- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಬಿಜೆಪಿ ಸರಕಾರ ಇಕ್ಕಟ್ಟಿನಲ್ಲಿ 20 ಮಂದಿ ಬಿಜೆಪಿ ಶಾಸಕರ ಬೆಂಬಲ ವಾಪಸ್

yeddyurappa [1]ಬೆಂಗಳೂರು : ಬಂಡಾಯದ ಬಾವುಟ ಹಾರಿಸಿರುವ  20 ಮಂದಿ ಬಿಜೆಪಿ ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಪತ್ರವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ಗೆ ಸಲ್ಲಿಸಿದ್ದಾರೆ.
ಆರು ಪಕ್ಷೇತರ ಶಾಸಕರು ಸೇರಿದಂತೆ ಒಟ್ಟು 20 ಮಂದಿ  ಬಿಜೆಪಿ ಶಾಸಕರು ಪಕ್ಷೇತರ ಸಚಿವ ನರೇಂದ್ರ ಸ್ವಾಮಿ ಮೂಲಕ ಬೆಂಬಲ ವಾಪಸ್ ಪಡೆದ ಪತ್ರವನ್ನು ರಾಜ್ಯಪಾಲರಿಗೆ ತಲುಪಿಸಿದ್ದಾರೆ.
ಕಮಲದ  ಭಿನ್ನಮತ ಉಂಟು ಮಾಡಲು ಸಫಲರಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ  ಎಚ್ ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವ ಆಕಾಂಕ್ಷೆಯಲ್ಲಿದ್ದಾರೆ.
ಸಂಜೆಯೊಳಗೆ ಸುಮಾರು 35 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಬಾಂಬ್‌ವೊಂದನ್ನು ಸಿಡಿಸಿದ್ದಾರೆ!  ಇಬ್ಬರು ಶಾಸಕರ ಜೊತೆ ರಾಜಭವನದತ್ತ ಹೆಜ್ಜೆ ಹಾಕಿದ್ದಾರೆ.
ಬಂಡಾಯ ಶಾಸಕರು  ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ವಿರುದ್ಧ ಅಸಮಾಧಾನಗೊಂಡಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದಿಲ್ಲ ಎಂಬರ್ಥದ ಈಶ್ವರಪ್ಪ ಹೇಳಿಕೆ ಅವರಲ್ಲಿ ಆಕ್ರೋಶ ಮೂಡಿಸಲು ಕಾರಣವಾಗಿದೆ.
ಗೂಳಿಹಟ್ಟಿ ಶೇಖರ್ ಅವರನ್ನು ಸಂಪುಟಕ್ಕೆ ವಾಪಸ್ ತೆಗೆದುಕೊಳ್ಳಬೇಕು, ಬೇಳೂರು ಗೋಪಾಲಕೃಷ್ಣ ಅವರಿಗೆ ಸಚಿವ ಸ್ಥಾನ ನೀಡಬೇಕು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೇಡು ಬಿಟ್ಟು ಪಕ್ಷದಿಂದ ಟಿಕೆಟ್ ನೀಡುವ ಗ್ಯಾರಂಟಿ ನೀಡಬೇಕು, ತಮ್ಮ ಗುಂಪಿನ ಶಾಸಕರಿಗೆ ಪ್ರಮುಖ ನಿಗಮ ಮಂಡಳಿಗಳಿಗೆ ನೇಮಕ ಮಾಡಬೇಕು ಎಂಬ ಮೊದಲಾದ ಬೇಡಿಕೆಗಳನ್ನು ಮುಖ್ಯ ಮಂತ್ರಿಗಳ ಮುಂದಿಟ್ಟಿದ್ದಾರೆ.
ಸಚಿವ ರೇಣುಕಾಚಾರ್ಯ ನೇತೃತ್ವದಲ್ಲಿ ಬಂಡಾಯದ ಕಹಳೆ ಮೊಳಗಿಸಿರುವ ಶಾಸಕರು ಚೆನ್ನೈನ ಫಾರ್ಚೂನ್ ಫಾರ್ಮ್ ಹೋಟೆಲ್‌ನಲ್ಲಿ ಠಿಕಾಣಿ ಹೂಡಿದ್ದಾರೆ. ಮತ್ತೊಂದೆಡೆ ಸಂಧಾನಕ್ಕಾಗಿ ಆಗಮಿಸಿದ್ದ ಸಚಿವ ಶ್ರೀರಾಮುಲು, ಆರ್.ಅಶೋಕ್, ಸಂಸದ ಸಿದ್ದೇಶ್ ಕೂಡ ಇದೇ ಹೊಟೇಲ್‌ನಲ್ಲಿ ವಾಸ್ತವ್ಯ ಹೂಡಿ ಮಾತುಕತೆ ನಡೆಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದುಬಂದಿದೆ.
ಜೆಡಿಎಸ್ ಮುಖಂಡರಾದ ಜಮೀರ್ ಅಹ್ಮದ್ ಖಾನ್ ಬಿಜೆಪಿ ಅತೃಪ್ತ ಶಾಸಕರನ್ನು ಮಾತುಕತೆ ನಡೆಸಿ ಮುಂದಿನ ರಾಜಕೀಯ ನಡೆಯ ಬಗ್ಗೆ ಚರ್ಚಿಸಿದ್ದಾರೆ,  ಅತೃಪ್ತರೆಲ್ಲರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳುವ ಮೂಲಕ ರಹಸ್ಯ ಮಾತುಕತೆ ನಡೆಸಿದ್ದಾರೆ.
ಸಂಜೆ ವೇಳೆಗೆ ಮುಖ್ಯ ಮಂತ್ರಿಗಳು ರಾಜ್ಯ ಪಾಲರನ್ನು ಭೇಟಿ ಮಾಡಿ ರಾಜಕೀಯ ಬೆಳವಣಿಗೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಜನಾರ್ಧನ ರೆಡ್ಡಿ ಯವರು ಅತೃಪ್ತ ಶಾಸಕರನ್ನು ಮನವೊಲಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ.