- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಆತ್ಮಗೌರವ, ಸ್ವಾಭಿಮಾನ, ನಿಸ್ವಾರ್ಥ ಸೇವೆಯಿಂದ ಶಕ್ತಿಶಾಲಿ ರಾಷ್ಟ್ರ ನಿರ್ಮಾಣವಾಗುತ್ತದೆ : ಮೋಹನ್ ಭಾಗವತ್

RSS Vibhag Sanghik [1]ಮಂಗಳೂರು : ಯುವಜನತೆಯೇ ದೇಶದ ಶಕ್ತಿ, ಯುವಜನತೆ ಕೈಗೆತ್ತಿಕೊಂಡ ಸದಾಶಯದ ಕಾರ್ಯಗಳೆಲ್ಲವೂ ಗುರಿ ತಲುಪುವಂತೆ ರಾಷ್ಟ್ರೀಯ ಸ್ವಯಂಸೇವಕ ಸಂಘವು ಮಾರ್ಗದರ್ಶನವನ್ನು ನೀಡುತ್ತಿದೆ. ಆತ್ಮಗೌರವ, ಸ್ವಾಭಿಮಾನ, ಪರರ ಹಿತಕ್ಕಾಗಿ ನಿಸ್ವಾರ್ಥ ಸ್ಪಂದನದ ಕರ್ತವ್ಯವನ್ನು ಪ್ರತಿಯೋರ್ವನೂ ನಿರ್ವಹಿಸಿದಾಗ ತೇಜಸ್ವಿಯಾದ ಶಕ್ತಿಶಾಲಿ ರಾಷ್ಟ್ರ ನಿರ್ಮಾಣವಾಗುತ್ತದೆ. ಎಂದು ರಾಷ್ಟ್ರೀಯ ಸ್ವಯಂಸೇವ ಸಂಘದ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಹೇಳಿದರು.

RSS Vibhag Sanghik [2]ಬಜಪೆ ಸಮೀಪದ ಕೆಂಜಾರು ಬಳಿ ಭಾನುವಾರ ಸಂಘದ ಮಂಗಳೂರು ವಿಭಾಗದ ವತಿಯಿಂದ ನಡೆದ ಆರ್‌ಎಸ್‌ಎಸ್‌ನ ಸಾಂಘಿಕ್ ಕಾರ್ಯಕ್ರಮದಲ್ಲಿ  ಭಾಗವಹಿಸಿ ಅವರು ಮಾತನಾಡಿದರು. ಸಚ್ಚ್ಯಾರಿತ್ರ್ಯದಿಂದ ಕೂಡಿದ ಸಂಘಟನೆಯಿಂದ ಶಕ್ತಿ ದೊರೆಯುತ್ತದೆ. ಸ್ವಾಮಿ ವಿವೇಕಾನಂದರು ಸಚ್ಚ್ಯಾರಿತ್ರ್ಯದಿಂದ ಕೂಡಿದ ವ್ಯಕ್ತಿತ್ವ ಮತ್ತು ಸಂಘಟನೆಯ ಕನಸನ್ನು ಕಂಡಿದ್ದರು. ಅವರ ಚಿಂತನೆಯನ್ನು ಆರ್‌ಎಸ್‌ಎಸ್‌ನಲ್ಲಿ ಕಾಣಬಹುದಾಗಿದೆ. ವಿವೇಕಾನಂದರ ಜನ್ಮನಕ್ಷತ್ರಕ್ಕೆ ಅನುಗುಣವಾದ ಅವರ 150ನೇ ಜನ್ಮದಿನಾಚರಣೆಯ ದಿನವಾದ ಇಂದು ಇಲ್ಲಿ ಈ ಸಾಂಘಿಕ್‌ ನಡೆಯುತ್ತಿರುವುದು ಅತ್ಯಂತ ಔಚಿತ್ಯಪೂರ್ಣವಾಗಿದೆ ಎಂದರು.ಸುಸಂಸ್ಕೃತ ವ್ಯಕ್ತಿಯಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ. ಉತ್ತಮ ಸಮಾಜದಿಂದ ಬಲಿಷ್ಠ ದೇಶ ರೂಪುಗೊಳ್ಳುತ್ತದೆ. ಈ ಮೂಲಕ ಭಾರತವು ಜಗತ್ತಿಗೆ ಮಾರ್ಗದರ್ಶಕವಾಗುತ್ತದೆ ಎಂದು ಸಂಘದ ಸರಸಂಘಚಾಲಕ್‌ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟರು.

RSS Vibhag Sanghik [3]ಮಂಗಳೂರು, ಕಾಸರಗೋಡು, ಉಡುಪಿ, ದ.ಕ., ಕೊಡಗು ಜಿಲ್ಲೆಯಿಂದ ಸ್ವಯಂಸೇವಕರು ಆಗಮಿಸಿದ್ದರು. ಕಾರ್ಯಕ್ರಮ ಸಂಜೆ 4.30ಕ್ಕೆ ಪ್ರಾರಂಭಗೊಳ್ಳಬೇಕಾಗಿದ್ದರೂ, ಮಧ್ಯಾಹ್ನ 12 ಗಂಟೆಯಿಂದಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂ ಸೇವಕರ ಸಾಲು ಸಾಲಾಗಿ ಕಾರ್ಯಕ್ರಮಕ್ಕೆ  ಹರಿದುಬರುತ್ತಿದ್ದರು. ಸಂಜೆ ಕಾರ್ಯಕ್ರಮ ಮುಗಿವಲ್ಲಿಯವರೆಗೂ ಸ್ವಯಂಸೇವಕರು ಬರುತ್ತಲೇ ಇದ್ದರು. ಒಂದು ಲಕ್ಷಕ್ಕೂ ಅಧಿಕ ಮಂದಿ ಕೆಂಜಾರು ಮೈದಾನದಲ್ಲಿ ಜಮಾಯಿಸಿದ್ದರು. ಮೈದಾನದ ಕೇಂದ್ರದಲ್ಲಿ  ಸ್ವಯಂ ಸೇವಕರಿಗೆ ವ್ಯವಸ್ಥಿತವಾಗಿ ಕುಳಿತುಕೊಳ್ಳಲು ವ್ಯೆವಸ್ಥೆ ಕಲ್ಪಿಸಲಾಗಿತ್ತು ಹಾಗೂ 20 ಸಾವಿರ ಆಸನದ ವ್ಯವಸ್ಥೆ ಮೈದಾನದ ಸುತ್ತ ಸಜ್ಜುಗೊಳಿಸಲಾಗಿತ್ತು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ವಿಧಾನಸಭಾ ಉಪಸಭಾಧ್ಯಕ್ಷ ಎನ್‌. ಯೋಗೀಶ್‌ ಭಟ್‌, ಶಾಸಕರಾದ ಕೃಷ್ಣ ಜೆ. ಪಾಲೆಮಾರ್‌, ರಘುಪತಿ ಭಟ್‌, ವಿಧಾನ ಪರಿಷತ್‌ ಸದಸ್ಯರಾದ ಮೋನಪ್ಪ ಭಂಡಾರಿ, ಕ್ಯಾ| ಗಣೇಶ್‌ ಕಾರ್ಣಿಕ್‌, ಅಲ್ಪಸಂಖ್ಯಾಕ ಆಯೋಗದ ಅನ್ವರ್‌ ಮಾಣಿಪ್ಪಾಡಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಎ. ಕೋಟ್ಯಾನ್‌ ಮುಂತಾದವರು ಉಪಸ್ಥಿತರಿದ್ದರು.