ವ್ಯಕ್ತಿತ್ವ ನಿರ್ಮಾಣದಿಂದಷ್ಟೇ ದೇಶ ನಿರ್ಮಾಣ ಸಾಧ್ಯ: ಕ್ಯಾಪ್ಟನ್ ಗಣೇಶ್ ಕಾರ್ಣಿಕ್

10:34 PM, Friday, January 20th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಮಂಗಳೂರು : ಒಳ್ಳೆಯ ವಿಚಾರಗಳೊಂದಿಗೆ ನಮ್ಮನ್ನು ನಾವು ಜೋಡಿಸಿಕೊಳ್ಳುವುದು ಮತ್ತು ವ್ಯಕ್ತಿತ್ವ ನಿರ್ಮಾಣದಿಂದ ಮಾತ್ರ ದೇಶ ನಿರ್ಮಾಣ ಸಾಧ್ಯ, ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶುಕ್ರವಾರ 2022 -23ನೇ ಸಾಲಿನ ಕಾಲೇಜಿನ ವಿದ್ಯಾರ್ಥಿ ಸಂಘವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಜ್ಞಾವಂತ ಜನರೇ ಪ್ರಜಾಪ್ರಭುತ್ವದ ಬೇರುಗಳು. ಆದರೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ನಾವು ನಮ್ಮಲ್ಲಿ ಬದ್ಧತೆ, ಕರ್ತವ್ಯಪ್ರಜ್ಞೆ, ಕ್ರಿಯಶೀಲತೆ ಬೆಳೆಸಿಕೊಂಡಿಲ್ಲ, ಬದಲಾಗಿ ಭ್ರಷ್ಟತೆ, ಬೇಜಾವಾಬ್ದಾರಿಯಷ್ಟೇ ಕಾಣುತ್ತದೆ. ಹೀಗಾದರೆ ನಾವು ಭವಿಷ್ಯದ ಸಮಸ್ಯೆಗಳನ್ನು ಪರಿಹರಿಸುವ ಮಾನವ ಸಂಪನ್ಮೂಲವಾಗಲು ಸಾಧ್ಯವೇ? 10-15 ವರ್ಷಗಳ ಉನ್ನತ ಶಿಕ್ಷಣ ಪಡೆದರೂ ಏಕೆ ಹೇಗಾಗುತ್ತಿದೆ ಎಂದು ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಿದೆ. ಹಿರಿಯರ ಮೌಲ್ಯಗಳನ್ನು ಪಾಲಿಸಿದರೆ ಮಾತ್ರ ನಾವು ಶ್ರೀಮಂತ ಪರಂಪರೆಯ ವಾರಸುದಾರರಾಗಲು ಸಾಧ್ಯ, ಎಂದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನಸೂಯ ರೈ, ನಮ್ಮದು ರಾಜ್ಯದಲ್ಲೇ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದು ಎಂಬುದು ಹೆಮ್ಮೆಯ ಸಂಗತಿ. ನೂತನ ರಾಷ್ಟ್ರೀಯ ಶಿಕ್ಷಣ ಪದ್ಧತಿ- 2020 ಯ ಜಾರಿಯಿಂದ ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಾಯವಾಗಿದೆ. ಎಲ್ಲರೂ ಒಂದಾಗಿ ಸಾಗಬೇಕಿರುವುದು ಈಗಿನ ಅಗತ್ಯತೆ, ಎಂದರು.

ವಿದ್ಯಾರ್ಥಿ ಸಂಘದ ಉಪ ನಿರ್ದೇಶಕ ಡಾ. ಎ ಹರೀಶ ಹಾಗೂ ಹಿರಿಯ ಕನ್ನಡ ಉಪನ್ಯಾಸಕಿ ಡಾ. ಶೈಲಾ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಜನ್ ವಿ. ಶೆಟ್ಟಿ ಧನ್ಯವಾದ ಸಮರ್ಪಿಸಿದರು. ತೃತೀಯ ಬಿ.ಕಾಂನ ಶ್ರದ್ಧಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ತಶ್ವಿತ್ ಎಂ.ಬಿ, ಸಹ ಕಾರ್ಯದರ್ಶಿ ಯಶಸ್ವಿ ಕೆ, ಲಲಿತ ಕಲಾ ಸಂಘದ ಕಾರ್ಯದರ್ಶಿ ಪ್ರತೀಕ್ಷಾ ಪಿ, ಸಹ ಕಾರ್ಯದರ್ಶಿ ಶರಣ್ಯ ಪಿ ಮೊದಲಾದವರು ಉಪಸ್ಥಿರಿದ್ದರು.

ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಇದ್ದರು. ವಿದ್ಯಾರ್ಥಿಗಳು ನಡೆಸಿಕೊಟ್ಟ ಸಾಂಸ್ಕೃತಿಕ ವೈವಿಧ್ಯ ನೋಡುಗರ ಗಮನ ಸೆಳೆಯಿತು. ಅಂತಿಮ ಬಿಎ ಯ ಶಿವಪ್ರಸಾದ್ ಬಿ ಮತ್ತು ಪ್ರತೀಕ್ಷಾ ಪಿ ಸಾಂಸ್ಕೃತಿಕ ಕಾರ್ಯಕ್ರಮ ನಿರೂಪಿಸಿದರು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English