ಹಾವೇರಿ: ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ರಾಜ್ಯದ ಭದ್ರಾ ಮೇಲ್ದಂಡೆ ಯೋಜನೆಗೆ ರೂ. 5300 ಕೋಟಿ ಘೋಷಣೆ ಮಾಡಿದ್ದಾರೆ. ಅದನ್ನು ನಾನು ಸ್ವಾಗತ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹರ್ಷ ವ್ಯಕ್ತಪಡಿಸಿದರು.
ಇಂದು ಬೆಂಗಳೂರಿನಿಂದ ಬ್ಯಾಡಗಿ ತಾಲ್ಲೂಕಿನ ಶಿಡೇನೂರು ಗ್ರಾಮಕ್ಕೆ ಆಗಮಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಕರ್ನಾಟಕದ ಪ್ರಮುಖ ನೀರಾವರಿ ಯೋಜನೆ. ಮಧ್ಯ ಕರ್ನಾಟಕದ ಬರಗಾಲ ಪೀಡಿತ, ಬಿಸಿಲು ಪ್ರದೇಶದ ನಾಡಿಗೆ ಒಂದು ಲಕ್ಷಕ್ಕಿಂತ ಹೆಕ್ಟರ್ ಪ್ರದೇಶಕ್ಕೆ ನೀರಾವರಿ, ಕುಡಿಯುವ ನೀರಿನ ಮಹತ್ವದ ಯೋಜನೆ ಇದಾಗಿದ್ದು, ಇದರಿಂದ ಬಹಳ ಅನುಕೂಲವಾಗಲಿದೆ. ರಾಷ್ಟ್ರೀಯ ಯೋಜನೆಯಾಗಿ ಮಾಡುವಂತೆ ಮೊದಲೇ ಪ್ತಸ್ತಾವನೆ ಕಳಿಸಿದ್ದೆವು. ಹೀಗಾಗಿ 5300 ಕೋಟಿ ನೀಡಿದ್ದು ಸ್ವಾಗತಾರ್ಹ ಎಂದರು.
ಕರ್ನಾಟಕದ ಹಲವಾರು ಯೋಜನೆಗಳಲ್ಲಿ ಇದು ಮೊದಲು ರಾಷ್ಟ್ರೀಯ ಯೋಜನೆ. ಈ ಯೋಜನೆಗೆ ಇಷ್ಟು ದೊಡ್ಡ ಪ್ರಮಾಣದ ಅನುನಾದ ಘೋಷಣೆ ಮಾಡಿದ್ದು ಸಂತಸದ ಸಂಗತಿ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ರೈತರ ಫಲವತ್ತಾದ ಭೂಮಿಯಲ್ಲಿ ಕಾರಿಡಾರ್ ಬೇಡ
ಬ್ಯಾಡಗಿ ಇಂಡಸ್ಟ್ರಿಯಲ್ ಕಾರಿಡಾರ್ ಭೂ ಸ್ವಾದೀನಕ್ಕೆ ರೈತರ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಫಲವತ್ತಾದ ಭೂಮಿ ಇರುವ ಕಾರಣ ರೈತರು ವಿರೋಧ ಮಾಡಿದ್ದಾರೆ. ಎಲ್ಲಿ ಫಲವತ್ತಾದ ಭೂಮಿ ಇರುತ್ತದೆ, ಅದನ್ನು ತೆಗೆದುಕೊಳ್ಳದೆ ಬಂಜರು ಭೂಮಿ ತಗೊಂಡು ಕೈಗಾರಿಕಾ ಕಾರಿಡಾರ್ ಮಾಡಬೇಕು ಅಂತ ನಿರ್ಧಾರ ಮಾಡಿದ್ದೇವೆ. ಅದಕ್ಕಾಗಿಯೇ ಬ್ಯಾಡಗಿ ಇಂಡಸ್ಟ್ರಿಯಲ್ ಕಾರಿಡಾರ್ ಗೆ ಭೂ ಸ್ವಾಧೀನ ಪ್ರಕ್ರಿಯೆ ಆದೇಶ ಹಿಂಪಡೆದಿದ್ದೇವೆ. ಹಾವೇರಿ ಜಿಲ್ಲೆಯಲ್ಲಿ ಬೇರೆ ಕಡೆ ಎಲ್ಲಿ ಕಾರಿಡಾರ್ ಮಾಡಬೇಕು ಎಂಬುದರ ಬಗ್ಗೆ ಜಮೀನು ಹುಡುಕಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
Click this button or press Ctrl+G to toggle between Kannada and English