ಮಂಗಳೂರು: ಕಾಂಗ್ರೆಸ್ ಯುವ ಮುಖಂಡ ಮಿಥುನ್ ರೈ ಅವರು ಉಡುಪಿಯಲ್ಲಿ ಶ್ರೀಕೃಷ್ಣ ಮಠಕ್ಕೆ ಮುಸ್ಲಿಂ ರಾಜರೊಬ್ಬರು ಭೂಮಿ ಕೊಟ್ಟಿದ್ದಾರೆ ಎಂದು ವಿವಾದಾತ್ಮಕ ಹೇಳಿಕೆ ನೀಡಿ ಬಿಜೆಪಿ ಮುಖಂಡರು ಹಾಗೂ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದಾರೆ.
ಮೂಡಬಿದಿರೆಯ ಪುತ್ತಿಗೆಯಲ್ಲಿ ನಡೆದ ನಮ್ಮೂರ ಮಸೀದಿ ನೋಡ ಬನ್ನಿ ಕಾರ್ಯಕ್ರಮದಲ್ಲಿ ರೈ ಈ ಹೇಳಿಕೆ ನೀಡಿದ್ದಾರೆ. ಹಿಂದೂ ಪರ ಸಂಘಟನೆಗಳಿಂದ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ರೈ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದು, ಧಾರ್ಮಿಕ ಸಾಮರಸ್ಯದ ಅಸ್ತಿತ್ವವನ್ನು ಎತ್ತಿ ಹಿಡಿಯಲು ಈ ಹೇಳಿಕೆ ನೀಡಿರುವುದಾಗಿ ಹೇಳಿದ್ದಾರೆ.
ರೈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಉಡುಪಿ ಶಾಸಕ ರಘುಪತಿ ಭಟ್, ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ ಎಂದು ಪ್ರತಿಪಾದಿಸಿದರು. 850 ವರ್ಷಗಳ ಹಿಂದೆ ರಾಮಭೋಜರು ಅನಂತೇಶ್ವರ ದೇವಸ್ಥಾನಕ್ಕೆ ನೀಡಿದ ಜಾಗದಲ್ಲಿ ಮಧ್ವಾಚಾರ್ಯರು ಮಠ ನಿರ್ಮಿಸಿದ್ದರು ಎಂಬ ಐತಿಹಾಸಿಕ ಉಲ್ಲೇಖಗಳಿವೆ ಎಂದರು.
ಉಡುಪಿಯ ಜಾಮಿಯಾ ಮಸೀದಿಯು ಈ ಹಿಂದೆ ಜಂಗಮರ ಮಠವಾಗಿತ್ತು ಮತ್ತು ಕೃಷ್ಣಾಪುರ ಮಠವು ಮದರ್ ಆಫ್ ಸಾರೋಸ್ ಚರ್ಚ್‌ಗೆ ಭೂಮಿಯನ್ನು ನೀಡಿತ್ತು ಎಂಬ ಉಲ್ಲೇಖಗಳಿವೆ ಎಂದು ಅವರು ಹೇಳಿದರು.
ಉಡುಪಿಯು ಧಾರ್ಮಿಕ ಸೌಹಾರ್ದತೆಗೆ ಬಹಳ ಹಿಂದಿನಿಂದಲೂ ಹೆಸರುವಾಸಿಯಾಗಿದೆ ಮತ್ತು ಹಾಜಿ ಅಬ್ದುಲ್ಲಾ ಅವರು ಕೃಷ್ಣ ಮಠಕ್ಕೆ ಗಮನಾರ್ಹ ಧಾರ್ಮಿಕ ದೇಣಿಗೆಗಳನ್ನು ನೀಡಿದ್ದಾರೆ ಎಂದು ರಘುಪತಿ ಭಟ್ ಹೇಳಿದರು.
ಶಾಸಕ ರಘುಪತಿ ಭಟ್ ಅವರು “ಮುಸ್ಲಿಂ ರಾಜ” ಯಾರು ಎಂದು ಕೇಳುವ ಮೂಲಕ ರೈ ಅವರ ಹೇಳಿಕೆಯನ್ನು ಪ್ರಶ್ನಿಸಿದರು. ರೈ ಅವರ ಹೇಳಿಕೆಯನ್ನು ಬೆಂಬಲಿಸಲು ಯಾವುದೇ ಪುರಾವೆಗಳಿಲ್ಲ ಎಂದು ರಘುಪತಿ ಭಟ್ ಹೇಳಿದ್ದಾರೆ.
ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್ ಸೇರಿದಂತೆ ಹಿಂದೂಪರ ಸಂಘಟನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿ ಮತ್ತಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿವೆ.
Click this button or press Ctrl+G to toggle between Kannada and English