ಬೆಂಗಳೂರು : ಮಹಿಳಾ ಆಯೋಗದಿಂದ ಸ್ವೀಕಾರವಾದ ದೂರುಗಳನ್ನು ಏಳರಿಂದ ಎಂಟು ಗಂಟೆಗಳೊಳಗೆ ನೋಂದಣಿಯಾಗಿ ತನಿಖೆ ಪ್ರಾರಂಭಿಸಬೇಕೆಂದು ಡಿಜಿ ಅವರಿಗೆ ಸೂಚಿಸಲಾಗಿದೆ ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ರಜತ ಮಹೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಆಯೋಗಕ್ಕೆ ಸಮರ್ಥ ವಕೀಲರ ನೇಮಕ ಮಾಡಲಾಗುವುದು. ನಿರ್ಭಯ ಯೋಜನೆಯಡಿ ಜಾರಿ ಮಾಡಿರುವ ಕಾನೂನಿನ ಬಗ್ಗೆ ಪುರುಷರಿಗೆ ಜಾಗೃತಿ ಮೂಡಿಸುವುದು ಅಗತ್ಯ. ಅನ್ಯಾಯ ಆಗುವ ಮೂಲದಿಂದಲೇ ಅರಿವು ಮೂಡಿಸಬೇಕು ಎಂದರು.
ಮಹಿಳಾ ಆಯೋಗಕ್ಕೆ ಬಲ
ಮಹಿಳಾ ಆಯೋಗಕ್ಕೆ ಇನ್ನಷ್ಟು ಅಧಿಕಾರದ ಜೊತೆಗೆ ಪರಿಣಾಮಕಾರಿಯಾಗಿ ಕೆಲಸ ಮಾಡಲು ಅಗತ್ಯ ಮೂಲಭೂತ ಸೌಕರ್ಯಗಳನ್ನು ಸರ್ಕಾರ ಒದಗಿಸಲು ಸಿದ್ದವಿದೆ ಎಂದರು.
ಕಲ್ಯಾಣ ಕಾರ್ಯಕ್ರಮಗಳು
ಇದಲ್ಲದೆ ಕಲ್ಯಾಣ ಕೆಲಸಗಳನ್ನು ಸರ್ಕಾರ ಕೈಗೊಂಡಿದೆ.
ಮಹಿಳೆಯರ ಪೌಷ್ಟಿಕತೆ ಹೆಚ್ಚಿಸಲು ಕ್ರಮ ವಹಿಸಿದೆ.ಕೆಲಸ ಮಾಡುವ ಗರ್ಭಿಣಿಯರಿಗೆ ವಿಶೇಷ ಸ್ಥಳ ನಿಗದಿ, 5 ಪ್ರಮುಖ ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಹಿಳೆಯರಿಗೆ ಹಾಸ್ಟೆಲ್, ಐಐಎಂ ತರಬೇತಿ, ಎಲಿವೆಟ್ ಯೋಜನೆಯಡಿ ಸ್ಟಾರ್ಟ್ ಅಪ್ ಗೆ ಅವಕಾಶ, ಸ್ತ್ರೀ ಶಕ್ತಿ ಸಂಘಗಳಿಗೆ ಸ್ರ್ತೀ ಸಾಮಾರ್ಥ್ಯ ಯೋಜನೆ ಜಾರಿಗೆ ತಂದಿದ್ದೇವೆ. 5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗ ನೀಡುವ ಕೆಲಸ ಮಾಡಲಾಗುತ್ತಿದೆ.7500 ಸ್ತ್ರೀ ಶಕ್ತಿ ಸಂಘಗಳಿವೆ ಅಮೃತ ಯೋಜನೆಯಡಿ 1 ಲಕ್ಷ ರೂ ನೀಡಿ ಸ್ವಯಂ ಉದ್ಯೋಗ ನೀಡಲಾಗಿದೆ.
ಮಹಿಳೆಯರಿಗೆ ವಿಶೇಷ ಕ್ಲಾಸ್ ರೂಮು, ನಿರ್ಮಾಣ, ಆಶಾ ಕಾರ್ಯಕರ್ತೆಯರು ಹಾಗೂ ಅಡುಗೆ ಮಾಡುವವರ ಗೌರವಧನ ಹೆಚ್ಚಳ ಮಾಡಿದ್ದೇವೆ.ಎನ್.ಪಿ.ಎಸ್ ಯೋಜನೆ ಮರುಪ್ರಾರಂಭವಾಗಿದೆ. ಈ ವರ್ಷ 4000 ಹೊಸ ಅಂಗನವಾಡಿ ನಿರ್ಮಾಣವಾಗುತ್ತಿದೆ. ಮಹಿಳೆಯರಿಗೆ ಎಲ್ಲಾ ಹಂತದ ನೆರವು ಒದಗಿಸಲಾಗುತ್ತಿದೆ. ಮಹಿಳೆಯರು ಸಬಲರಾದರೆ ದೇಶ ಸಬಲವಾಗುತ್ತದೆ ಎಂದರು.
