ಧರ್ಮಸ್ಥಳವೆಂದರೆ ಸರ್ವಧರ್ಮ ಸಮನ್ವಯದ ಕ್ಷೇತ್ರ : ಡಾ. ವೀರೇಂದ್ರ ಹೆಗ್ಗಡೆ

10:24 PM, Friday, November 29th, 2024
Share
1 Star2 Stars3 Stars4 Stars5 Stars
(No Ratings Yet)
Loading...

ಬೆಳ್ತಂಗಡಿ: ಸರ್ವಧರ್ಮ ಸಮನ್ವಯದ ಕ್ಷೇತ್ರವೆಂಬ ಮನ್ನಣೆ ಪಡೆದ ಶ್ರೀ ಕ್ಷೇತ್ರದಲ್ಲಿ ನಮ್ಮ ಹಿರಿಯರಾದ ಕೀರ್ತಿಶೇಷ ಶ್ರೀ ಡಿ. ಮಂಜಯ್ಯ ಹೆಗ್ಗಡೆಯವರು 1933 ರಲ್ಲಿ ಪ್ರಾರಂಭಿಸಿದ ಈ ಸರ್ವಧರ್ಮ ಸಮ್ಮೇಳನವನ್ನು ಕೀರ್ತಿಶೇಷ ಶ್ರೀ ಡಿ. ರತ್ನಮ್ಮವರ್ಮ ಹೆಗ್ಗಡೆ ಮುಂದುವರಿಸಿಕೊಂಡು ಬಂದರು. ಇದೀಗ ಈ ಸಮ್ಮೇಳನವು 91 ವಸಂತಗಳನ್ನು ಪೂರೈಸಿದೆ. ನಾನು ಪೀಠವನ್ನು ಅಲಂಕರಿಸಿದ ದಿನದಿಂದ ವಿವಿಧ ಧರ್ಮಗಳ ಮಹತ್ ಸಂದೇಶಗಳನ್ನು, ಸದ್ವಿಚಾರಗಳನ್ನು, ನಮ್ಮ ಪರಂಪರೆಯನ್ನು ಪಾಲಿಸುತ್ತಾ, ಯಾವುದೇ ಸಂಕುಚಿತ ಭಾವನೆಗಳಿಗೆ ನಮ್ಮನ್ನು ನಿರ್ಬಂಧಿಸಿಕೊಳ್ಳದೆ ಲೌಕಿಕ ಹಾಗೂ ಪಾರಮಾರ್ಥಿಕ ಎರಡು ದಿಕ್ಕುಗಳಲ್ಲಿ ಕ್ಷೇತ್ರವನ್ನು ಮುನ್ನಡೆಸಿದ್ದೇವೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಗಡೆಯವರು ಹೇಳಿದರು .

ಸರ್ವಧರ್ಮ ಸಮನ್ವಯದ ಈ ಮಹೋನ್ನತ ವೇದಿಕೆಯಿಂದ ಅನೇಕ ಹಿರಿಯ ವಿದ್ವಾಂಸರು ಮಾನವೀಯ ಆದರ್ಶ ಪಥದಲ್ಲಿ ಮುನ್ನಡೆಯಬೇಕೆಂಬ ಸಂದೇಶವನ್ನು ನೀಡಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳವೆಂದರೆ ವಿವಿಧ ಜಾತಿ, ಮತ, ಪಂಥಗಳ ಸಂಕೀರ್ಣ ಎಲ್ಲೆಯನ್ನು ಮೀರಿ ವಿಶಾಲ ವಿಶ್ವದ ಸರ್ವ ಜನಾಂಗಗಳ ಹಿತವನ್ನು ಬಯಸುವ ಮಾನವ ಧರ್ಮವೆ ಶ್ರೇಷ್ಠವೆಂದು ಬಗೆದು ಅನ್ನದಾನ, ವಿದ್ಯಾದಾನ, ಆಭಯದಾನ, ಜೌಷಧದಾನಗಳ ಮೂಲಕ ಸಾಮಾಜಿಕ ಅಭಯ ಅನುಗ್ರಹಿಸುವ ಪುಣ್ಯ ಕ್ಷೇತ್ರವೆಂದು ಪ್ರಸಿದ್ದಿಯಾಗಿದೆ. ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಯಲ್ಲಿ ನಡೆಯುವ ವಿಶೇಷ ಸೇವಾ ಕಾರ್ಯಗಳು, ತ್ರಿಕಾಲ ಪೂಜೆ, ಜಾತ್ರೆ-ಉತ್ಸವಗಳು ನಿಯಮಬದ್ಧವಾಗಿ ಶಿಸ್ತಿನಿಂದ ಆಗಮ ಶಾಸ್ತ್ರದ ಅನುಸಾರ ನಡೆದುಕೊಂಢು ಬಂದು ಶ್ರೀ ಸ್ವಾಮಿಯ ಅನುಗ್ರಹಕ್ಕೆ ಕಾರಣವಾಗಿದೆ ಎಂದು ನಾವು ನಂಬುತ್ತೇವೆ. ಇದು ದೇವಾಲಯಕ್ಕೆ ಸಂಬಂಧಪಟ್ಟ ಅಧ್ಯಾತ್ಮಿಕ ವಿಚಾರವಾದರೆ ಇದರೊಂದಿಗೆ ಮಾನವ ಸೇವಾ ಕಾರ್ಯಗಳು ಕೂಡಾ ಅನೂಚಾನವಾಗಿ ನಡೆದುಕೊಂಡು ಬರುತ್ತಿವೆ. ಇದಕ್ಕಾಗಿ ನಾವು ವಿವಿಧ ಟ್ರಸ್ಟ್ ಗಳನ್ನು ರಚಿಸಿ ಅವುಗಳ ಮೂಲಕ ವ್ಯವಸ್ಥಿತವಾದ ಸೇವಾ ಕಾರ್ಯಗಳನ್ನು ಸಮಾಜದ ಎಲ್ಲಾ ವರ್ಗಗಳಿಗೂ ವಿಸ್ತರಿಸಿದ್ದೇವೆ. ಯೋಗ ಮತ್ತು ನೈತಿಕ ಶಿಕ್ಷಣ, ಜನಜಾಗೃತಿ ವೇದಿಕೆ ಮೂಲಕ ವ್ಯಸನ ಮುಕ್ತ ಸಮಾಜದ ನಿರ್ಮಾಣ, ಆಸ್ಪತ್ರೆಗಳ ಮೂಲಕ ಅನಾರೋಗ್ಯ ಪೀಡಿತರಿಗೆ ವೈದ್ಯಕೀಯ ಸೇವೆ, ಗ್ರಾಮೀಣಾಭಿವ್ಥದ್ದಿ ಯೋಜನೆಯ ಮೂಲಕ ಈ ಸೇವಾ ಕಾರ್ಯಗಳನ್ನು ಬಹು ಆಯಾಮಗಳಲ್ಲಿ ವಿಸ್ತರಿಸಿದ್ದೇವೆ. ಜನತಾ ಜನಾರ್ಧನನ ಸೇವೆ ಮಾಡಬೇಕೆಂಬ ಸಂಕಲ್ಪಕ್ಕೆ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹ ಇದ್ದ ಕಾರಣವೇ ನಾವು ಕೈಗೊಂಡ ಸಂಕಲ್ಪವು ಬಹು ಪ್ರಕಲ್ಪಗಳಲ್ಲಿ, ಬಹು ಅಯಾಮಗಳಲ್ಲಿ ವಿಸ್ತರಣೆಗೊಂಡು ಧರ್ಮ ಎಂಬ ಶಬ್ದದೊಡನೆ ಸತ್ಯ-ನ್ಯಾಯ, ಸಾಮಾಜಿಕ ಕಳಕಳಿ, ಯೋಗ ವಿಜ್ಞಾನ, ಆಧ್ಯಾತ್ಮಿಕ-ಜ್ಞಾನ ಹೀಗೆ ಭಾರತೀಯ ಜ್ಞಾನ ಪರಂಪರೆಯ ಬಹುಮುಖ ವಿಸ್ತಾರವನ್ನು ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ.

