ಉಡುಪಿ : ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಸಚಿವ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್ ಅವರು ಅಜ್ಜರಕಾಡು ಮೈದಾನದಲ್ಲಿ ನಡೆದ ಜಿಲ್ಲಾಮಟ್ಟದ 71ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಿ, ವಿವಿಧ ಇಲಾಖೆಗಳು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಗೌರವ ವಂದನೆ ಸ್ವೀಕರಿಸಿದರು.
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಹುಟ್ಟಿ ಬೆಳೆದ ತಮಗೆ ಧಾರ್ಮಿಕ ಸೌಹಾರ್ದತೆ ಮತ್ತು ಸಹಬಾಳ್ವೆಗೆ ಹೆಸರುವಾಸಿಯಾದ ಉಡುಪಿಯ ಸೇವೆ ಮಾಡಲು ಸಿಕ್ಕ ಅವಕಾಶವೇ ದೊಡ್ಡ ಭಾಗ್ಯವೆಂದ ಸಚಿವರು, ಮನುಷ್ಯ ಜಾತಿ ತಾನೊಂದೇ ವಲಂ ಎಂಬ ಪಂಪನ ಸಂದೇಶದಂತೆ ಪ್ರತಿಯೊಬ್ಬರೂ ಧಾರ್ಮಿಕ ಚೌಕಟ್ಟುಗಳನ್ನು ಮೀರಿ ಮಾನವೀಯತೆ ಹಾಗೂ ಭಾರತೀಯತೆ ಎತ್ತಿಹಿಡಿಯಬೇಕಿದೆ ಎಂದರು.
ಉಡುಪಿಯ ಆಧ್ಯಾತ್ಮಿಕ ಭದ್ರಬುನಾದಿಗೆ ಶ್ರಮಿಸಿದ ಮಧ್ವಾಚಾರ್ಯರು, ಕನಕದಾಸರು, ನಾರಾಯಣ ಗುರುಗಳು ಹಾಗೂ ಸೌಹಾರ್ದತೆಯ ಹರಿಕಾರ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಸಾಹೇಬರ ಕೊಡುಗೆಗಳನ್ನು ಸ್ಮರಿಸಿದ ಸಚಿವರು, ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಶರೀಫರು, ಕರೀಂ ಖಾನ್, ನಿಸಾರ್ ಅಹಮದ್ ಹಾಗೂ ಮಣಿಪಾಲವನ್ನು ಶಿಕ್ಷಣ ಕಾಶಿಯಾಗಿಸಿದ ಡಾ. ಟಿ.ಎಮ್.ಎ. ಪೈ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಬಿ. ವಿ. ಆಚಾರ್ಯ ಹಾಗೂ ಗೋಪಾಲ ಗಾಣಿಗ ಅವರನ್ನು ಸನ್ಮಾನಿಸಿ ಶುಭ ಕೋರಿದ ಅವರು, ಕರಾವಳಿಯ ಬ್ಯಾಂಕಿಂಗ್ ಬೆಳವಣಿಗೆಗೆ ಶ್ರಮಿಸಿದ ಮುಖಂಡರ ಕೊಡುಗೆಯನ್ನು ಹಾಗೂ ಬಂಟ, ಬಿಲ್ಲವ, ಮೊಗವೀರ ಸೇರಿದಂತೆ ಎಲ್ಲಾ ಸಮುದಾಯಗಳ ಶ್ರಮವನ್ನು ಗೌರವಿಸಿದರು.
ಇದೇ ವೇಳೆ ಸರಕಾರದ ಗ್ಯಾರಂಟಿ ಯೋಜನೆಗಳು, ಮೀನುಗಾರಿಕಾ ರಸ್ತೆ ಅಭಿವೃದ್ಧಿ, ಕೃಷಿ-ತೋಟಗಾರಿಕೆ ಪ್ರೋತ್ಸಾಹ ಹಾಗೂ ‘ಕಲಾ ನಡಿಗೆ, ನಿಮ್ಮ ಬಳಿಗೆ’ ನಂತಹ ಪ್ರವಾಸಿ ಸ್ನೇಹಿ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿದ ಅವರು, ನಾಡಿನ ಶಾಂತಿ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಯತ್ನಗಳ ವಿರುದ್ಧ ಕನ್ನಡಿಗರೆಲ್ಲರೂ ಜಾಗರೂಕರಾಗಿದ್ದು ಒಗ್ಗಟ್ಟಿನಿಂದಿರಲು ಕರೆ ನೀಡಿದರು.
ಈ ವಿಜೃಂಭಣೆಯ ಕಾರ್ಯಕ್ರಮದಲ್ಲಿ ಶಾಸಕ ಯಶ್ಪಾಲ್ ಸುವರ್ಣ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ. ಎ. ಗಫೂರ್, ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ. ಕೆ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಹಾಗೂ ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.
ಪ್ರತಿಕ್ರಿಯೆ ನೀಡಿ
ಪ್ರತಿಕ್ರಿಯೆ ನೀಡಿ
Posted in: ಪ್ರಾದೇಶಿಕ ಸುದ್ದಿಗಳು, ಟಾಪ್ ಸುದ್ದಿ, ಸುದ್ದಿಗಳು









