ಮಂಗಳೂರು: ಬಿಗ್ ಬಾಸ್ ರೂಪೇಶ್ ಶೆಟ್ಟಿ ಹಾಗೂ ತಂಡದ ತುಳು ಚಲನ ಚಿತ್ರ “ಜೈ” ಇದರ ಟೈಟಲ್ ಅನಾವರಣ ಕಾರ್ಯಕ್ರಮ ಆದಿತ್ಯವಾರ ಸಂಜೆ ಸಿಟಿ ಸೆಂಟರ್ ಮಾಲ್ ನಲ್ಲಿ ಜರುಗಿತು. ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್, ಮಂಗಳೂರು ಸಂಸದ ಕ್ಯಾಪ್ಟನ್ ಬೃಜೇಶ್ ಚೌಟ, ದಕ್ಷಿಣ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಬಳಿಕ ಮಾತಾಡಿದ ಸ್ಪೀಕರ್ ಯು.ಟಿ.ಖಾದರ್ ಅವರು, “ಹಿಂದೆ ತುಳು ಭಾಷೆ ನಮ್ಮ ಜಿಲ್ಲೆಗೆ ಮಾತ್ರ ಸೀಮಿತ ಎಂಬ ಮಾತಿತ್ತು. ಆದರೆ ಇಂದು ತುಳು ರಂಗಭೂಮಿ ಮತ್ತು ಸಿನಿಮಾರಂಗದಿಂದಾಗಿ ವಿದೇಶಗಳಲ್ಲೂ ತುಳು ಭಾಷೆ ಪ್ರಚಾರವಾಗುತ್ತಿದೆ. ರೂಪೇಶ್ ಶೆಟ್ಟಿ ಅವರಂತಹ ಯುವಕರು ಇಂದು ತುಳು ಭಾಷೆಯ ಬೆಳವಣಿಗೆಗೆ ಶ್ರಮಪಡುತ್ತಿದ್ದಾರೆ ಅವರಿಗೆ ಶುಭಾಶಯಗಳು. ಸಿನಿಮಾ ಒಳ್ಳೆಯ ರೀತಿಯಲ್ಲಿ ಮೂಡಿಬಂದು ಜನರ ಮನ ಗೆಲ್ಲಲಿ“ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಂಸದ ಬೃಜೇಶ್ ಚೌಟ ಮಾತನಾಡಿ, ”ತುಳು ಭಾಷೆಯ ಮೇಲೆ ಮಮತೆ ಇಟ್ಟು ಸಿನಿಮಾ ಮಾಡಿದ್ದಾರೆ. ಇಂದು ಬಿಡುಗಡೆಯಾದ ಟೈಟಲ್ ಟೀಸರ್ ಭರವಸೆ ಹುಟ್ಟಿಸುವಂತಿದೆ, ಎಲ್ಲರಿಗೂ ಶುಭವಾಗಲಿ“ಎಂದರು.
ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ”ಸಿನಿಮಾದ ಟೀಸರ್ ಅದ್ಭುತವಾಗಿ ಮೂಡಿಬಂದಿದೆ. ಇವತ್ತು ಒನ್ಸ್ ಮೋರ್ ಎಂದರೆ ಪ್ರಯೋಜನವಿಲ್ಲ ಸಿನಿಮಾ ಬಂದಾಗ ತುಳುವರು ಸಿನಿಮಾ ಥಿಯೇಟರ್ ಹೋಗಿ ಸಿನಿಮಾ ನೋಡಿ ಜೈ ಹೇಳಬೇಕು ಆಗ ಅವರ ಶ್ರಮ ಸಾರ್ಥಕ“ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತೆಲಿಕೆದ ಬೊಳ್ಳಿ ದೇವದಾಸ ಕಾಪಿಕಾಡ್, ಪ್ರಕಾಶ್ ಪಾಂಡೇಶ್ವರ್, ಪಮ್ಮಿ ಕೊಡಿಯಾಲ್ ಬೈಲ್, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಭೋಜರಾಜ ವಾಮಂಜೂರು, ಶರ್ಮಿಳಾ ಕಾಪಿಕಾಡ್, ತಮ್ಮ ಲಕ್ಷ್ಮಣ್, ಲಕ್ಷ್ಮಣಕುಮಾರ್ ಮಲ್ಲೂರು, ತಾರಾನಾಥ ಶೆಟ್ಟಿ ಬೋಳಾರ, ಪ್ರೇಮ್ ಶೆಟ್ಟಿ ಸುರತ್ಕಲ್ ಮತ್ತಿತರರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.
ಜೈ ತುಳು ಸಿನಿಮಾ ಆರ್ ಎಸ್ ಸಿನಿಮಾಸ್, ಶೂಲಿನ್ ಫಿಲಂಸ್, ಮುಗ್ರೋಡಿ ಪ್ರೊಡಕ್ಷನ್ ಲಾಂಛನದಲ್ಲಿ ತಯಾರಾಗುತ್ತಿದೆ. ರೂಪೇಶ್ ಶೆಟ್ಟಿ ನಿರ್ದೇಶನದ ಸಿನಿಮಾಕ್ಕೆ ಪ್ರಸನ್ನ ಶೆಟ್ಟಿ ಬೈಲೂರು ಕತೆ, ಸಂಭಾಷಣೆ ರಚಿಸಿದ್ದಾರೆ. ಕ್ಯಾಮರಾ ವಿನುತ್ ಕೆ, ಸಂಗೀತ ಲೊಯ್ ವೆಲೆಂಟಿನ್ ಸಲ್ದಾನ, ಸಂಕಲನ ರಾಹುಲ್ ವಸಿಷ್ಠ, ನೃತ್ಯ ನವೀನ್ ಶೆಟ್ಟಿ ಆರ್ಯನ್ಸ್, ನಿರ್ಮಾಪಕರು ಅನಿಲ್ ಶೆಟ್ಟಿ, ಸುಧಾಕರ ಶೆಟ್ಟಿ ಮುಗ್ರೋಡಿ, ಮಂಜುನಾಥ ಅತ್ತಾವರ, ಸಹ ನಿರ್ಮಾಪಕರು ದೀಕ್ಷಿತ್ ಆಳ್ವ, ಎಕ್ಸಿಕ್ಯೂಟಿವ್ ಪ್ರೊಡ್ಯುಸರ್ ನವೀನ್ ಶೆಟ್ಟಿ. ‘ಜೈ ಒಯಿಕ್ಲಾ ಸೈ” ಸಿನಿಮಾದಲ್ಲಿ ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಭೋಜರಾಜ ವಾಮಂಜೂರು, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಉಮೇಶ್ ಮಿಜಾರ್ ಮೊದಲಾದವರು ಅಭಿನಯಿಸಲಿದ್ದು, ಉಳಿದ ತಾರಾಗಣದ ಆಯ್ಕೆ ನಡೆಯಲಿದೆ. ಅಕ್ಟೋಬರ್ ನಲ್ಲಿ ಸಿನಿಮಾದ ಚಿತ್ರೀಕರಣ ನಡೆಯಲಿದೆ.
Click this button or press Ctrl+G to toggle between Kannada and English