ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭಾನುವಾರ ಆಗಮಿಸಿದ ವಿಜಯ ಮಲ್ಯ ಅವರು ಚಂಡಿಕಾ ಹೋಮ, ಸುಹಾಸಿನಿ ಪೂಜೆ ಹಾಗೂ ಮಹಾ ಪೂಜೆಯಲ್ಲಿ ಪಾಲ್ಗೊಂಡರು. ಅನಂತರ ವೀರಭದ್ರ ದೇವರ ದರ್ಶನ ಪಡೆದು ದೇವಳದ ಆಡಳಿತ ಮಂಡಳಿಯೊಂದಿಗೆ ಚರ್ಚಿಸಿದರು.
ದೇವಳದ ಸಮಗ್ರ ಅಭಿವೃದ್ಧಿಗೆ ಕಾಣಿಕೆ ರೂಪದಲ್ಲಿ ನೆರವು ನೀಡಲು ಸದಾಸಿದ್ಧನಿದ್ದೇನೆ. ಶ್ರೀ ದೇವಿಯ ಅನುಗ್ರಹದಿಂದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುತ್ತಿದೆ ಎಂದು ಹೇಳಿದರು.
ಈ ಹಿಂದೆ ಧ್ವಜಸ್ತಂಭ ನಿರ್ಮಾಣಕ್ಕೆ ಕಾಣಿಕೆ ರೂಪವಾಗಿ ನೆರವು ನೀಡಿರುವುದನ್ನು ಸ್ಮರಿಸಿದರಲ್ಲದೆ ಶ್ರೀ ದೇವಿಯ ಭಕ್ತನಾಗಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಲು ಸಂತೋಷವಾಗುತ್ತದೆ ಎಂದರು.
ಮಾಜಿ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಅವರ ಸಮಕ್ಷಮದಲ್ಲಿ ಮಾತನಾಡಿದ ಮಲ್ಯರು ದೇವಾಲಯದ ಮಿಕ್ಕುಳಿದ ಅಭಿವೃದ್ಧಿ ಕಾರ್ಯಕ್ಕೆ ತಗಲುವ ವೆಚ್ಚದ ಸಂಪೂರ್ಣ ಮಾಹಿತಿ ಕೂಡಲೇ ರವಾನಿಸುವಂತೆ ಹೇಳಿದರು.
ದೇವಳದ ಅರ್ಚಕರಾದ ಪರಮೇಶ್ವರ ಅಡಿಗ, ಶ್ರೀಧರ ಅಡಿಗ, ನರಸಿಂಹ ಅಡಿಗ, ನಿಕಟಪೂರ್ವ ಆಡಳಿತ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಕಾರ್ಯನಿರ್ವಾಹಣಾಧಿಕಾರಿ ಸಂಜೀವ ಮಡಿವಾಳ, ಅಧೀಕ್ಷಕ ರಾಮಕೃಷ್ಣ ಅಡಿಗ ಮೊದಲಾದವರು ಉಪಸ್ಥಿತರಿದ್ದರು.
Click this button or press Ctrl+G to toggle between Kannada and English