ಮೂಡಬಿದ್ರೆ : ಪಂಡಿತ್ ಎಂ.ವೆಂಕಟೇಶ್ ಕುಮಾರ್ ಅವರ ಭಕ್ತಿ ಗಾನ ಸುಧೆಯಲ್ಲಿ ಮಿಂದ ಪ್ರೇಕ್ಷಕರನ್ನು ನರ್ತನ ಲೋಕಕ್ಕೆ ಕೊಂಡೊಯ್ದದ್ದು, ಗುಜರಾತ್‌ನ ರಂಗ್ ಮಲಹರ್ ದಿ ಫೋಕ್ ಆರ್ಟ್ಸ್ ತಂಡದ ವೈವಿಧ್ಯಮಯ ಗುಜರಾತಿ ಜಾನಪದ ನೃತ್ಯ ಪ್ರದರ್ಶನ.
ಉತ್ತರದ ಹಿಂದೂಸ್ಥಾನಿಗೆ ಶ್ರೋತೃಗಳಾಗಿದ್ದ ವಿರಾಸತ್ ಪ್ರೇಕ್ಷಕರು ಪಶ್ಚಿಮದ ಜಾನಪದಕ್ಕೆ ವೀಕ್ಷಕರಾದರು.
ದೇಶದ ಪಶ್ಚಿಮ ತೀರದ ಗುಜರಾತ್‌ನಲ್ಲಿ ನವರಾತ್ರಿಯ ಸಂದರ್ಭದಲ್ಲಿ ದೇವಿ ಆರಾಧನೆ ಮಾಡುತ್ತಾ ನರ್ತಿಸುವ ಜಾನಪದ ನೃತ್ಯವೇ ಗಾರ್ಭ. ಗುಜರಾತ್‌ನ ರಂಗ್ ಮಲಹರ್ ತಂಡ ಸದಸ್ಯರು ಸಾಂಪ್ರದಾಯಿಕ ವಸ್ತ್ರ ತೊಟ್ಟು ಹೆಜ್ಜೆ ಹಾಕಿದಾಗ, ಅಪ್ಸರೆಯರು ಧರೆಗಿಳಿದು ನರ್ತಿಸಿದ ಚಿತ್ರಣ ರೂಪುಗೊಂಡಿತು.
‘ರಂಗ್ ಧಾರಿ ಚೂಡೆ .. ಹಾಡಿಗೆ ಹೆಣ್ಣುಮಕ್ಕಳು ಹೆಜ್ಜೆ ಹಾಕುತ್ತಾ ಗುಜರಾತಿನ ಸಾಂಸ್ಕೃತಿಕ ಸಿಂಚನ ಉಣಬಡಿಸಿದರು.
ಕೆಂಪು, ಗುಲಾಬಿ, ಹಳದಿ, ಕಿತ್ತಳೆ ಸೇರಿದಂತೆ ಪ್ರಖರ ಬಣ್ಣಗಳ ಚಾನ್ಯ, ಚೋಲಿ ಅಥವಾ ಘಾಗ್ರ ಚೋಲಿ, ಬಾಂದನಿ, ಅಭ್ಲಾ (ಕನ್ನಡಿ) ಸಹಿತ ದಪ್ಪನೆಯ ಗುಜರಾತಿ ಅಂಚನ್ನು ಹೊಂದಿದ ದುಪ್ಪಟ್ಟ ತೊಟ್ಟ ಕನ್ಯೆಯರು ಚಂದ್ರನ ಬೆಳಕಿಗೆ ಹೊಳೆವ ನೆಕ್ಲೆಸ್, ಬಳೆ, ಸೊಂಟ ಪಟ್ಟಿ, ಕಿವಿಯೋಲೆ ಸೇರಿದಂತೆ ಭಾರಿ ಆಭರಣಗಳನ್ನು ಧರಿಸಿ ಹೆಜ್ಜೆ ಹಾಕಿದಾಗ, ಸಾಂಪ್ರದಾಯಿಕ ಕೆಡಿಯಾ ಹಾಗೂ ಪೈಜಾಮ(ಧೋತಿ) ತೊಟ್ಟ ಪುರುಷರು ಸಾಥ್ ನೀಡಿದ್ದು, ಅವರ ನರ್ತನಕ್ಕೆ ವರ್ಣಮಯ ಲೋಕವೇ ಸೃಷ್ಟಿಯಾಗಿತ್ತು. ಛತ್ರಿ ಹಾಗೂ ಕೋಲಾಟ ಮಿಶ್ರಣದ ನೃತ್ಯ ಮನ ಸೆಳೆಯಿತು.
ಜೀವ, ಏಕತೆ, ಸಂತೋಷ ಸಾರುವ ‘ ಪರ್ ದೇಶಿ ರಾಧಾನೇ… ಏ ರಂಗ್ ರಸಿಯಾ..’ ಹಾಡಿಗೆ ಕೋಲಾಟ ಮಾಡಿದರು.
ಮಳೆಗೆ ಮುನ್ನ ಮೇವು ಸಂಗ್ರಹಿಸುವ ಹಳ್ಳಿಗರ ಸಂಭ್ರಮದ ಬೇಟೆ, ಬೆಟ್ಟದ ನೃತ್ಯವು ಬುಡಕಟ್ಟು ಜನರ ಜೀವನ ಬಿಂಬಿಸಿತು. ಶ್ರಾವ್ಯ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಗುಜರಾತಿನ ಜಾನಪದ ನೃತ್ಯದ ಬೆನ್ನಲ್ಲೇ ಅಬ್ಬರಿಸಿದ್ದು, ಆಳ್ವಾಸ್ ಸಾಂಸ್ಕೃತಿಕ ವೈಭವದ ಝಲಕ್.
ಪಶ್ಚಿಮ ಭಾರತದಿಂದ ಪ್ರೇಕ್ಷಕ ಸಮೂಹವನ್ನು ದಕ್ಷಿಣದ ಸಿಂಗಾರಿ ಮೇಳದೆಡೆಗೆ ವಿರಾಸತ್ ಕೊಂಡೊಯ್ಯಿತು.
ಕೇರಳ ಹಾಗೂ ಕರ್ನಾಟಕದ ಕರಾವಳಿ (ತುಳು ನಾಡು)ಯ ದೇವ, ದೈವ, ಸಾಂಸ್ಕೃತಿಕ ಆರಾಧನೆಯ ಅವಿಭಾಜ್ಯ ಅಂಗವಾದ ‘ಚೆಂಡೆ’ಯ ನಿನಾದಕ್ಕೆ ಉನ್ಮಾದಗೊಳ್ಳದ ಕಲಾಸಕ್ತರಿಲ್ಲ. ಭಕ್ತರು, ಕಲಾಸಕ್ತರು ಸೇರಿದಂತೆ ಕುಳಿತವರಿಗೆಲ್ಲ ಝಲ್ ಎನಿಸುವಂತೆ ಮಾಡುವ ಚೆಂಡೆಯ ನಾದ ವಿರಾಸತ್ ವೇದಿಕೆಯಲ್ಲಿ ಹೊಮ್ಮಿದಾಗ ನೆರೆದ ಪ್ರೇಕ್ಷಕರಲ್ಲೂ ಮೈ ರೋಮಾಂಚನ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಸಮೂಹ ಸಂಸ್ಥೆಗಳ ಸಾಂಸ್ಕೃತಿಕ ವಿದ್ಯಾರ್ಥಿಗಳೇ ಕೇರಳದ ಚೆಂಡೆ ನುಡಿಸಿ, ಜನಮನ ಗೆದ್ದರು. ಕೇರಳದ ಚೆಂಡೆಯ ನಿನಾದವು ನೆರೆದ ಪ್ರೇಕ್ಷಕರನ್ನು ಮುದಗೊಳಿಸಿತು.
