ಬೆಳ್ತಂಗಡಿ: ಕರ್ನಾಟಕದ ಪುಣ್ಯ ಕ್ಷೇತ್ರಗಳಲೊಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಭಗವಾನ್ ಶ್ರೀ ಮಂಜುನಾಥ ಸ್ವಾಮಿಯ ಲಕ್ಷದೀಪೋತ್ಸವ ಹಾಗೂ ಸರ್ವಧರ್ಮ ಮತ್ತು ಸಾಹಿತ್ಯ ಸಮ್ಮೇಳನದ 90ನೇ ಅಧಿವೇಶನವು ನ.19ರಿಂದ ನ.23ರ ವರೆಗೆ ನೆರವೇರಲಿದೆ.
ಕಾರ್ಯಕ್ರಮಗಳು ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಉಪಸ್ಥಿತಿಯಲ್ಲಿ ನಡೆಯಲಿದ್ದು ನ.19ರಂದು ಹೊಸ ಕಟ್ಟೆ ಉತ್ಸವ ಹಾಗೂ ವಸ್ತು ಪ್ರದರ್ಶನ ಉದ್ಘಾಟನೆಗೊಳ್ಳಲಿದೆ. ನ. 20ರಂದು ಕರೆ ಕಟ್ಟೆ ಉತ್ಸವ, ನ. 21ರಂದು ಲಲಿತೋದ್ಯಾನ ಉತ್ಸವ ಹಾಗೂ ಲಲಿತಕಲಾ ಗೋಷ್ಠಿ, ನ.22ರಂದು ಕಂಚಿಮಾರು ಕಟ್ಟೆ ಉತ್ಸವ ಹಾಗೂ ಸರ್ವಧರ್ಮ ಸಮ್ಮೇಳನ ನಡೆಯಲಿದೆ. ನ.23ರಂದು ಗೌರಿಮಾರುಕಟ್ಟೆ ಉತ್ಸವ ಹಾಗೂ ಸಾಹಿತ್ಯ ಸಮ್ಮೇಳನ ಹಾಗೂ ನ.24ರಂದು ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜೆ ನೆರವೇರಲಿದೆ.
ನ. 22ರಂದು ಸಂಜೆ 5ಕ್ಕೆ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸರ್ವಧರ್ಮ ಸಮ್ಮೇಳನವನ್ನು ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯದ ಸಚಿವೆ ಸ್ಮತಿ ಇರಾನಿ ಉದ್ಘಾಟಿಸಲಿದ್ದಾರೆ. ಶಿವಮೊಗ್ಗದ ನ್ಯಾಯವಾದಿ ಎಂ.ಆರ್. ಸತ್ಯನಾರಾಯಣ ಅಧ್ಯಕ್ಷತೆ ವಹಿಸುವರು. ಬಸ್ರಿಕಟ್ಟೆ ಧರ್ಮಗುರು ಫಾ| ಮಾರ್ಸೆಲ್ ಪಿಂಟೋ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಾಸಿಂಪೀರ ಇ ವಾಲೀಕಾರ, ವಿಶ್ರಾಂತ ಮುಖ್ಯೋಪಾಧ್ಯಾಯ ಮತ್ತು ವಾಗ್ಮಿ ಮೂಡುಬಿದಿರೆಯ ಮುನಿರಾಜ ರೆಂಜಾಳ ಉಪನ್ಯಾಸ ನೀಡಲಿದ್ದಾರೆ.
ಸಾಹಿತ್ಯ ಸಮ್ಮೇಳನವನ್ನು ಸಂಜೆ 5ಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಶ್ರೇಷ್ಠ ಚಲನಚಿತ್ರ ನಿರ್ದೇಶಕ ಬೆಂಗಳೂರಿನ ಪಿ.ಶೇಷಾದ್ರಿ ಉದ್ಘಾಟಿಸಲಿದ್ದು, ರಾಷ್ಟ್ರಪ್ರಶಸ್ತಿ ಪುರಸ್ಕೃತ ವಿದ್ವಾಂಸ ಡಾ| ಎಚ್.ವಿ. ನಾಗರಾಜ ರಾವ್ ಮೈಸೂರು ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ಸಾಹಿತ್ಯ ಪರಿಚಾರಕ ಮತ್ತು ಸುಶಿಕ್ಷಣ ಸೇವಾಪರ ಸಂಸ್ಥೆಯ ಸ್ಥಾಪಕ ಸತ್ಯೇಶ್ ಎನ್. ಬೆಳ್ಳೂರು, ಪತ್ರಕರ್ತ ರವೀಂದ್ರ ಭಟ್ ಐನಕೈ, ಲೇಖಕ ಡಾ| ಗೀತಾ ವಸಂತ ಮೊದಲಾದವರು ಉಪನ್ಯಾಸ ನೀಡಲಿದ್ದಾರೆ.
ವಸ್ತು ಪ್ರದರ್ಶನವನ್ನು ನ.19ರಂದು ಬೆಳಗ್ಗೆ 10.30ಕ್ಕೆ ಶಾಸಕ ಹರೀಶ್ ಪೂಂಜ ಉದ್ಘಾಟಿಸಲಿದ್ದಾರೆ. ವಸ್ತುಪ್ರದರ್ಶನ ಮಂಟಪ ಮತ್ತು ಅಮೃತವರ್ಷಿಣಿ ಸಭಾಭವನದಲ್ಲಿ ಪ್ರತಿ ದಿನವೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿವೆ. ನ.21ರಂದು ಅಮೃತವರ್ಷಿಣಿ ಸಭಾಭವನದಲ್ಲಿ ಲಲಿತಕಲಾಗೋಷ್ಠಿ ನಡೆಯಲಿದೆ. ರಾತ್ರಿ 8.30ರಿಂದ ವಿದುಷಿ ಡಾ| ಜಯಂತಿ ಮತ್ತು ಕುಮರೇಶ್ ಮತ್ತು ತಂಡದವರಿಂದ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ.
ನ. 24ರಂದು ಸಂಜೆ 6.30 ರಿಂದ ಶ್ರೀ ಚಂದ್ರನಾಥ ಸ್ವಾಮಿಯ ಬಸದಿಯಲ್ಲಿ ಬಾಹುಬಲಿ ಸೇವಾ ಸಮಿತಿ ಶ್ರಾವಕರಿಂದ ಶ್ರೀ ಚಂದ್ರನಾಥ ಸ್ವಾಮಿಯ ಸಮವಸರಣ ಪೂಜಾ ಕಾರ್ಯಕ್ರಮ ನಡೆಯಲಿದೆ. ಶ್ರೀಮತ್ ಪುಷ್ಪದಂತ ಭೂತಬಲಿ ವಿರಚಿತ ಷಟ್ಖಂಡಾಗಮಾಧಾರಿತ ಸಿದ್ಧಾಂತ ಚಿಂತಾಮಣಿ-3 ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು, ಜೈನಸಾಹಿತ್ಯವಿಶಾರದೆ ವೀಣಾ ರಘುಚಂದ್ರ ಶೆಟ್ಟಿ ಸಮ್ಮಾನ ಕಾರ್ಯಕ್ರಮ ನಡೆಯಲಿದೆ. ಬಳಿಕ ಶ್ರಾವಕ-ಶ್ರಾವಕಿಯರಿಂದ ಜಿನಭಜನ ಕಾರ್ಯಕ್ರಮವಿದೆ.
Click this button or press Ctrl+G to toggle between Kannada and English