ತುಳುನಾಡಿಗೆ ಪತ್ತನಾಜೆ ಅಂದರೆ ಬೇಷ (ಮೇಷ) ತಿಂಗಳ ಹತ್ತನೇ ದಿನ. ಅನಾದಿಯಿಂದಲೇ ತುಳುನಾಡಿನ ಜನ ತಮಗೆ ತಾವೇ ವಿಧಿಸಿಕೊಂಡು ಬಂದಿರುವ ಧಾರ್ಮಿಕ, ಸಾಮಾಜಿಕ ಗಡುವೇ ಈ ಪತ್ತನಾಜೆ. ಅಂದಿನಿಂದ ಇಂದಿಗೂ ಆಚರಣೆ, ನಂಬಿಕೆಯ ತಳಹದಿಯಲ್ಲಿ ಈ ಪತ್ತನಾಜೆ ಪದ್ಧತಿಯ ಆಚರಣೆ ಅನುಚಾನವಾಗಿ ನಡೆದು ಬಂದಿದೆ. ಬಹುತೇಕ ವರ್ಷಗಳಲ್ಲಿ ಮೇ 24ರಂದೇ ಬೇಷ ತಿಂಗಳ ಹತ್ತನೇ ದಿನ ಬರುವುದು ವಾಡಿಕೆ. ಅಪೂರ್ವದಲ್ಲಿ ಕೆಲವೊಮ್ಮೆ ಅದು ಮೇ 25ರಂದು ಬರುವುದುಂಟು. ಈ ಪತ್ತನಾಜೆಯಂದು ದೇವಸ್ಥಾನಗಳಲ್ಲಿ ನಡೆಯುವ ವಾರ್ಷಿಕ ಜಾತ್ರೋತ್ಸವ, ವಿಶೇಷ ಪರ್ವಗಳು , ಉತ್ಸವಗಳು ಕೊನೆಗೊಳ್ಳುತ್ತದೆ. ಮುಂದಿನ ಮೂರು ತಿಂಗಳು ಬಿಡುವು; ಈ ಸಂದರ್ಭದಲ್ಲಿ ಯಾವುದೇ ವಿಶೇಷ ಉತ್ಸವಗಳು ಇಲ್ಲಿನ ದೇವಸ್ಥಾನಗಳಲ್ಲಿ ನಡೆಯುವುದಿಲ್ಲ, ನಿತ್ಯ ಪೂಜೆ, ನಿತ್ಯ ಬಲಿ ಮಾತ್ರ ಮುಂದುವರೆಸಿಕೊಂಡು ಹೋಗಲಾಗುತ್ತದೆ ಅಷ್ಟೆ.
ಈ ಪತ್ತನಾಜೆ ಪರಿಪಾಠವನ್ನು ತುಳು ಭಾಷಿಕರು ಹಬ್ಬಿಕೊಂಡಿರುವ ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಪಾಲಿಸಲಾಗುತ್ತದೆ. ವಿಶೇಷವಾಗಿ ದೈವಾರಾಧನೆಯ ಅಂಗಳವಾಗಿರುವ ತುಳುನಾಡಿಲಿನಲ್ಲಿ ಕೋಲ, ನೇಮ, ತಂಬಿಲ, ಅಗೇಲು, ಮುಂತಾದ ದೈವಾಚರಣೆಗಳು, ಗ್ರಾಮ ದೈವಗಳು ಪರ್ವ ಮುಂತಾದವು ಈ ಪತ್ತನಾಜೆಯಂದೇ ಮುಗಿಯಲೇಬೇಕು ಎಂಬುದು ಇಲ್ಲಿನ ನಂಬಿಕೆ. ಪತ್ತನಾಜೆ ಮುಗಿದರೆ ದೈವಗಳು ಘಟ್ಟ ಹತ್ತುತ್ತವೆ ಎಂಬ ನಂಬಿಕೆಯೂ ಇದರ ಒಳಗೆ ಹೆಣೆದು ಕೊಂಡಿದೆ. ಮಳೆಗಾಲದಲ್ಲಿ ಉತ್ಸವ ನಡೆಸಲು ಕಷ್ಟಕರವಾದ ಕಾರಣ ಈ ಗಡುವು ಮತ್ತು ನಂಬಿಕೆ ಹುಟ್ಟಿಕೊಂಡಿರಬಹುದು ಎಂದು ಭಾವಿಸಲಾಗಿದೆ.
ಬೇಷ ತಿಂಗಳ ಹತ್ತನೇ ದಿನವೇ ಪತ್ತನಾಜೆ. ಅಂದಿನಿಂದ ಮಳೆಗಾಲ ಆರಂಭ ಎಂಬುದು ಅನಾದಿಯಿಂದಲೂ ತುಳುನಾಡಿನ ಹವಾಮಾನ ಅಭ್ಯಾಸ ಮಾಡಿದ ಇಲ್ಲಿನ ಜನ ಮಾಡಿಕೊಂಡ ಪಂಚಾಂಗ.
ಆರು ತಿಂಗಳು ಮಳೆ, ಆರು ತಿಂಗಳು ಬಿಸಿಲು ಎಂಬುದು ತುಳುನಾಡಿನ ಹವಾಮಾನ. ಬಿಸು ಪರ್ಬದ ದಿನ ಹೊಸ ವರ್ಷದ ಬೇಸಾಯಕ್ಕೆ ಮುನ್ನುಡಿ ಬರೆಯುವ ಕ್ರಮ ಹಿಂದೆ ಚಾಲ್ತಿಯಲ್ಲಿತ್ತು. ಬಳಿಕ ಬೇಸಾಯದ ಕೆಲಸದಲ್ಲಿ ರೈತರು ಬಿಡುವಿಲ್ಲದೆ ತೊಡಗಿಕೊಳ್ಳುವ ಕಾರಣ ನಂತರ ಉತ್ಸವಾದಿ ಸಂಭ್ರಮಗಳಲ್ಲಿ ಪಾಲ್ಗೊಳ್ಳಲು ಯಾರಿಗೂ ಪುರುಸೊತ್ತಿಲ್ಲ. ಅದೇ ರೀತಿ ಮಳೆಯ ಮಧ್ಯೆ ಯಾವ ಉತ್ಸವ ನಡೆಸುವುದೂ ಅಸಾಧ್ಯ. ಹೀಗಾಗಿ ಈ ಗಡುವು ನಡೆದುಕೊಂಡು ಬಂದಿದೆ. ಇತ್ತೀಚಿನ ದಶಕಗಳಲ್ಲಿ ಬೇಸಾಯವೇ ಕಣ್ಮರೆಯಾಗುತ್ತಿರುವ ಕಾರಣ ಪತ್ತನಾಜೆಗೂ ಕೃಷಿಕರಿಗೂ ಸಂಬಂಧ ಇಲ್ಲಎಂಬತಾಗಿದೆ. ಆದರೂ ಧಾರ್ಮಿಕ ನೆಲೆಗಟ್ಟಿನಲ್ಲಿ ಪತ್ತನಾಜೆಯ ಆಚರಣೆ ಉಳಿದುಕೊಂಡಿದೆ.
Click this button or press Ctrl+G to toggle between Kannada and English