ಭಾರತದಲ್ಲಿ ಇರುವಷ್ಟು ಧರ್ಮಗಳು, ಮತ, ಪಂಥಗಳು ಮತ್ತು ಅವುಗಳ ಆಚರಣೆಗಳು ಬಹುಶ: ವಿಶ್ವದ ಯಾವುಧೆ ದೇಶದಲ್ಲೂ ಇರಲಾರದು ಎಂದೆನಿಸುತ್ತದೆ. ನಮ್ಮ ದೇಶದ ಉತ್ತರದಿಂದ ದಕ್ಷಿಣದವರೆಗೆ, ಪೂರ್ವದಿಂದ ಪಶ್ಚಿಮದವರೆಗೆ ಸಾಗಿದ್ದಾಗ ಪ್ರತಿ ಹೆಜ್ಜೆ ಹೆಜ್ಜೆಗೂ ವಿವಿಧತೆಯನ್ನು ಕಾಣಬಹುದಾಗಿದೆ. ಆ ವಿವಿಧತೆಯಲ್ಲೂ ಏಕತೆಯನ್ನು ಜಗತ್ತಿಗೆ ಮಾದರಿ ಎಂಬAತೆ ಸಾರಿದ ಮತ್ತು ಈಗಲೂ ಸಾರುತ್ತಿರುವ ರಾಷ್ಟçದಲ್ಲಿ ನಾವು ಹುಟ್ಟಿ ಬೆಳೆದಿದ್ದೇವೆ ಎಂಬುದು ಹೆಮ್ಮೆಯ ವಿಚಾರವಾಗಿದೆ. ಇಲ್ಲಿ ಎಷ್ಟೇ ಧರ್ಮಗಳಿದ್ದರೂ ಎಲ್ಲರು ಅವರವರ ಪಾಡಿಗೆ ತಮ್ಮ-ತಮ್ಮ ಧರ್ಮ, ರೀತಿ-ನೀತಿಗಳನ್ನು ಅನುಸರಿಸಿಕೊಂಡು ಹೋಗುತ್ತಿದ್ದಾರೆ. ‘ಬದುಕು ಮತ್ತು ಇತರರನ್ನು ಬದುಕಗೋಡು’ ಎಂಬ ತತ್ವವು ಎಲ್ಲರಲ್ಲಿ ಇರುವುದರಿಂದಲೇ ಐಕ್ಯತೆಯನ್ನು ಹೊಂದಲು ಸಾಧ್ಯವಾಗಿದೆ.

ನಮ್ಮ ನಾಡಿನಲ್ಲಿ ಇರುವ ಭಿನ್ನ-ಭಿನ್ನ ಧರ್ಮಗಳ ನೈಜತೆ, ತತ್ವ, ಸಿದ್ದಾಂತ ಮತ್ತು ಮರ್ಮಗಳೆಲ್ಲ ಒಂದೇ ಆಗಿದೆ. ಹಾಗೆಯೇ ಎಲ್ಲ ಧರ್ಮಗಳು ವ್ರತ, ಉಪವಾಸ, ತೀರ್ಥಯಾತ್ರೆ, ದಾನ ಮುಂತಾದವನ್ನು ತಮ್ಮದೇ ಆದ ರೀತಿಯಲ್ಲಿ ಆಚರಿಸುವುದನ್ನು ನಾವೆಲ್ಲ ಕಂಡಿದ್ದೇವೆ. ಒಂದು ಧರ್ಮದ ವಿಶೇಷತೆಯನ್ನು ಇನ್ನೊಂದು ಧರ್ಮದವರು ಅರಿತುಕೊಂಡಾಗ ಮಾತ್ರ ಸಮಾಜದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಸಾಧ್ಯ. ಆದರೆ ಧರ್ಮ ಅಥವಾ ಆಚರಣೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಸೋತಾಗ ಅಥವಾ ಧರ್ಮದ ವ್ಯಾಖ್ಯಾನವನ್ನು ಸಂಕುಚಿತಗೊಳಿಸಿದಾಗ ಸಮಾಜದಲ್ಲಿ ಜಾತಿ, ಮತ, ಪಂಥ, ಪಂಗಡಗಳ ನಡುವೆ ಭಿನ್ನಾಭಿಪ್ರಾಯಗಳು, ತಿಕ್ಕಾಟ, ಘರ್ಷಣೆಗಳು ಉಂಟಾಗಿ ಸಮಾಜದ ಸ್ವಾಸ್ತ್ಯ ಹದಗೆಡುತ್ತದೆ. ಧರ್ಮವನ್ನು ವಿಶಾಲ ಅರ್ಥದಲ್ಲಿ ಕಾಣುವ ದೃಷ್ಟಿಯನ್ನು ನಾವೆಲ್ಲ ಬೆಳೆಸಿಕೊಳ್ಳಬೇಕಾಗಿದೆ. ಇಂಥಾ ಸಮ್ಮೇಳನಗಳ ಮೂಲ ಉದ್ದೇಶವೇ ಇದಾಗಿದೆ.