ನಿರ್ಭಯ ಅಡಿ ಬೆಂಗಳೂರಿನ ಲ್ಲಿ 7500 ಕೃತಕ ಬುದ್ಧಿಮತ್ತೆಯ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗುತ್ತಿದೆ. ರಾತ್ರಿ ವೇಳೆ ಕೆಲಸ ಮುಗಿಸಿ ಬರುವ ಮಹಿಳೆಯಾರಿಗೆ ಇದು ಸುರಕ್ಷತೆ ಒದಗಿಸುತ್ತದೆ. ಮಹಿಳಾ ಪೊಲೀಸ್ ಒಳಗೊಂಡ ಪಿಂಕ್ ಹೊಯ್ಸಳ ವಾಹನಗಳು ಮಹಿಳೆಯರನ್ನು ರಕ್ಷಿಸಲು ಸಂಚರಿಸುತ್ತವೆ. ಅಲ್ಪಾವಧಿ ಸ್ವಯಂ ರಕ್ಷಣಾ ತರಬೇತಿಯನ್ನು ಶಾಲಾ ಕಾಲೇಜುಗಳ ಹಾಸ್ಟೆಲ್ ಗಳಲ್ಲಿ ನೀಡಲಾಗುತ್ತಿದೆ ಎಂದರು. ಎಂದರು.
ಉಳಿತಾಯ ಸಂಸ್ಕೃತಿ
ವಿಶ್ವದಲ್ಲಿ ಎಲ್ಲ ರಾಷ್ಟೃಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಆದರೆ, ಭಾರತ ಮಹಿಳೆಯರ ಉಳಿತಾಯ ಸಂಸ್ಕೃತಿ ಯಿಂದಾಗಿ ಅಡುಗೆ ಮನೆಯಲ್ಲಿ ತೆಗೆದಿಡುವ ಜೀರಿಗೆ ಡಬ್ಬದಲ್ಲಿ ಇಡುವ ಹಣವೇ ದೇಶದ ಆರ್ಥಿಕತೆ ರಕ್ಷಣೆ ಮಾಡಿದೆ. ತಾಯಿ ಗರ್ಭದಿಂದ ಭೂ ತಾಯಿ ಗರ್ಭದವರೆಗೆ ಇರುವ ನಮ್ಮ ಬದುಕಿನಲ್ಲಿ ಮಹಿಳೆಯರಿಗೆ ಗೌರವ, ಸಮಾನತೆ ನೀಡಬೇಕು. ದೇಶ ಕಟ್ಟಲು ತಾಯಂದಿರನ್ನು ಸಶಕ್ತ ಮಾಡುವುದು ಬಹಳ ಮುಖ್ಯ. ಈ ಅರಿವಿನಿಂದ ನಮ್ಮ ಸರ್ಕಾರ ಕೆಲ್ಸ ಮಾಡುತ್ತಿದೆ ಎಂದರು.
ಮಹಿಳೆಯರಿಗೆ ಸಿಗುತ್ತಿದ್ದ ಗೌರವ ಪುನಃ ಸ್ಥಾಪನೆಯಾಗಬೇಕು
ಒಂದೆಡೆ ಕಾನೂನು ರಚನೆ, ಶಿಸ್ತಿನ ಕ್ರಮ ತೆಗೆದುಕೊಳ್ಳುವುದು, ಆಯೋಗ ಕೆಲಸ ಮಾಡುವುದು ಇಂದಿನ ದಿನಗಳಲ್ಲಿ ಅತ್ಯಂತ ಅವಶ್ಯಕ. ಅದರ ಜೊತೆಗೆ ಸಮಾಜದಲ್ಲಿ ಮೌಲ್ಯಗಳ ಪರಿವರ್ತನೆ ಆಗುವುದು ಅಗತ್ಯವಿದೆ. ಸಮಾಜದಲ್ಲಿ ಮೊದಲು ಮಹಿಳೆಯರಿಗೆ ಸಿಗುತ್ತಿದ್ದ ಗೌರವ ಪುನಃ ಸ್ಥಾಪನೆಯಾಗಬೇಕು. ಇದಾದರೆ ಸಮಾನತೆ ಅವಕಾಶಗಳು ತೆರೆದುಕೊಳ್ಳುತ್ತವೆ. ಈ ಕೆಲಸವನ್ನು ಆಯೋಗ ಮಾಡಬೇಕು ಎಂದರು.
