ಹನುಮ ಮಾಲಾಧಾರಿ ಗಳಿಗೆ ಎಲ್ಲಾ ಸೌಲಭ್ಯ ಕಲ್ಪಿಸಲು ಸಮಿತಿ ರಚಿಸಲು ಸೂಚನೆ

6:53 PM, Wednesday, November 16th, 2022
Share
1 Star2 Stars3 Stars4 Stars5 Stars
(No Ratings Yet)
Loading...
ಹನುಮ ಮಾಲಾಧಾರಿ

ಕೊಪ್ಪಳ : ಐತಿಹಾಸಿಕ ಅಂಜನಾದ್ರಿ ಬೆಟ್ಟದ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಡಿಸೆಂಬರ್‌ 5 ರಂದು 2 ಲಕ್ಷದಷ್ಟು ಹನುಮ ಮಾಲಾಧಾರಿಗಳು ಆಗಮಿಸುವ ನಿರೀಕ್ಷೆಯಿದ್ದು, ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದಂತೆ ಅಚ್ಚುಕಟ್ಟಿನ ವ್ಯವಸ್ಥೆಗಳನ್ನು ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆ ಕಲ್ಪಿಸುವತ್ತ ಕ್ರಮ ವಹಿಸುವಂತೆ ಮಾನ್ಯ ಮುಜರಾಯಿ, ಹಜ್‌ ಮತ್ತು ವಕ್ಫ್‌ ಸಚಿವರಾದ ಶ್ರೀಮತಿ ಶಶಿಕಲಾ ಅ ಜೊಲ್ಲೆ ಸೂಚನೆ ನೀಡಿದರು.

ಇಂದು ಕೊಪ್ಪಳದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ವಿಸ್ತ್ರುತ ಸಭೆಯನ್ನು ನಡೆಸಿದರು. ನಂತರ ಮಾಲಾಧಾರಿಗಳಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಅಂಜನಾದ್ರಿ ಬೆಟ್ಟದ ಕೆಳಭಾಗದಲ್ಲಿ ಸ್ಥಳ ವೀಕ್ಷಣೆ ನಡೆಸಿ ಮಾತನಾಡಿದರು. ಅಂಜನಾದ್ರಿ ಬೆಟ್ಟ ಪುರಾಣ ಪ್ರಸಿದ್ದ ಹನುಮನ ಜನ್ಮಸ್ಥಳ. ಅಯೋಧ್ಯೆ ರಾಮ ಭೂಮಿಗೆ ಇರುವಷ್ಟೇ ಪ್ರಾಮುಖ್ಯತೆ ಈ ಸ್ಥಳಕ್ಕಿದೆ. ಪ್ರತಿ ವರ್ಷ ಹನುಮ ಮಾಲಾಧಾರಿಗಳು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿ ಮಾಲೆಯನ್ನು ವಿಸರ್ಜಿಸುತ್ತಾರೆ. ಸ್ಥಳದಲ್ಲಿ ಭಕ್ತರು ಅಗತ್ಯ ಸೌಕರ್ಯಗಳಿಲ್ಲದೆ ತೊಂದರೆಗೀಡಾಗುವುದನ್ನು ತಪ್ಪಿಸುವ ಉದ್ದೇಶದಿಂದ ಹಾಗೂ ದೇಶದಾದ್ಯಂತ ನಮ್ಮ ಸ್ಥಳದ ಮಹಿಮೆಯನ್ನು ಸಾರುವ ನಿಟ್ಟಿನಲ್ಲಿ ಎಲ್ಲಾ ಸೌಕರ್ಯಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಈ ಹಿನ್ನಲೆಯಲ್ಲಿ ಇಂದು ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತದ ಜೊತೆ ಸಭೆಯನ್ನ ನಡೆಸಲಾಗಿದೆ. ಭಕ್ತಾದಿಗಳಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದ ರೀತಿಯಲ್ಲಿ ಎಲ್ಲಾ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಸಮಿತಿಗಳ ರಚನೆಗೆ ಸೂಚನೆ:
ಯಾವುದೇ ಲೋಪದೋಷಗಳು ಆಗದಂತೆ ಸಿದ್ದತೆಗಳನ್ನು ನಡೆಸುವ ನಿಟ್ಟಿನಲ್ಲಿ ಸಮಿತಿಗಳನ್ನು ರಚಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಭಕ್ತಾದಿಗಳಿಗೆ ಶುದ್ದ ಕುಡಿಯುವ ನೀರು ಮತ್ತು ಉತ್ತಮ ಊಟದ ವ್ಯವಸ್ಥೆಯನ್ನು ಕಲ್ಪಿಸಬೇಕು. ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳ ರಕ್ಷಣೆಗೆ ಸಿಸಿ ಟಿವಿಗಳನ್ನ ಮತ್ತು ಹೆಚ್ಚಿನ ಪೊಲೀಸ್‌ ಭದ್ರತೆಯನ್ನು ಒದಗಿಸಬೇಕು. ಅಲ್ಲದೆ, ಭಕ್ತಾದಿಗಳು ರಾತ್ರಿ ಹೊತ್ತಿನಲ್ಲಿ ಸರಾಗವಾಗಿ ಚಲಿಸುವಂತೆ ಎಲ್ಲಾ ಪ್ರಮುಖ ಪ್ರದೇಶಗಳಲ್ಲೂ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.