ಎಲ್ಲಾ ಧರ್ಮಿಯರೂ ಮಾನವೀಯತೆ, ತ್ಯಾಗ ಅಹಿಂಸೆ, ಸತ್ಯ ಸಹಬಾಳ್ವೆ ಮುಂತಾದ ಸದ್ಗುಣಗಳನ್ನು ಧರ್ಮದ ರೂಪದಲ್ಲಿ ಕಂಡುಕೊAಡಿದ್ದಾರೆ. ಸಂತ ಮಹಾಂತರು, ಮುನಿಗಳು ಪ್ರವಾದಿಗಳು, ಯುಗಪುರುಷರೆಲ್ಲರೂ ಸದ್ವಿಚಾರಗಳನ್ನೇ ಪ್ರಚುರಪಡಿಸಿದ್ದಾರೆ.

ಸಾತ್ವಿಕ ಮಾರ್ಗದಿಂದ ಉತ್ತಮ ಸಂಸ್ಕಾರದೊಡನೆ ಬಾಳುವುದು, ಮಾನವರ ಕಲ್ಯಾಣಕ್ಕಾಗಿ ಮನುಷ್ಯ-ಮನುಷ್ಯರ ನಡುವಿನ ಮನಸ್ಸನ್ನು ಬೆಸೆಯುವುದು ಎಲ್ಲಾ ಧರ್ಮಗಳ ಉದ್ದೇಶ. ಈ ಉದ್ದೇಶ ಈಡೇರಬೇಕಾದರೆ, ಧರ್ಮವನ್ನು ಆರಾಧಿಸಿದರೆ ಸಾಲದು. ಅದನ್ನು ನಮ್ಮ ಬದುಕಿನಲ್ಲಿ ಅನುಷ್ಠಾನಕ್ಕೆ ತರಬೇಕು. ದೈನಂದಿನ ಬದುಕಿನಲ್ಲಿ ಪ್ರಮಾಣಿಕವಾಗಿ ಧರ್ಮದ ತತ್ವಗಳನ್ನು ಆಚರಣೆಗ ತರಬೇಕು. ಧರ್ಮವನ್ನು ಅಂಗಿಯಂತೆ ಧರಿಸಿ ಕಳಿಚಿಡುವುದಲ್ಲ. ಪೂಜೆ, ಪುರಸ್ಕಾರ, ತೀರ್ಥಕ್ಷೇತ್ರ, ದರ್ಶನ, ಅನುಷ್ಠಾನ ಇವಿಷ್ಟಕ್ಕೆ ಮಾತ್ರ ಧರ್ಮವನ್ನು ಸೀಮಿತಗೊಳಿಸದೆ, ಧರ್ಮವು ನಮ್ಮ ಎಲ್ಲಾ ಚಟುವಟಿಕೆಗಳಲ್ಲಿ ಹಾಸುಹೊಕ್ಕಾಗಿರಬೇಕು. ನಡೆ ನುಡಿ, ನೈತಿಕತೆಗಳು ಧರ್ಮದ ನೆಲೆಗಟ್ಟಿನಲ್ಲಿ ಇರಬೇಕು. ಆಗ ಸಮಾಜದಲ್ಲಿ ಶಾಂತಿ, ಸಾಮರಸ್ಯ ನೆಲೆಸಲು ಸಾಧ್ಯವಾಗುತ್ತದೆ. ಧೀಮಂತ ಸಮಾಜವು ನಿರ್ಮಾಣವಾಗುತ್ತದೆ ಎಂದರು.

image description

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English