ವಿ. ವಿ ಕಾಲೇಜಿನ ಕನ್ನಡ ಸಂಘ ಉದ್ಘಾಟಿಸಿದ ವಿಶ್ರಾಂತ ಪ್ರಾಧ್ಯಾಪಕ ಮುನಿರಾಜ ರೆಂಜಾಳ

5:11 PM, Monday, November 21st, 2022
Share
1 Star2 Stars3 Stars4 Stars5 Stars
(No Ratings Yet)
Loading...
ಕನ್ನಡ ಸಂಘ

ಮಂಗಳೂರು : 80 ದೇಶಗಳಿಗೆ ರೇಷ್ಮೆ ಸರಬರಾಜು ಆಗುವುದು ನಮ್ಮ ಕರ್ನಾಟಕದಿಂದ, ಕಾಫಿ ಬೆಳೆಯ ತವರೂರು ನಮ್ಮ ಕರ್ನಾಟಕ, ರಾಷ್ಟ್ರಧ್ವಜ ಸಿದ್ಧವಾಗುವುದು ನಮ್ಮ ರಾಜ್ಯದಲ್ಲಿ, ಶ್ರೀಗಂಧದ ನಾಡು ನಮ್ಮದು. ಹೀಗೆ ಹತ್ತು ಹಲವು ಶ್ರೇಷ್ಠ ಪರಂಪರೆಗಳ ವಾರಿಸುದಾರರು ನಾವು, ಎಂದು ಪ್ರಸಿದ್ಧ ವಾಗ್ಮಿ ಮತ್ತು ವಿಶ್ರಾಂತ ಪ್ರಾಧ್ಯಾಪಕ ಮುನಿರಾಜ ರೆಂಜಾಳ ಅವರು ನುಡಿದರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಕನ್ನಡ ಸಂಘದ ಪ್ರಸಕ್ತ ವರ್ಷದ ಕಾರ್ಯಚಟುವಟಿಕೆಗಳನ್ನು ಸೋಮವಾರ ರವೀಂದ್ರ ಕಲಾಭವನದಲ್ಲಿ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡವನ್ನು ಕಟ್ಟುವ ಕೆಲಸ ನಮ್ಮ ಹಿರಿಯರು ಮಾಡಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ ಉತ್ತರದಾಯಿತ್ವ ವಿದ್ಯಾರ್ಥಿಗಳಲ್ಲಿದೆ. ವಿದೇಶಿಗರು ನಮ್ಮಲ್ಲಿಗೆ ಬಂದು ನಮ್ಮ ಶ್ರೇಷ್ಠ ಪರಂಪರೆಗೆ ಮನಸೋತು ಈ ನಾಡಿಗಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಇಲ್ಲೇ ಹುಟ್ಟಿದ ನಾವು ನಮ್ಮ ನಾಡು- ನುಡಿಗಾಗಿ ಏನು ಮಾಡಿದ್ದೇವೆ ಎಂದು ನಮ್ಮಲ್ಲಿಯೇ ಪ್ರಶ್ನಿಸಿಕೊಳ್ಳಬೇಕಿದೆ, ಎಂದರು.

ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ ಪ್ರೊ.ಸೋಮಣ್ಣ ಹೊಂಗಳ್ಳಿ ಮಾತನಾಡಿ, ಕತೆ ಕಾವ್ಯ ಬರೆಯಲು ವಸ್ತು ಯಾವುದಾದರೂ ಆಗುತ್ತದೆ. ಆದರೆ ಎಲ್ಲಿ ಏನನ್ನು ಬಳಸಬೇಕೆನ್ನುವ ವಿವೇಕ ನಮ್ಮಲ್ಲಿರಬೇಕು, ಎಂದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ಕನ್ನಡ ಪ್ರೇಮವನ್ನು ಹೇಗೆ ಉಳಿಸಿಕೊಳ್ಳಬೇಕು ಮತ್ತು ಹೇಗೆ ಬೆಳೆಸಿಕೊಳ್ಳಬೇಕೆಂದು ವಿದ್ಯಾರ್ಥಿಗಳು ಚಿಂತಿಸಬೇಕು, ಎಂದರು.

ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಮಾಧವ ಎಂ. ಕೆ ಸ್ವಾಗತಿಸಿದರು. ವಿದ್ಯಾರ್ಥಿ ಲತೇಶ್ ನಿರೂಪಿಸಿ, ಕನ್ನಡ ಉಪನ್ಯಾಸಕ ಡಾ. ಮಧು ಬಿರಾದಾರ್ ವಂದಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ಧನ್ಯಶ್ರೀ, ಸಹ ಕಾರ್ಯದರ್ಶಿ ಆಕಾಶ್ ಮೊದಲಾದವರು ಉಪಸ್ಥಿತರಿದ್ದರು.

ನಾವೇ ನಾವಿಲಾಗಬೇಕು’
ಕಾರ್ಯಕ್ರಮದ ಭಾಗವಾಗಿ ಬೆಂಗಳೂರು ವಿಶ್ವವಿದ್ಯಾನಿಲಯದ ಕಾನೂನು ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿ ಸಿರಿ ವಾನಳ್ಳಿ ಪ್ರದರ್ಶಿಸಿದ ಏಕವ್ಯಕ್ತಿ ಪ್ರದರ್ಶನ ʼಆನಂದಭಾವಿನಿʼ ರಂಗಪ್ರಿಯರ ಗಮನ ಸೆಳೆಯಿತು. ಹೆಣ್ಣು ಮಗಳೊಬ್ಬಳು ನಾಲ್ಕು ವರ್ಷಗಳ ನಂತರ ಬಂದ ಗೆಳೆಯನ ಪತ್ರಕ್ಕೆ ಉತ್ತರಿಸುವ ಮೂಲಕ ಬದುಕಿನ ಅರ್ಥ ಹುಡುಕುವ ಪ್ರಯತ್ನ ಮಾಡಿದ್ದು ವಿಶೇಷ. ಎರಡನೇ ಮಹಾಯುದ್ಧದ ಕರಾಳ ದಿನಗಳನ್ನು ಕಂಡ ಆಕೆ, ಮನುಕುಲಕ್ಕೆ ಮಾನವೀಯತೆಯೇ ತೊಟ್ಟಿಲೆನ್ನುವ ಭರದಲ್ಲಿ ‘ಯುದ್ಧವೆನ್ನುವುದು ಹುಚ್ಚು ಉನ್ಮಾದ’ ಎನ್ನುತ್ತಾಳೆ. ನಮಗೆ ನವಿಲು ಬೇಕಾದರೆ ನಾವೇ ನವಿಲಾಗಿಬಿಡಬೇಕು ಎನ್ನುವ ಆಕೆಯ ಮಾತು ಜೀವನ ಪ್ರೀತಿಗೆ ಸಾಕ್ಷಿಯಾಗಿತ್ತು. ಸಮಕಾಲೀನ ಸವಾಲುಗಳನ್ನು ಚರ್ಚಿಸುತ್ತ ಸಾಗಿದ ನಾಟಕ ಮನಸ್ಪರ್ಶಿಯಾಗಿ ಮೂಡಿಬಂದಿತ್ತು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English