ಕೇರಳ ಮೂಲದ ಸಿಂಗಾರಿ ಮೇಳವು ಶಾಸ್ತ್ರೀಯ ವಾದ್ಯವಾಗಿದ್ದು, ಜನಾಕರ್ಷಣೆ ಹೊಂದಿದ ನೃತ್ಯ ಕಲೆ. ಕೇರಳದಲ್ಲಿ ದೇವರ ಉತ್ಸವ, ಅರ್ಚನೆ, ಮೆರವಣಿಗೆಗಳಲ್ಲಿ ಸಿಂಗಾರಿ ಮೇಳಕ್ಕೆ ವಿಶೇಷ ಪ್ರಾತಿನಿಧ್ಯವಿದೆ. ವಾದ್ಯಗಳೇ ಈ ಮೇಳದ ಪ್ರಮುಖ ಪರಿಕರಗಳಾಗಿದ್ದು, ವರಂದಲಾ, ಚೆಂಡೆ ಮತ್ತು ತಾಳ ಸಿಂಗಾರಿ ಮೇಳಕ್ಕೆ ಕಳೆ ತರುತ್ತವೆ. ವಿರಾಸತ್ ವೇದಿಕೆಯಲ್ಲಿ ಚೆಂಡೆಯ ಅಬ್ಬರ. ಮಣಿಪುರದ ಮೈತೇಯಿ ಜನರ ಲಯ ಹಾಗೂ ಕೌಶಲಗಳ ಸಮ್ಮಿಳಿತದ ಆರಾಧನಾ ಕಲೆಯೇ ‘ಸ್ಟಿಕ್ ಡ್ಯಾನ್ಸ್’ ಎಂದು ಜನಜನಿತ. ಭಾರತೀಯ ಮಾರ್ಷಲ್ ಕಲಾ ಮಾದರಿಯ ಮಣಿಪುರಿ ‘ಸ್ಟಿಕ್ ಡ್ಯಾನ್ಸ್’ ಈಶಾನ್ಯ ಭಾರತದ ಸಾಹಸದ ದರ್ಶನ ನೀಡಿತು. ಸಾಹಸ ಮತ್ತು ಏಕಾಗ್ರತೆಯ ಸಂಗಮ ದಂತೆ ಆಳ್ವಾಸ್ ಸಾಂಸ್ಕೃತಿಕ ವಿದ್ಯಾರ್ಥಿಗಳು ‘ಸ್ಟಿಕ್ ಡ್ಯಾನ್ಸ್’ ಅನ್ನು ಕಸರತ್ತುಗಳೊಂದಿಗೆ ಪ್ರದರ್ಶಿಸಿದರು.
ಒಬ್ಬರ ಮೇಲೆ ಮತ್ತೊಬ್ಬರು ಏರಿ ನಿರ್ಮಿಸಿದ ಪಿರಮಿಡ್, ಬಹುವಿಧದ ಜಿಗಿತ, ಚೂರಿ ಮೇಲೆ ಮಲಗಿದ ಕಸರತ್ತು, ಆಟ ರೋಮಾಂಚನಗೊಳಿಸಿತು.
ಕಸರತ್ತಿನ ಬಳಿಕ ಶಿವನ ದರ್ಶನ. ಪುತ್ತೂರಿನ ವಿದ್ವಾನ್ ದೀಪಕ್ ಕುಮಾರ್ ನಿರ್ದೇಶನದಲ್ಲಿ ಮೂಡಿಬಂದ ನೀಲಕಂಠನ ಆರಾಧನೆಯ ‘ಭೋ ಶಂಭೋ, ಶಿವ ಶಂಭೋ, ಸ್ವಯಂ ಭೋ’ ಶಾಸ್ತ್ರೀಯ ನೃತ್ಯ ಮತ್ತೆ ಹೆಜ್ಜೆ- ಗೆಜ್ಜೆಗಳೆಡೆಗೆ ಸೆಳೆಯಿತು.
ಶಿವನ ಮಹಿಮೆಯನ್ನು ಸಾರುವ ಈ ಶಾಸ್ತ್ರೀಯ ನೃತ್ಯ ರೂಪಕವನ್ನು ಆಳ್ವಾಸ್ ವಿದ್ಯಾರ್ಥಿಗಳು ಪ್ರದರ್ಶಿಸಿದಾಗ ಭಕ್ತಿ-ಭಾವದಲ್ಲಿ ಜನತೆ ಸಂಭ್ರಮಿಸಿದರು. ಹರಿಭಕ್ತಿಗೆ ಕಿವಿಯಾದವರು ಹರನ ಮಹಿಮೆಗೆ ಕಣ್ಣಾದರು.
