ಬಂಟ್ವಾಳ: ಹಿರಿಯ ಯಕ್ಷಗಾನ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಬೆಂಗಳೂರಿನಲ್ಲಿ ಅ.21ರಂದು ಬೆಳಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.
ಅವರಿಗೆ 67 ವರ್ಷ ವಯಸ್ಸಾಗಿತ್ತು. ಬೆಂಗಳೂರಿನಲ್ಲಿ ಯಕ್ಷಗಾನ ಕಾರ್ಯಕ್ರಮವೊಂದಕ್ಕೆ ಭಾಗವಹಿಸಲು ಆಗಮಿಸಿದ್ದ ಅವರಿಗೆ ಮುಂಜಾನೆ ನಾಲ್ಕು ಗಂಟೆಗೆ ಹೃದಯಸ್ತಂಭನವಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆಗೆ ಸ್ಪಂಧಿಸದೆ ನಿಧನ ಹೊಂದಿದ್ದಾರೆ. 1957, ಅಕ್ಟೋಬರ್ 12ರಂದು ಬಂಟ್ವಾಳ ಗಣಪತಿ ಆಚಾರ್ಯ, ಭವಾನಿ ಅಮ್ಮ ಅವರ ಪುತ್ರರಾಗಿ ಜನಿಸಿದ ಜಯರಾಮ ಆಚಾರ್ಯರು, ಬಂಟ್ವಾಳ ಸರಕಾರೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾಭ್ಯಾಸ ನಡೆಸಿ, ತಂದೆಯವರ ಪ್ರೇರಣೆಯಿಂದ ಅಮ್ಟಾಡಿ, ಸೊರ್ನಾಡು ಮೇಳಗಳಲ್ಲಿ ತಿರುಗಾಟ ನಡೆಸಿ ಕಲಾವಿದರಾಗಿ ಸೇವೆಯನ್ನುಮಾಡಿದ್ದರು.
ಬಳಿಕ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿದ್ದ `ಲಲಿತ ಕಲಾ ಕೇಂದ್ರ’ಕ್ಕೆ ಸೇರಿ ಯಕ್ಷಗಾನ ಹೆಜ್ಜೆಗಾರಿಕೆ ಕಲಿತರು. ಅದಾದ ಬಳಿಕ ಕಟೀಲು ಮೇಳದಲ್ಲಿ 4 ವರ್ಷ, ಪುತ್ತೂರು ಮೇಳ, ಕದ್ರಿ ಮೇಳ, ಕುಂಬಳೆ ಮೇಳದಲ್ಲಿ ತಿರುಗಾಟ ನಡೆಸಿದರು. ಮತ್ತೆ ಕಟೀಲು ಮೇಳ, ಎಡನೀರು ಮೇಳ, ಹೊಸನಗರ ಮೇಳ, ಬಳಿಕ ಹನುಮಗಿರಿ ಮೇಳ ಹೀಗೆ ಸುಮಾರು 50 ವರ್ಷಗಳ ಯಕ್ಷಗಾನ ತಿರುಗಾಟದಲ್ಲಿ ಹಾಸ್ಯಗಾರ ಪಾತ್ರವಲ್ಲದೆ, ಅಗತ್ಯ ಬಿದ್ದರೆ ಇತರ ಪಾತ್ರಗಳನ್ನೂ ಅವರು ನಿರ್ವಹಿಸಿದ್ದಾರೆ.
ಜಯರಾಮ ಆಚಾರ್ಯರ ನಿಧನಕ್ಕೆ ಯಕ್ಷಗಾನ ದಿಗ್ಗಜರು, ಕಲಾಭಿಮಾನಿಗಳು, ಸಮಾಜದ ಗಣ್ಯರು ಕಂಬನಿ ಮಿಡಿದಿದ್ದಾರೆ.
Click this button or press Ctrl+G to toggle between Kannada and English