ಅಟ್ಟಹಾಸ

2:53 PM, Friday, February 22nd, 2013
Share
1 Star2 Stars3 Stars4 Stars5 Stars
(No Ratings Yet)
Loading...

Attahaasaನೈಜ ಘಟನೆಗಳ ಸಿನಿಮಾ ಮಾಡುವುದರಲ್ಲಿ ಸಿದ್ಧ ಹಸ್ತರು ಎನ್ನುವುದು ಅಟ್ಟಹಾಸ ಚಿತ್ರದ  ನಿರ್ದೇಶಕ ಎಎಂಆರ್ ರಮೇಶ್ ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ.

ಈ ಹಿಂದೆ ಸೈನೈಡ್ ಚಿತ್ರ ನಿರ್ದೇಶಿಸಿ ಗೆದ್ದ ಎಎಂಆರ್ ರಮೇಶ್ ನಿರ್ದೇಶನದಲ್ಲಿ ಮೂಡಿ  ಬಂದ ಈ  ಚಿತ್ರ ಪ್ರಾರಭದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಆ ನಿರೀಕ್ಷೆಗಳು ಹುಸಿಯಾಗಿಲ್ಲ ಅನ್ನೋದು ಚಿತ್ರದ ಪ್ಲಸ್ ಪಾಯಿಂಟ್. ವೀರಪ್ಪನ್ ಹತ್ಯೆಯಾದ ಮೇಲೆ ಆತನ ಕುರಿತು ಯಾರೂ ಸಿನಿಮಾ ಮಾಡಿಯೇ ಇಲ್ಲ. ಈ ಬಗ್ಗೆ ಕನ್ನಡದಲ್ಲಿ  ಸ್ವಮೇಕ್ ಚಿತ್ರ ನಿರ್ಮಾಣವಾಗಿರುವುದು ನಿಜಕ್ಕೂ ಒಂದು ಉತ್ತಮ ಬೆಳವಣಿಗೆ, ನರಹಂತಕ ವೀರಪ್ಪನ್ ಕುರಿತಾದ ಈ ಚಿತ್ರ ಉತ್ತಮವಾಗಿ ಮೂಡಿ ಬಂದಿದೆ.

ಅಟ್ಟಹಾಸ ಚಿತ್ರದ  ನಿರ್ದೇಶಕ ಎಎಂಆರ್ ರಮೇಶ್ ಗೆ ಬೆಂಬಲವಾಗಿ ಚಿತ್ರದಲ್ಲಿ ನಿಂತಿರುವುದು ಕ್ಯಾಮರಾಮ್ಯಾನ್ ವಿಜಯ್ ಮಿಲ್ಟನ್ ಮತ್ತು ಹಿನ್ನೆಲೆ ಸಂಗೀತ ನೀಡಿರುವ ಸಂದೀಪ್ ಚೌಟ. ರಮೇಶ್ ಕಥೆಯ ದೃಶ್ಯಗಳಿಗೆ ಜೀವ ಕೊಡುವಲ್ಲಿ ಈ ಇಬ್ಬರ ಪಾಲು ತುಂಬಾ ದೊಡ್ಡದು. ಬಿಗಿ ನಿರೂಪನೆಯಲ್ಲೇ ಇಡೀ ಚಿತ್ರ ಸಾಗುತ್ತದೆ. ಕಾಡಿನ ಸನ್ನಿವೇಶಗಳು ಭಯ ಹುಟ್ಟಿಸುತ್ತವೆ. ತಾಂತ್ರಿಕವಾಗಿ ಕೆಲವೊಂದು ಕಡೆ ನಾಟಕೀಯತೆ ಇರುವುದನ್ನು ಹೊರತುಪಡಿಸಿದರೆ ಉತ್ತಮ. ಆದರೆ ಇಡೀ ಚಿತ್ರ ಡಾಕ್ಯುಮೆಂಟರಿಯಂತೆ ಭಾವನೆ ಮೂಡಿಸುತ್ತದೆ. ಕಮರ್ಷಿಯಲ್ ರೀತಿಯಲ್ಲಿ ಚಿತ್ರಿಸಿರುವ ಡಾಕ್ಯುಮೆಂಟರಿ ಎಂಬ ಅನುಭವ ನೀಡುತ್ತದೆ.

