ಹುಬ್ಬಳ್ಳಿ : ಜೆಡಿಎಸ್ ಪಕ್ಷದಲ್ಲಿ ಹಲವಾರು ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತರಾಗಿ ಹಾಗೂ ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಎಸ್ ಎಸ್ ಕೆ ಶ್ರೀ ಸಹಸ್ರಾರ್ಜುನ ಸೋಮವಂಶ ಕ್ಷತ್ರೀಯ ಸಮಾಜದ ಧಾರವಾಡ ಜಿಲ್ಲಾ ಯುವ ಘಟಕದ ಅಧ್ಯಕ್ಷ, ಹು-ಧಾ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ರಾಜು ಅನಂತಸಾ ನಾಯಕವಾಡಿ ಅವರಿಗೆ ಉಜ್ವಲ ರಾಜಕೀಯ ಭವಿಷ್ಯವಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಹೇಳಿದರು.
ಅವರು ಬುಧವಾರ ನಗರದ 33,51,52,53 ನೇ ವಾರ್ಡ್ ವ್ಯಾಪ್ತಿಯ ಮತದಾರರಿಗೆ ಚುನಾವಣಾ ಪೂರ್ವ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.
ರಾಜು ನಾಯಕವಾಡಿಯವರು ಜೆಡಿಎಸ್ ಪಕ್ಷವೇ ತನ್ನ ತಾಯಿ ಎಂದು ಜನಸೇವೆ ಮಾಡುತ್ತಿರುವುದು ಮುಂಬರುವ ದಿನಗಳಲ್ಲಿ ಇವರು ಪ್ರಮುಖ ಜನನಾಯಕನಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಹುಬ್ಬಳ್ಳಿ ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜನರೊಂದಿಗೆ ಪ್ರತಿನಿತ್ಯ ಸಂಪರ್ಕದಲ್ಲಿರುವುದು ಮತ್ತು ನಿರಂತರವಾಗಿ ಜನಸೇವೆ ಮಾಡುತ್ತಿರುವುದು ರಾಜು ನಾಯಕವಾಡಿ ಅವರ ಜನಸೇವೆಗೆ ಸಾಕ್ಷಿ ಎಂದು ಶ್ಲಾಘಿಸಿದರು.
ಲೋಕಸಭಾ ಚುನಾವಣೆ, ವಿಧಾನಸಭೆ ಹಾಗೂ ಹು-ಧಾ ಮಹಾನಗರ ಚುನಾವಣೆಯಲ್ಲಿ ಸ್ಪರ್ಧಿಸಿ ಜನರ ನಾಡಿ ಮಿಡಿತ ಮತ್ತು ಜನರು ಅನುಭವಿಸುತ್ತಿರುವ ಸಮಸ್ಯೆಗಳನ್ನು ಮತ್ತು ಕ್ಷೇತ್ರದಲ್ಲಿ ಆಗಬೇಕಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಅರಿತಿದ್ದಾರೆ. ಅಲ್ಲದೇ ಯಾವುದೇ ಅಧಿಕಾರವಿಲದಿದ್ದರೂ ಜನರ ಸೇವೆ ಹಗಲಿರುಳೆನ್ನದೇ ಇವರು ಮಾಡುತ್ತಿರುವುದನ್ನು ಗುರುತಿಸಿಯೇ ಇವರನ್ನು ಸೆಂಟ್ರಲ್ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷರನ್ನಾಗಿಸಿ ಪಕ್ಷದ ಸಂಘಟನೆಯ ಜವಾಬ್ದಾರಿ ನೀಡಲಾಗಿದೆ. ಇವರ ಜನಸೇವೆ ಪಕ್ಷ ಗುರುತಿಸಿದೆ. ಇಂಥಹ ಜನನಾಯಕರ ಈ ದಿನಗಳಲ್ಲಿ ಅತ್ಯವಶ್ಯವಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ರಾಜು ನಾಯಕವಾಡಿ, ಪಕ್ಷದ ಹಿರಿಯರಾದ ಜೆಡಿಎಸ್ ಅಧ್ಯಕ್ಷ ಮಾಜಿ ಪಿಎಂ ಎಚ್.ಡಿ.ದೇವೇಗೌಡರ ಮತ್ತು ಕುಮಾರಸ್ವಾಮಿಯವರ ನಿರಂತರ ಜನಸೇವೆ ನನಗೆ ಮಾದರಿ ಮತ್ತು ನನಗೆ ಉತ್ಸಾಹ ತುಂಬುತ್ತದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಪಕ್ಷ ಸಂಘಟನೆ ಮತ್ತು ಜನಸೇವೆ ಮಾಡುತ್ತೇನೆ. ತಮ್ಮ ಆಶೀರ್ವಾದ ನಿರಂತರವಾಗಿ ನನ್ನ ಮೇಲಿರಲಿ ಎಂದು ಕೋರಿದರು.
