- KANNADA MEGA MEDIA NEWS :: News Coverage From Mangalore and Major Cities of India and world wide - https://kannada.megamedianews.com -

ಕಾವೂರು ಪೊಲೀಸ್ ಠಾಣೆಯ ಎದುರು ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ

BJP protest at Kavoor Police Sta [1]ಮಂಗಳೂರು : ಕುಂಜತ್ತಬೈಲಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗುರುವಾರ ರಾತ್ರಿ ನಡೆದ ಘರ್ಷಣೆಯಲ್ಲಿ ಬಿಜೆಪಿ ಕಾರ್ಯಕರ್ತರ ಮೇಲೆ ಕಾವೂರು ಪೊಲೀಸರು ನಡೆಸಿದ  ಲಾಠಿ ಚಾರ್ಜ್ ನಲ್ಲಿ ಹಲವರು ಗಾಯಗೊಂಡಿದ್ದು ಅವರನ್ನು ನಗರದ ಎಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಕಾರ್ಯಕರ್ತರ ಮೇಲಿನ  ಕಾವೂರು ಪೊಲೀಸ್ ಠಾಣೆ ಎಸ್ ಐ,  ಸಿಬ್ಬಂದಿ ನಡೆಸಿದ ಲಾಠಿ ಚಾರ್ಜ್ ನ್ನು ವಿರೋಧಿಸಿ ಶುಕ್ರವಾರ ಹಲವು ಬಿಜೆಪಿ ಕಾರ್ಯಕರ್ತರು ಕಾವೂರು ಪೊಲೀಸ್ ಠಾಣೆಯ ಎದುರು ಪ್ರತಿಭಟಿಸಿ ಹಲವಾರು ಬೇಡಿಕೆಗಳನ್ನು ಮುಂದಿಟ್ಟರು.

ಗುರುವಾರ ಕುಂಜತ್ತಬೈಲು ಉತ್ತರ ವಾರ್ಡ್ ನ ಕಾಂಗ್ರೆಸ್ ಅಭ್ಯರ್ಥಿ ಮಹಮ್ಮದ್ ಗೆದ್ದ ಖುಷಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಕುಂಜತ್ತ ಬೈಲ್ ಸರ್ಕಲ್ ಕಟ್ಟೆ ಹತ್ತಿ ಪಟಾಕಿ ಸಿಡಿಸಿ ಸಂಭ್ರಮಾಚರಿಸುತ್ತಿದ್ದರು. ಧಾರ್ಮಿಕ ಕಾರ್ಯಗಳಿಗೆ ಉಪಯೋಗವಾಗುತ್ತಿದ್ದ ಕಟ್ಟೆಗೆ ಹತ್ತದಂತೆ ಬಿಜೆಪಿ ಕಾರ್ಯಕರ್ತರು ತಿಳಿಸಿದ ಸಂದರ್ಭ ಎರಡು ಗುಂಪುಗಳ ನಡುವೆ ಮಾತಿನ ಚಕಮಕಿ ತಾರಕಕ್ಕೇರಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದಾಗ ಸ್ಥಳಕ್ಕಾಗಮಿಸಿದ ಕಾವೂರು ಪೊಲೀಸ್ ಠಾಣೆ ಎಸ್ ಐ ಮತ್ತು ಸಿಬ್ಬಂದಿ ಲಾಠಿ ಪ್ರಹಾರ ನಡೆಸಿ, ಸ್ಥಳದಲ್ಲಿದ್ದ ಹಲವರನ್ನು ವಶಕ್ಕೆ ತೆಗೆದುಕೊಂಡರು.

ಇವರಲ್ಲಿ ಬಿಜೆಪಿ ಕಾರ್ಪೋರೇಟರ್ ಶರತ್ ಕುಮಾರ್ ಅವರನ್ನು ಬಿಡುಗಡೆಗೊಳಿಸಲಾಗಿದ್ದು, ಇನ್ನುಳಿದಂತೆ  ಶರತ್ ಕುಮಾರ್, ಜಯ ಅಮೀನ್, ಪ್ರಶಾಂತ್ ಎಂಬುವವರು ಸಣ್ಣ ಪುಟ್ಟ ಗಾಯಗಳೊಂದಿಗೆ ಎಜೆ ಆಸ್ಪತ್ರೆಯ ಸಾಮಾನ್ಯ ವಾರ್ಡ್ ನಲ್ಲಿ ದಾಖಲಾಗಿದ್ದರೆ,  ಪ್ರಮೋದ್ ಎಂಬಾತನನ್ನು
ಎಜೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿಡಲಾಗಿದೆ.

ಶುಕ್ರವಾರ ಈ ಘಟನೆಯನ್ನು ಖಂಡಿಸಿ ಸುಮಾರು ೫೦೦ ಮಂದಿ ಬಿಜೆಪಿ ಕಾರ್ಯಕರ್ತರು ಕಾವೂರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿ ಕಾವೂರು ಠಾಣಾ ಎಸ್.ಐ. ಉಮೇಶ್ ಅವರನ್ನು ಹಾಗೂ ಓರ್ವ ಪೊಲೀಸ್ ಪೇದೆಯನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿ ಇನ್ನು ೪೮ ಗಂಟೆಯೊಳಗೆ ತಮ್ಮ ಬೇಡಿಕೆಗಳನ್ನು ಈಡೇರಿಸದೆ ಹೋದಲ್ಲಿ ಉಗ್ರ ಪ್ರತಿಭಟನೆಯನ್ನು ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿ ಆರ್ ಎಸ್ ಎಸ್ ಮುಖಂಡ ಪ್ರಕಾಶ್, ಬಜರಂಗದ ದಳದ ಪ್ರಮುಖ ಶರಣ್ ಪಂಪ್ ವೆಲ್, ಬಿಜೆಪಿ ಅಲ್ಪಸಂಖ್ಯಾತ ಘಟಕದ ಫ್ರಾಂಕ್ಲಿನ್ ಮೊಂತೆರೊ ಎಸಿಪಿ ರವಿಕುಮಾರ್ ಜತೆ ಸಮಾಲೋಚನೆ ನಡೆಸಿದ್ದು ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ದ  ಶಿಸ್ತುಕ್ರಮ ಕೈಗೊಳ್ಳುವುದಾಗಿ ಎಸಿಪಿ ರವಿಕುಮಾರ್ ತಿಳಿಸಿದ್ದಾರೆ.