ವಿದ್ಯಾರ್ಥಿ ಮತ್ತು ಶಿಕ್ಷಕರನ್ನು ರೂಪಿಸುವಲ್ಲಿ ಗ್ರಂಥಪಾಲಕರ ಜವಾಬ್ದಾರಿ ಮಹತ್ವದ್ದು: ಡಾ.ಎನ್.ನರಸಿಂಹ ಮೂರ್ತಿ

11:44 PM, Sunday, August 18th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು: ಯಾವುದೇ ವೃತ್ತಿ, ವಿಚಾರ ಕ್ಷುಲ್ಲಕವಲ್ಲ. ಬದುಕಿನಲ್ಲಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಲು ಗ್ರಂಥಪಾಲಕ ವೃತ್ತಿ ಶ್ರೇಷ್ಠವಾದದ್ದು. ಒಂದು ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿ ಮತ್ತು ಶಿಕ್ಷಕನ ಸರ್ವತೋಮುಖ ಅಭಿವೃದ್ಧಿಯಲ್ಲಿ ಗ್ರಂಥಪಾಲಕರ ಪಾತ್ರ ಹಿರಿದು, ಎಂದು ನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎನ್.ನರಸಿಂಹ ಮೂರ್ತಿ ತಿಳಿಸಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಗ್ರಂಥಾಲಯ ಸಂಘ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ (ಐಕ್ಯೂಎಸಿ) ವತಿಯಿಂದ ಇತ್ತೀಚೆಗೆ ನಡೆದ ರಾಷ್ಟ್ರೀಯ ಗ್ರಂಥಪಾಲಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಾವು ವೃತ್ತಿಪರರಾಗಿದ್ದಾಗ, ಪ್ರಾಮಾಣಿಕರಾಗಿದ್ದಾಗ, ನಮ್ಮ ಶಕ್ತಿಯ ಕುರಿತು ಅಭಿಮಾನ ಇದ್ದಾಗ ನಾವು ಯಾರಿಗೂ ಕಡಿಮೆಯಲ್ಲ. ಸಮಾಜದೊಂದಿಗೆ ಉತ್ತಮ ಸೌಹಾರ್ದ ಬೆಳೆಸಿಕೊಳ್ಳಿ. ದೃಢ ವಿಶ್ವಾಸದಿಂದ ವೃತ್ತಿ ಮುಂದುವರೆಸಿ, ಎಂದು ಗ್ರಂಥಪಾಲಕರಿಗೆ ಅವರು ಶುಭಹಾರೈಸಿದರು. ಎಸ್.ಎನ್ ರಂಗನಾಥನ್ ವಿಚಾರಗಳನ್ನು ಅನುಸರಿಸಿದಾಗ ಗ್ರಂಥಾಲಯದೊಂದಿಗೆ ನಾವೂ ಬೆಳೆಯಲು ಸಾಧ್ಯ ಎಂದು ತಿರುಪತಿ ನ್ಯಾಷನಲ್ ಸಂಸ್ಕೃತ ವಿಶ್ವವಿದ್ಯಾನಿಲಯ ಗ್ರಂಥಪಾಲಕ ಡಾ. ವಸಂತ ಎನ್, ಹೇಳಿದರು.

ಪ್ರಾಂಶುಪಾಲ ಡಾ.ಗಣಪತಿ ಗೌಡ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯದಿಂದ ಸಿಗುವ ಜ್ಞಾನ ಗೂಗಲ್ ನೀಡುವ ಜ್ಞಾನಕ್ಕೆ ಸಮವಷ್ಟೇ ಎಂಬ ಮೂಡನಂಬಿಕೆ ಹೊಂದಿದ್ದಾರೆ. ವಿಧ್ಯಾರ್ಥಿ ಸಮೂಹಕ್ಕೆ ಜ್ಞಾನ ಭಂಡಾರ ಒದಗಿಸಲು ಗ್ರಂಥಪಾಲಕರಾಗಿ ನಿರ್ವಹಿಸಬೇಕಾದ ಕರ್ತವ್ಯ ಬಹಳಷ್ಟಿದೆ. ಒಂದು ಗ್ರಂಥಾಲಯದ ಗ್ರಂಥಪಾಲಕ ವಿಧ್ಯಾರ್ಥಿ ಮತ್ತು ಶಿಕ್ಷಕನ ಓದಿನ ಆಸಕ್ತಿ ಹೆಚ್ಚಿಸಲು ಕಾರಣಕರ್ತನಾಗಬೇಕು, ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಿವೃತ್ತರನ್ನು ಮತ್ತು ಪದೋನ್ನತಿ ಪಡೆದವರನ್ನು ಗೌರವಿಸಲಾಯಿತು. ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾ ಗ್ರಂಥಾಲಯ ಸಂಘದ ಅಧ್ಯಕ್ಷ ಡಾ. ವಾಸಪ್ಪ ಗೌಡ, ಕಾರ್ಯದರ್ಶಿ ರಾಮ ಕೆ, ಐಕ್ಯೂಎಸಿ ಸಂಯೋಜಕ ಡಾ. ಸಿದ್ಧರಾಜು ಎಂ ಎನ್, ಗ್ರಂಥಪಾಲಕಿ ಡಾ.ವನಜಾ ಬೋಳೂರ್ ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English