ಬಸ್‌ ಗಳ ವ್ಯವಸ್ಥೆ:
ದೂರದ ಜಿಲ್ಲೆಗಳಿಂದ ಆಗಮಿಸುವ ಭಕ್ತಾದಿಗಳ ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು. ಹಾಗೂ ಅಲ್ಲಿಂದ ಬೆಟ್ಟದ ಕೆಳಭಾಗಕ್ಕೆ ಬಸ್‌ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಎಲ್ಲಾ ಪ್ರದೇಶಗಳಲ್ಲೂ ಕೂಡಾ ಭಕ್ತಾದಿಗಳಿಗೆ ಮಾಹಿತಿ ಫಲಕಗಳನ್ನು ಅಳವಡಿಸಲಾಗುವುದು.

ಭಕ್ತಾದಿಗಳಿಗೆ ಸ್ನಾನದ ವ್ಯವಸ್ಥೆ ಹಾಗೂ ಅವರ ಆರೋಗ್ಯದ ಹಿತದೃಷ್ಟಿಯಿಂದ ಆರೋಗ್ಯ ಇಲಾಖೆಯ ವತಿಯಿಂದ ಕ್ಲೀನಿಕ್‌ ಮತ್ತು ಆಂಬ್ಯೂಲೆನ್ಸ್‌ಗಳನ್ನು ಅಳವಡಿಸಬೇಕು. ಅದರಲ್ಲಿ ಸಾಕಷ್ಟು ಪ್ರಮಾಣದಲ್ಲಿ ವೈದ್ಯರು ಮತ್ತು ನರ್ಸಗಳನ್ನು ನಿಯೋಜಿಸಲಾಗುವುದು. ಓಟ್ಟಾರೆಯಾಗಿ ಭಕ್ತರಿಗೆ ಅನುಕೂಲವಾಗುವಂತಹ ಎಲ್ಲಾ ವ್ಯವಸ್ಥೆಗಳನ್ನು ಮಾಡುವ ಮೂಲಕ ಮಾದರಿ ಕಾರ್ಯಕ್ರಮ ಎನ್ನುವ ಹೆಗ್ಗಳಿಕೆ ನಮ್ಮದಾಗಬೇಕು ಎಂದರು.

ಅಂಜನಾದ್ರಿ ಬೆಟ್ಟಕ್ಕೆ ಭೇಟಿ ಸಿದ್ದತೆಗಳ ಪರಿಶೀಲನೆ:
ಸಚಿವರು ಇಂದು ಗಂಗಾವತಿ ತಾಲ್ಲೂಕಿನ ಅಂಜನಾದ್ರಿ ಬೆಟ್ಟದ ಬಳಿ ಅಧಿಕಾರಿಗಳೊಂದಿಗೆ ತೆರಳಿ ಸಿದ್ದತೆಗಳನ್ನು ಪರಿಶೀಲಿಸಿದರು. ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸುವ ಸ್ಥಳ, ಊಟದ ವ್ಯವಸ್ಥೆ ಕಲ್ಪಿಸುವ ಸ್ಥಳ, ಸರತಿ ಸಾಲುಗಳನ್ನು ನಿರ್ಮಿಸುವ ಸ್ಥಳಗಳಿಗೆ ಭೇಟಿ ನೀಡಿ ಅಗತ್ಯ ಸೂಚನೆಗಳನ್ನು ನೀಡಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಹಾಲಪ್ಪ ಆಚಾರ್‌, ಸಂಸದರಾದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಬಸವರಾಜ ಧಡೇಸೂಗೂರು, ವಿಧಾನ ಪರಿಷತ್‌ ಸದಸ್ಯೆ ಹೇಮಲತಾ ನಾಯಕ್ ಸೇರಿದಂತೆ ಜಿಲ್ಲಾಡಳಿತದ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English