ಉಪ್ಪಿನಂಗಡಿ : ಮನೆಗೆ ನುಗ್ಗಿ ಬಾಲಕಿಯ ಅತ್ಯಾಚಾರಕ್ಕೆ ಯತ್ನಿಸಿದ ಇಬ್ಬರ ಬಂಧನ

12:42 PM, Monday, March 13th, 2023
Share
1 Star2 Stars3 Stars4 Stars5 Stars
(No Ratings Yet)
Loading...

ಉಪ್ಪಿನಂಗಡಿ: ಉಪ್ಪಿನಂಗಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆಗೆ ನುಗ್ಗಿ ಬಾಲಕಿಯೋರ್ವಳನ್ನು ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ನಡೆದಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಕಡಬ ತಾಲೂಕಿನ ಕೊಯಿಲ ಗ್ರಾಮದ ನಿವಾಸಿಗಳಾದ ಹಸೈನಾರ್ (24) ಹಾಗೂ ಅಬ್ಬಾಸ್ (30) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.

ಅವರು ಕಳೆದ ಮೂರು ದಿನಗಳಿಂದ ಮರ ತುಂಡರಿಸುವ ಕೆಲಸದ ನಿಮಿತ್ತ ಕರಾಯ ಗ್ರಾಮದಲ್ಲಿ ಕಾರ್ಯ ನಿರ್ವಹಿಸಿದ್ದು, ಈ ಸಂದರ್ಭ ನೀರು ಕೇಳುವ ನೆಪದಲ್ಲಿ ಸಂತ್ರಸ್ತ ಬಾಲಕಿಯ ಮನೆಗೆ ಹೋಗಿದ್ದರು. ಮನೆಯಲ್ಲಿನ ಸದಸ್ಯರ ಬಗ್ಗೆ ಗಮನಿಸಿದ ಆರೋಪಿಗಳ ಪೈಕಿ ಹಸೈನಾರ್ ಶುಕ್ರವಾರ ಸಂಜೆ ಸಂತ್ರಸ್ತೆಯ ಮನೆಗೆ ಬಂದು ಮರ ತುಂಡರಿಸುವ ಚೈನ್ ಇಲ್ಲಿ ಬಾಕಿಯಾಗಿದೆ ಎಂದು ಹೇಳಿ ಬಾಲಕಿಯ ಕೈಗೆ ಚೀಟಿಯೊಂದನ್ನು ನೀಡಿ, ಈ ನಂಬ್ರರಿಗೆ ಫೋನ್ ಮಾಡು, ಇಲ್ಲದಿದ್ದರೆ ನಿನ್ನನ್ನು ಬಿಡುವುದಿಲ್ಲ ಎಂಬುವುದಾಗಿ ಜೀವ ಬೆದರಿಕೆಯೊಡ್ಡಿ ಹೋಗಿದ್ದ ಎಂದು ದೂರಲಾಗಿದೆ.

ಮರು ದಿನ ರಾತ್ರಿ 8 ಗಂಟೆಯ ಸುಮಾರಿಗೆ ದ್ವಿಚಕ್ರ ವಾಹನದಲ್ಲಿ ತನ್ನ ಸಹಚರ ಅಬ್ಬಾಸ್ ಎಂಬಾತನೊಂದಿಗೆ ಬಂದ ಆರೋಪಿಯು ಮನೆಯ ಒಳಗೆ ಅಕ್ರಮವಾಗಿ ಪ್ರವೇಶ ಮಾಡಿ, ಬಾಲಕಿಯನ್ನು ಅತ್ಯಾಚಾರಕ್ಕೆ ಯತ್ನಿಸಿದ್ದ ಎನ್ನಲಾಗಿದ್ದು, ಈ ವೇಳೆ ಬಾಲಕಿ ಹಾಗೂ ಬಾಲಕಿಯ ತಾಯಿ ರಕ್ಷಣೆಗಾಗಿ ಬೊಬ್ಬೆ ಹೊಡೆದಾಗ ನೆರೆ ಮನೆಯವರು ಓಡಿ ಬಂದು ಬಾಲಕಿಯನ್ನು ರಕ್ಷಿಸಿದ್ದಾರೆ. ಬಳಿಕ ಸ್ಥಳೀಯರ ಸಹಕಾರದಿಂದ ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಯಿತು ಎಂದು ತಿಳಿದುಬಂದಿದೆ.

ಆರೋಪಿಗಳನ್ನು ವಶಕ್ಕೆ ಪಡೆದ ಪೊಲೀಸರು, ಅವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English