- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಸ್ಥಳೀಯ ಚುನಾವಣೆಗೆ ಸಂಘರ್ಷದ ವಾತಾವರಣ ಬೇಕಾಗಿಲ್ಲ

Mangalore City Corporation [1]ಮಂಗಳೂರು : ಅಂತೂ ಇಂತೂ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನ ನಿಗದಿಯಾಗಿದೆ. ಸರಕಾರ ಮತ್ತು ರಾಜ್ಯ ಚುನಾವಣೆ ಆಯೋಗದ ನಡುವೆ ನಡೆದ ಘನ ಘೋರ ಕದನದಲ್ಲಿ ಅಂತಿಮವಾಗಿ ಸರಕಾರವೇ ಸೋತಿದೆ. ಸ್ಥಳೀಯ ಸಂಸ್ಥೆಗಳಿಗೆ ನಿಗದಿತ ಅವಧಿಯಲ್ಲಿಯೇ ಚುನಾವಣೆ ನಡೆಸಿ ಎಂದು ಕೋರ್ಟ್ ಹೇಳಿದ ಬಳಿಕವೂ ಅದನ್ನು ನಡೆಸಲು ಮನಸ್ಸು ತೋರದ ಸರಕಾರ ಇದಕ್ಕಾಗಿ ಹಲವು ನೆಪಗಳನ್ನು ಮುಂದೊಡ್ಡಿತ್ತು. ಆದರೆ, ಅಂತಿಮವಾಗಿ ಗೆದ್ದಿರುವುದು ಚುನಾವಣೆ ಆಯೋಗವೇ. ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದೂಡುವುದು ಎಂದರೆ ಜನ ಪ್ರತಿನಿಧಿಗಳೇ ಇಲ್ಲದೆ, ಅಧಿಕಾರಿಗಳದೇ ಆಡಳಿತ ಎಂದರ್ಥ. ಅಧಿಕಾರಿಗಳನ್ನೇ ನಂಬಿಕೊಂಡು ಅವರ ಆಡಳಿತವನ್ನೇ ಒಪ್ಪಿಕೊಳ್ಳುವುದಾದರೆ ಚುನಾವಣೆಗಳಾದರೂ ಯಾಕೆ ಬೇಕು? ಸರಕಾರದ ಮೇಲಿನ ಹಂತದ ಜನ ಪ್ರತಿನಿಧಿಗಳೇ ಇಂತದೊಂದು ಸನ್ನಿವೇಶ ಸೃಷ್ಟಿಸಲು ನಿರ್ಧರಿಸಿದ್ದು ವಿಪರ್ಯಾಸ.

ಚುನಾವಣೆ ಮುಂದೂಡಲು ಒಂದರ ಬಳಿಕ ಮತ್ತೊಂದು ನೆಪ ತೋರುತ್ತಿದ್ದಂತೆ, ಸುಪ್ರೀಂಕೋರ್ಟ್ ಚುನಾವಣೆ ನಡೆಸುವಂತೆ ಆಯೋಗಕ್ಕೆ ಹೇಳಿದ್ದುಂಟು. ಆದಾದ ಮೇಲೆ ಸರಕಾರ ಅನಗತ್ಯ ಸಾಹಸಕ್ಕೆ ಕೈ ಹಾಕಿತು. ಕೋರ್ಟ್ ನ ಆದೇಶದಂತೆ ಚುನಾವಣೆ ನಡೆಸುವುದಾಗಿ ರಾಜ್ಯ ಚುನಾವಣೆ ಆಯುಕ್ತ ಸಿ. ಆರ್.ಚಿಕ್ಕಮಠ ಅವರು ಪ್ರಕಟಿಸಿದರೆ, ಅದೇ ದಿನ ಸಚಿವ ಸಂಪುಟದ ತುರ್ತು ಸಭೆ ನಡೆಸಿ ಬಾಕಿ ಇರುವ ಪುನರ್ ಪರಿಶೀಲನಾ ಅರ್ಜಿ ಇತ್ಯರ್ಥ ಆಗುವವರೆಗೂ ವಾರ್ಡ್ ವಾರು ಮೀಸಲುಪಟ್ಟಿ ಸಲ್ಲಿಸಲು ಸಾಧ್ಯವಿಲ್ಲ ಎಂದು ನಿರ್ಧಾರ ತೆಗೆದುಕೊಂಡಿತು. ಆ ಬಳಿಕವೂ ಚುನಾವಣೆ ನಡೆಸುವುದು ಖಚಿತವೆಂದುಕೊಂಡಾಗ ಅದಕ್ಕೆ ವಿರೋಧ ಶುರುವಾಯಿತು.

