿ ಪೊಲೀಸರು ಬಿಜೆಪಿ ಕಾರ್ಯಕರ್ತರಿಗೆ ಭರವಸೆ ನೀಡಿದ ನಂತರ ಠಾಣೆಯಿಂದ ನಿರ್ಗಮಿಸಿದರು.

ಚೂರಿ ಇರಿತ ಘಟನೆ ನಡೆದ ತಕ್ಷಣ ಪತ್ತೆ ಹಚ್ಚಿದ ಪೊಲೀಸರು ಬೋಳಿಯಾರು ಸುತ್ತಮುತ್ತಲಿನ 10 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಇದರಲ್ಲಿ ಚೂರಿ ಇರಿತ ಘಟನೆಯಲ್ಲಿದ್ದ ಮೂವರು ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಬೋಳಿಯಾರ್ ಮಸೀದಿ ಎದುರು ವಿಜಯೋತ್ಸವ ಮೆರವಣಿಗೆ ಸಾಗಿದ ವೇಳೆ ನಡೆದ ಮಾತಿನ ಚಕಮಕಿಯ ಸಿಸಿಟಿವಿ ದೃಶ್ಯಾವಳಿ ಲಭ್ಯವಾಗಿದೆ. ಮೆರವಣಿಗೆಯಲ್ಲಿದ್ದ ಇಬ್ಬರು ಯುವಕರನ್ನು ಬೋಳಿಯಾರ್‌ನ ಸಮಾಧಾನ್‌ ಬಾರ್‌ವರೆಗೆ ಹಿಂಬಾಲಿಸಿ ಅಲ್ಲಿ ಗಲಾಟೆ ಎಬ್ಬಿಸಿ ಇಬ್ಬರು ಬಿಜೆಪಿ ಕಾರ್ಯಕರ್ತರಿಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಹೇಳಲಾಗಿದೆ .

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English