ಕೆಲವೇ ಕೆಲವು ಸನ್ನಿವೇಶಗಳನ್ನು ಹೊರತುಪಡಿಸಿದರೆ, ಇಡೀ ಚಿತ್ರ ಸಹಜತೆಯಿಂದ ಕೂಡಿದೆ. ವೀರಪ್ಪನ್ ಪಾತ್ರ ಮಾಡಿರುವ ಕಿಶೋರ್ ಅವರದ್ದು ಪರಕಾಯ ಪ್ರವೇಶ. ಆದರೆ ವರನಟ ಡಾ.ರಾಜ್‌ಕುಮಾರ್ ಪಾತ್ರ ಮಾಡಿರುವ ಸುರೇಶ್ ಒಬೆರಾಯ್ ಬಗ್ಗೆಯೂ ಇದೇ ಮಾತು ಹೇಳುವಂತಿಲ್ಲ. ಅರ್ಜುನ್ ಸರ್ಜಾ, ರವಿಕಾಳೆ, ಸ್ವತಃ ರಮೇಶ್, ಸುಚೇಂದ್ರ ಪ್ರಸಾದ್ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಇನ್ನು ಇಡೀ ಚಿತ್ರದಲ್ಲೊಂದು ದೊಡ್ಡ ಮೈನಸ್ ಪಾಯಿಂಟ್ ಇದೆ. ಅದು ಇಡೀ ಚಿತ್ರವನ್ನು ಅವರು ತಮಿಳುನಾಡು ಮತ್ತು ತಮಿಳು ಪ್ರೇಕ್ಷಕರಿಗಾಗಿ ಮಾಡಿದ್ದಾರೇನೋ ಎಂಬ ಭಾವನೆ ಬರುತ್ತದೆ. ವರನಟ ಡಾ.ರಾಜ್‌ಕುಮಾರ್ ಪಾತ್ರ ಹೊರತುಪಡಿಸಿದರೆ ಕರ್ನಾಟಕ ಅಥವಾ ಕನ್ನಡ ಅವರಿಗೆ ಮರೆತೇ ಹೋಗಿದೆ. ವೀರಪ್ಪನ್ ಹತ್ಯೆಯಲ್ಲಿ ಕರ್ನಾಟಕ ಪೊಲೀಸರ ಪಾತ್ರವೇ ಇಲ್ಲ ಎಂಬಂತೆ ಬಿಂಬಿಸಲಾಗಿದೆ. ರಾಜಕಾರಣಿಗಳ ವಿಚಾರಕ್ಕೆ ಬಂದಾಗಲೂ, ನಮ್ಮವರ ಪ್ರಸ್ತಾಪವಿಲ್ಲ. ಕರ್ನಾಟಕ ಮತ್ತು ತಮಿಳುನಾಡುಗಳನ್ನು ಎರಡು ದಶಕಗಳಿಗೂ ಹೆಚ್ಚು ಕಾಲ ಕಾಡಿದ ವ್ಯಕ್ತಿಯ ಜೀವನದ ಕೆಲ ಭಾಗಗಳನ್ನಾದರೂ ನೋಡಬೇಕೆಂಬವರು, ಖಂಡಿತಾ ಚಿತ್ರಮಂದಿರಕ್ಕೆ ಹೋಗಲೇಬೇಕು.

ಈ ಬರಹದ ಬಗ್ಗೆ ನಿಮ್ಮ ಪ್ರತಿಕ್ರಿಯೆ ತಿಳಿಸಿ

 Click this button or press Ctrl+G to toggle between Kannada and English