ಸಾಮಾಜಿಕ ಚಿಂತನೆ ಬದಲಾವಣೆಯ ಜೊತೆಗೆ ಕಠಿಣ ಕಾನೂನು ಕ್ರಮ ಕೂಡ ಅವಶ್ಯಕ
ಎಲ್ಲಾ ಸಮಾಜದಲ್ಲಿ ವ್ಯಗ್ರ ಚಿಂತನೆಗಳಿರುವ ವ್ಯಕ್ತಿಗಳಿದ್ದಾರೆ. ಅವರಿಗೆ ಉಗ್ರ ಶಿಕ್ಷೆ ವಿಧಿಸಬೇಕು. ಅಮಾನವೀಯವಾಗಿ ಮಹಿಳೆಯರ ಮೇಲೆ ಹಲ್ಲೆ, ಕೊಲೆ, ದೌರ್ಜನ್ಯ ಅತ್ಯಾಚಾರ ಆಗಿರುವುದು ನಾವು ನೋಡುತ್ತಿದ್ದೇವೆ. ಇದು ರಾಕ್ಷಸ ಕೃತ್ಯ. ಉಗ್ರ ಕಾನೂನು ಇದ್ದರೂ, ಶಿಕ್ಷೆಗೆ ಒಳಪಟ್ಟಿದ್ದರೂ, ಆದರೆ ಆ ಕಾನೂನು ಅಪರಾಧಗಳನ್ನು ತಡೆಹಿಡಿಯಲು ಸಫಲವಾಗಿಲ್ಲ. ಸಾಮಾಜಿಕ ಚಿಂತನೆ ಬದಲಾವಣೆಯ ಜೊತೆಗೆ ಕಠಿಣ ಕಾನೂನು ಕ್ರಮ ಕೂಡ ಅವಶ್ಯಕ. ಮಹಿಳಾ ಆಯೋಗಕ್ಕೆ ಶಕ್ತಿ ತುಂಬುವ ಕೆಲಸ ಆಗಬೇಕು ಎಂದರು.
ಜನ್ಮಪೂರ್ವದ ಸಂಬಂಧ
ಈ ಭೂಮಿ ಮೇಲೆ ಜನ್ಮ ಪೂರ್ವದ ಸಂಬಂಧ ತಾಯಿಯೊಂದಿಗೆ ಇರುತ್ತದೆ. ತಾಯಿತನ ಎಲ್ಲಕ್ಕಿಂತ ಶ್ರೇಷ್ಠ. ತಾಯಿಯ ಪ್ರೀತಿ ಮಿತಿ ಇಲ್ಲದ್ದು, ನೂರುಕ್ಕೆ ನೂರು ಶುದ್ದವಾಗಿರುತ್ತದೆ. ಹೀಗಾಗಿ ಹೆಣ್ಣು ಮಕ್ಕಳು ಶ್ರೇಷ್ಠ ಎಂದರು.
ಸಮಾನತೆ
ಹೆಣ್ಣಿಗೆ ನಿಸರ್ಗ, ಪುರಾಣ, ಇತಿಹಾಸ ದೊಡ್ಡ ಸ್ಥಾನ ಕೊಟ್ಡಿದ್ದರೂ ಸಮಾಜ ಕೊಡುತ್ತಿಲ್ಲ. ಸಮಾಜ ಯಾವಾಗ ಮಹಿಳೆಯರಿಗೆ ಗೌರವ, ಸಮಾನತೆ ಕೊಡುತ್ತದೆಯೋ ಅಂದು ಮಹಿಳೆಗೆ ಸಮಾನತೆ ಹಾಗೂ ಅವಕಾಶಗಳು ದೊರೆಯುತ್ತವೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್, ಶಾಸಕಿ ರೂಪಾಲಿ ನಾಯಕ್, ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮಂಜುಳಾ ಹಾಗೂ ಮತ್ತಿತರರು ಹಾಜರಿದ್ದರು.
Click this button or press Ctrl+G to toggle between Kannada and English