ಬೆಂಗಳೂರು : ದೇಶದ ಇತಿಹಾಸದಲ್ಲೇ ಒಂದೇ ವಾರದಲ್ಲಿ ಎರಡೆರಡು ಬಾರಿ ವಿಶ್ವಾಸ ಮತ ಚಲಾಯಿಸಿ ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಅಧಿಕಾರ ಹಿಡಿದ ಬಿ.ಎಸ್.ಯಡಿಯೂರಪ್ಪ ಸರಕಾರ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದೆ.
ವಿಧಾನ ಸಭಾ ಸ್ಪೀಕರ್ ದ್ವನಿ ಮತದ ಮೂಲಕ ವಿಶ್ವಾಸ ಮತ ಚಲಾಯಿಸಲು ಸೂಚಿಸಿದರಾದರೂ ವಿರೋಧ ಪಕ್ಷದ ಪ್ರತಿರೋದದಿಂದಾಗಿ ತಲೆ ಎಣಿಕೆಗೆ ಸೂಚನೆ ನೀಡಿದರು. ಪರ ಹಾಗೂ ವಿರೋಧ ಪಕ್ಷಗಳ ಶಾಸಕರ ಪ್ರತಿ ಸಾಲಿನ ಮತ ಎಣಿಕೆ ಬಳಿಕ ಯಡಿಯೂರಪ್ಪ ಪರವಾಗಿ 106 ಹಾಗೂ ವಿರೋಧವಾಗಿ 100 ಮತ ಚಲಾವಣೆಗೊಂಡಿರುವುದಾಗಿ ಸ್ಪೀಕರ್ ಬೋಪಯ್ಯ ಘೋಷಿಸಿದರು.
ಅನರ್ಹತೆಗೊಂಡ ಶಾಸಕರ ಪ್ರಕರಣ ಹೈಕೋರ್ಟ್‌ನಲ್ಲಿ ಇರುವುದರಿಂದ ಅಂತಿಮ ತೀರ್ಪು ಬಂದ ಮೇಲೆಯೇ 2ನೇ ಬಾರಿಯ ವಿಶ್ವಾಸಮತ ಯಾಚನೆ ಸಭೆಯನ್ನು ನಡೆಸಿ ಎಂಬ ವಿಧಾನಸಭಾ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪ್ರಸ್ತಾಪವನ್ನು ತಿರಸ್ಕರಿಸಿದ ಸ್ಪೀಕರ್ ಕೆ.ಜೆ.ಬೋಪಯ್ಯ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಗುರುವಾರ ಎರಡನೇ ಬಾರಿಗೆ ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಲು ಅವಕಾಶ ಕಲ್ಪಿಸಿಕೊಟ್ಟರು
ತಲೆ ಎಣಿಕೆ ಮೂಲಕ ಒಂದರಿಂದ ಎಂಟನೇ ಸಾಲಿನ ಮತವನ್ನು ಲೆಕ್ಕಹಾಕಲಾಯಿತು. ನಂತರ ವಿರೋದ ಸದಸ್ಯರ ಲೆಕ್ಕವನ್ನು ತಲೆಎಣಿಕೆ ಮೂಲಕ ನಡೆಸಲಾಯಿತು.
ಎರಡನೇ ಬಾರಿಯೂ ವಿಶ್ವಾಸಮತ ಯಾಚನೆಯಲ್ಲಿ ಬಹುಮತವನ್ನು ಸಾಬೀತುಪಡಿಸುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ಬಿಕ್ಕಟ್ಟಿನಿಂದ ಪಾರಾದಂತಾಗಿದೆ. ಆದರೆ ವಿಪಕ್ಷಗಳಿಗೆ ತೀವ್ರ ಮುಖಭಂಗವಾದಂತಾಗಿದೆ.
ಪ್ರತಿ ಪಕ್ಷಗಳ ಮನವಿಯ ಮೇರೆಗೆ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದರು.
ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಉಲ್ಟಾ ಹೊಡೆದ ರಾಜ್ಯಪಾಲರು ಗುರುವಾರ ಬೆಳಿಗ್ಗೆ ಮತ್ತೆ ಬಹುಮತ ಸಾಬೀತುಪಡಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದರು. ಈ ನಿಟ್ಟಿನಲ್ಲಿ ಇಂದು ವಿಧಾನಸಭೆ ಅಧಿವೇಶನದಲ್ಲಿ ಮತ್ತೆ ವಿಶ್ವಾಸಮತ ಯಾಚಿಸಿದ್ದರು.
ಇಂದು ವಿಧಾನಸಭೆಯಲ್ಲಿ ಎರಡನೇ ಬಾರಿ ನಡೆದ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಚನ್ನಪಟ್ಟಣ ಜೆಡಿಎಸ್ ಶಾಸಕ ಎಂ.ಸಿ.ಅಶ್ವತ್ಥ ಹಾಗೂ ಲಿಂಗಸುಗೂರು ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಗೈರು ಹಾಜರಾಗಿದ್ದರು.
ಸೋಮವಾರ ವಿಶ್ವಾಸಮತ ಯಾಚನೆ ಸಂದರ್ಭದಲ್ಲಿ ಹೊಯ್ ಕೈ, ಅವಾಚ್ಯ ಶಬ್ದಗಳ ಗಳ ಮೂಲಕ ಶಾಸಕರು ಸದನದಲ್ಲಿ ಗದ್ದಲ ಉಂಟು ಮಾಡಿದರಾದರೂ ಇಂದು ಎರಡನೇ ಬಾರಿಗೆ ವಿಶ್ವಾಮತ ಯಾಚನೆ ಸಂದರ್ಭದಲ್ಲಿ ಎಲ್ಲ ಶಾಸಕರು ಶಿಸ್ತು ಬದ್ದವಾಗಿ ಸಹಕರಿಸುವ ಮೂಲಕ ಎಲ್ಲರ ಅಚ್ಚರಿಗೆ ಕಾರಣರಾದರು.
ಐವರು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದ ಕುರಿತು ಬುಧವಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯ ವಿಚಾರಣೆ ಅ.18 ರಂದು ನಡೆಯಲಿದ್ದು ಅಂದು ಐದು ಶಾಸಕರಿಗೆ ಗೆಲುವು ಸಿಕ್ಕಿದರೂ ವಿರೋದ ಪಕ್ಷಗಳಿಗೆ ಬಹುಮತ ಪಡಿಸಲು ಸಂಖ್ಯಾ ಬಲ ಕಡಿಮೆಯಾಗುತ್ತದೆ.
Click this button or press Ctrl+G to toggle between Kannada and English