ಮಂಗಳೂರು : ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಣಿ ಆಗಿರುವ ಫಲಾನುಭವಿಗಳಿಗೆ ವಿವಿಧ ಆರ್ಥಿಕ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,42,340 ಕಟ್ಟಡ ಕಾರ್ಮಿಕರಾಗಿ ನೋಂದಣಿಯಾಗಿ ಕಾರ್ಡ್ ಪಡೆದುಕೊಂಡಿರುತ್ತಾರೆ.
ಆದರೆ ಕೊರೋನಾ ಸಮಯದಲ್ಲಿ ನೀಡಲಾದ ಆಹಾರದ ಕಿಟ್ ಮತ್ತು ಟೂಲ್ ಕಿಟ್ ಧನಸಹಾಯದಂದ ಪ್ರೇರಿತರಾಗಿ ಕಟ್ಟಡ ಕಾರ್ಮಿಕರಲ್ಲದವರು ನೋಂದಾಯಿಸಿಕೊಂಡು ಕಟ್ಟಡ ಕಾರ್ಮಿಕ ಕಾರ್ಡ್‍ಗಳನ್ನು ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಸರ್ಕಾರದ ವತಿಯಿಂದ ಅಧಿಕಾರಿಗಳು ಹೆಚ್ಚಿನ ಕಾಳಜಿ ವಹಿಸಿ ನಿಜವಾದ ಕಾರ್ಮಿಕರಿಗೆ ಮಾತ್ರ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ನಕಲಿ ಕಾರ್ಡ್‍ಗಳ ರದ್ಧತಿಯ ಬಗ್ಗೆ ಅಭಿಯಾನ ಕೈಗೊಂಡಿದ್ದು, ಈಗಾಗಲೇ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 1537 ನಕಲಿ ಕಾರ್ಡುಗಳನ್ನು ರದ್ದುಪಡಿಸಲಾಗಿದೆ.
ಈಗಾಗಲೇ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಲ್ಲದವರು ಗುರುತಿನ ಚೀಟಿ ಮಾಡಿಕೊಂಡಿದ್ದಲ್ಲಿ ಸ್ವ-ಇಚ್ಛೆಯಿಂದ ಸಂಬಂಧಪಟ್ಟ ಕಾರ್ಮಿಕ ನಿರೀಕ್ಷಕರ ಕಛೇರಿಗೆ ಗುರುತಿನ ಚೀಟಿ ಹಿಂತಿರುಗಿಸಿದ್ದಲ್ಲಿ ಅವರ ವಿರುದ್ಧ ತೆಗೆದುಕೊಳ್ಳುವ ಮುಂದಿನ ಕಾನೂನು ಕ್ರಮವನ್ನು ಕೈಬಿಡಲಾಗುವುದು. ಇದಕ್ಕೆ ತಪ್ಪಿದಲ್ಲಿ ಅಂತಹ ಗುರುತಿನ ಚೀಟಿ ಹೊಂದಿರುವ ವ್ಯಕ್ತಿಗಳ ದಾಖಲೆಗಳನ್ನು ಪರಿಶೀಲನೆ ನಡೆಸಿ ಅನರ್ಹರನ್ನು ಪತ್ತೆಹಚ್ಚಿ ನೋಂದಣಿಯನ್ನು ರದ್ದುಪಡಿಸಲಾಗುವುದು ಮತ್ತು ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಹಾಗೂ ಅನರ್ಹರ ವಿರುದ್ಧ ಮತ್ತು ಅನರ್ಹರಿಗೆ ಉದ್ಯೋಗ ಪ್ರಮಾಣ ಪತ್ರ ನೀಡುವ ವ್ಯಕ್ತಿ/ಸಂಸ್ಥೆ/ಪ್ರಾಧಿಕಾರ/ಸಂಘಟಣೆಗಳಿಗೂ ಕೂಡ ಸೂಕ್ತ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Click this button or press Ctrl+G to toggle between Kannada and English