ನೃತ್ಯದ ಬಳಿಕ ಕಸರತ್ತಿನ ಗಮತ್ತು. ಮಲ್ಲರು (ಜಟ್ಟಿ)ಗಳು ತಮ್ಮ ದೇಹದಾರ್ಢ್ಯ ವರ್ಧನೆಗೆ ಕಂಬ ಬಳಸಿ ಮಾಡುತ್ತಿದ್ದ ಕಸರತ್ತು ‘ಮಲ್ಲಕಂಬ’ ಕ್ರೀಡೆಯಾಯಿತು. ಇದು ದೈಹಿಕ ಸೌಂದರ್ಯ, ಸಾಮರ್ಥ್ಯ ವರ್ಧನೆಯ ಸಾಹಸವೂ ಹೌದು. ನಮ್ಮ ನೆಲದ ಮಲ್ಲಕಂಬ ಕ್ರೀಡೆಗೆ ಸಾಂಸ್ಕೃತಿಕ ಸ್ವರೂಪ ನೀಡಿ, ವೇದಿಕೆಯ ಮೇಲೆ ಪ್ರದರ್ಶನವಾಗಿ ಪರಿವರ್ತಿಸುವ ಹಿಂದೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವರ ಕನಸಿದೆ. ಸದ್ಯ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಪುರುಷರ ಮಲ್ಲಕಂಬ ಹಾಗೂ ಮಹಿಳೆಯರ ರೋಪ್ ಸ್ಪರ್ಧೆಯಲ್ಲಿ ಆಳ್ವಾಸ್ ಕನ್ನಡ ಶಾಲೆಯ ವಿದ್ಯಾರ್ಥಿಗಳು ಹೆಸರು ಮಾಡುತ್ತಿದ್ದಾರೆ. ಕಂಬವನ್ನು ಏರಿ ಅವರು ನೀಡುತ್ತಿದ್ದ ಪ್ರದರ್ಶನ ರೋಮಾಂಚನ ನೀಡಿತು.
ಬಸವರಾಜ್ ಹಾಗೂ ಚೇತನ್ ತರಬೇತಿಯಲ್ಲಿ ಮೂಡಿ ಬಂದ ಮಲ್ಲಕಂಬ ಮತ್ತು ರೋಪ್ ಕಸರತ್ತು ಕಲಾಕ್ರೀಡೆಯಾಗಿ ಮೆರಗು ನೀಡಿತು. ಅಂತರ ರಾಷ್ಟ್ರೀಯ ಮಲ್ಲಕಂಬ ಸ್ಪರ್ಧೆಗೆ ತೆರಳಿದ ತಂಡದಲ್ಲಿದ್ದ ಏಕೈಕ ಕರ್ನಾಟಕ ಪ್ರತಿನಿಧಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಎಂಬ ಹೆಮ್ಮೆಯನ್ನು ಕಾರ್ಯಕ್ರಮ ನಿರೂಪಿಸಿದ ನಿತೇಶ್ ಮಾರ್ನಾಡು ತಿಳಿಸಿದರು.
ಮಂಗಳೂರಿನ ಅರೆಹೊಳೆ ಪ್ರತಿಷ್ಠಾನದ ಸದಸ್ಯರು ‘ಹನುಮಾನ್ ಚಾಲೀಸಾ’ ನತ್ಯ ರೂಪಕ ನಡೆಸಿಕೊಟ್ಟರು. ಶ್ವೇತಾ ಅರೆಹೊಳೆ ನಿರ್ದೇಶನದಲ್ಲಿ ರೂಪಕ ಮೂಡಿ ಬಂತು. ಬಳಿಕ ಗುಜರಾತಿ ಜಾನಪದ ವೈಭವದ ನೃತ್ಯಗಳ ಪ್ರದರ್ಶನವನ್ನು ಮಲಹರ್ ತಂಡವು ನೀಡಿತು. ‘ ಗುಜರಾತ್ ಬಂಧನ್’ ಹಾಡಿನೊಂದಿಗೆ ತೆರೆಬಿತ್ತು.
Click this button or press Ctrl+G to toggle between Kannada and English