ಕ್ಷೇತ್ರದಲ್ಲಿ ಎಲ್ಲ ಸಮಾಜದ ಮುಖಂಡರು ನನ್ನ ಬೆನ್ನಿಗೆ ನಿಂತು ಬೆಂಬಲ ನೀಡುತ್ತಿದ್ದಾರೆ ಎಂದ ರಾಜು ನಾಯಕವಾಡಿ ಮುಂಬರುವ ವಿಧಾನಸಭಾ ಚುನಾವಣೆಗೆ ನೂರಾರು ಕಾರ್ಯಕರ್ತರೊಂದಿಗೆ ಸಂಪೂರ್ಣ ಸಿದ್ಧತೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಜನತೆ ಮುಂದಿನ ಚುನಾವಣೆಯಲ್ಲಿ ಮತ ಚಲಾಯಿಸುವಾಗ ಜಾಗೃತಿ ವಹಿಸಿಕೊಂಡು ಅಭಿವೃದ್ಧಿ ಕಾರ್ಯ ಗಮನದಲ್ಲಿಟ್ಟುಕೊಂಡು ಮತ ಚಲಾಯಿಸಬೇಕು. ಇಷ್ಟು ದಿನ ನೀವೆಲ್ಲರೂ ಕೇವಲ ಮತ ಚಲಾಯಿಸಿ ಸುಮ್ಮನಾಗಬಾರದು. ಯಾವುದೇ ರೀತಿಯ ಆಸೆ, ಆಮೀಷಕ್ಕೆ ಒಳಗಾಗಬಾರದೆಂದು ಮನವಿ ಮಾಡಿದರು. ಜೆಡಿಎಸ್ ಪಕ್ಷ ಯಾವತ್ತೂ ನಿಮ್ಮ ಸೇವೆ ಸಿದ್ಧವಿದೆ. ನಾನೂ ಕೂಡ ದಿನದ 24 ಗಂಟೆಯೂ ನಿಮ್ಮ ಸೇವೆಗೆ ಸಿದ್ಧನಿದ್ದೇನೆ. ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ನನಗೆ ತಿಳಿಸಿದರೆ, ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ತಿಳಿಸಿ ಮುಂದೆ ನಿಂತು ಅಭಿವೃದ್ಧಿ ಕೆಲಸ ಮಾಡಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ನೂರಾರು ಕಾರ್ಯಕರ್ತರು ಮಹಿಳಾ ಸದಸ್ಯರು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಮತ್ತು ವಾರ್ಡ್ ಮತ್ತು ಬ್ಲಾಕ್ ಅಧ್ಯಕ್ಷರನ್ನು ವೇದಿಕೆಯಲ್ಲಿ ನೇಮಕ ಮಾಡಿ ಹೆಸರನ್ನು ಘೋಷಿಸಲಾಯಿತು.
ಈ ಸಂದರ್ಭದಲ್ಲಿ ಲತಾ ತೇರದಾಳ, ಸರಸ್ವತಿ ಕಟ್ಟೀಮನಿ, ಭಾಷಾ ಮುದಗಲ್, ಆನಂದ ಹಬೀಬ ಸೇರಿದಂತೆ ಜೆಡಿಎಸ್ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಹಾಗೂ ವಿವಿಧ ಸಮಾಜದ ಮುಖಂಡರು, ಸಂಘ-ಸಂಸ್ಥೆಗಳ ಧುರೀಣರು ಎಲ್ಲ 4 ವಾರ್ಡ್ ಗಳ ಜನತೆ ಹಾಜರಿದ್ದರು.
Click this button or press Ctrl+G to toggle between Kannada and English