ಈ ಗದ್ದಲಕ್ಕೆಲ್ಲ ಮೂಲ ವಾರ್ಡ್ ವಾರು ಮೀಸಲು ಪಟ್ಟಿ. 2011ರ ಜನಗಣತಿ ಆಧರಿಸಿದ ಮೀಸಲು ಪಟ್ಟಿ ತಯಾರಿಸಿ ಅದಕ್ಕೆ ತಕ್ಕಂತೆ ಚುನಾವಣೆ ನಡೆಸಬೇಕು ಎಂದು ಸರಕಾರ ಹಠ ಹಿಡಿದರೆ. ಇದಕ್ಕೆ ಅನಗತ್ಯ ವಿಳಂಬ ತೋರಲಾಗುತ್ತಿದೆ, ಈಗ ಲಭ್ಯವಿರುವ 2007ರ ಮೀಸಲು ಪಟ್ಟಿ ಆಧರಿಸಿಯೇ ಚುನಾವಣೆ ನಡೆಸಿ ಎನ್ನುವುದು ಕೋರ್ಟ್ ತಾಕೀತು. ಸರಕಾರದ ನಿಲುವು ಸಮರ್ಥನೀಯವಲ್ಲ.

ವಿಧಾನಸಭೆ ಚುನಾವಣೆವರೆಗೂ ಮತ್ತೊಂದು ಚುನಾವಣೆಯನ್ನು ಮೈ ಮೇಲೆ ಎಳೆದುಕೊಳ್ಳುವುದು ರಾಜಕಾರಣಿಗಳಿಗೆ ಬೇಕಿಲ್ಲ, ಅದು ಸರಕಾರದ ನಿಲುವಿನಲ್ಲಿ ವ್ಯಕ್ತವಾಗುತ್ತಿತ್ತು. ಅದು ವಿನಾಕಾರಣ ಒಂದು ಅಪಮಾನವನ್ನು ಮೇಲೆಳೆದುಕೊಂಡಿತು. 2011ರ ಜನಗಣತಿ ಆಧರಿಸಿಯೇ ಮೀಸಲು ಪಟ್ಟಿ ತಯಾರಿಸಿಲು ಸಮಯ ಬೇಕಿರುವುದರಿಂದ ಚುನಾವಣೆಯನ್ನು ಮುಂದೂಡಬೇಕು ಎಂದು ವಿಧಾನಸಭೆಯಲ್ಲಿ ನಿರ್ಣಯವೂ ಅಂಗೀಕಾರವಾಯಿತು. ಮರು ದಿನವೇ ಈ ಬಗ್ಗೆ ಚರ್ಚಿಸಲು ಚುನಾವಣೆ ಆಯುಕ್ತರನ್ನು ಕರೆಸಿಕೊಳ್ಳಲಾಯಿತು. ಚಿಕ್ಕಮಠ ಅವರಿಗೆ ವಿಧಾನಸಭೆಗೆ ಕರೆಸಿ ಛೀಮಾರಿ ಹಾಕಬೇಕು ಎನ್ನುವ ವಿಚಿತ್ರ ಒತ್ತಡವೂ ಕೆಲವರಿಂದ ಬಂದಿತ್ತು. ಅದು ನಿಜವಾಗಲಿಲ್ಲ ಎನ್ನುವುದೊಂದೇ ರಾಜ್ಯದ ಮಟ್ಟಿಗೆ ಒಂದು ಸಂತಸದ ಸಂಗತಿ. ಆಯೋಗದ ಹಠದ ಬಳಿಕವೂ ತನ್ನ ಪ್ರತಿಷ್ಠೆಯನ್ನೇ ಹಿಡಿದುಕೊಂಡಿದ್ದ ಸರಕಾರಕ್ಕೆ ಸುಪ್ರೀಂಕೋರ್ಟ್ ಮತ್ತೊಮ್ಮೆ ಮುಖಭಂಗ ಮಾಡಿದೆ. ಸರಕಾರ ತನ್ನ ಕರ್ತವ್ಯ ಏನು ಎನ್ನುವುದನ್ನು ಅರಿತು ಅದನ್ನು ಸರಿಯಾಗಿ ನಿಭಾಯಿಸಿದ್ದರೆ ಇಂತಹ ಸ್ಥಿತಿಯೇ ನಿರ್ಮಾಣವಾಗುತ್ತಿರಲಿಲ್ಲ. ಚುನಾವಣೆಯನ್ನು ನಿಗದಿತ ಅವಧಿಯಲ್ಲಿಯೇ ನಡೆಸಿ ಎನ್ನುವುದನ್ನೂ ನ್ಯಾಯಾಲಯದಿಂದಲೇ ಹೇಳಿಸಿಕೊಳ್ಳುವ ಮಟ್ಟಕ್ಕೆ ಸರಕಾರ ಬಂದು ನಿಂತಿದೆ. ಮುಂದಾದರೂ ಸರಕಾರಗಳು ಇಂತಹ ವಿಷಯದಲ್ಲಿ ಇಲ್ಲದ ಪ್ರತಿಷ್ಠೆ ತೋರದಿರುವುದು ಒಳ್ಳೆಯದು.