ಉಡುಪಿ :ಕಾಸರಗೋಡಿನ ಪರಕ್ಕಿಲ ಎಂಬಲ್ಲಿ ತುಳು ಶಾಸನವೊಂದು ಪತ್ತೆಯಾಗಿದ್ದು, ಕಾಸರಗೋಡಿನಿಂದ ಮಧೂರು ದೇವಸ್ಥಾನಕ್ಕೆ ಹೋಗುವ ಮಾರ್ಗದಲ್ಲಿ ಮಧೂರು ದೇವಸ್ಥಾನಕ್ಕಿಂತ ಸುಮಾರು ಒಂದು ಕಿ.ಮೀ. ಮೊದಲು ಉಳಿಯತ್ತಡ್ಕದಿಂದ ಕವಲೊಡೆಯುವ ರಸ್ತೆಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ಪರಕ್ಕಿಲ ಮಹಾಲಿಂಗೇಶ್ವರ ದೇವಸ್ಥಾನವಿದೆ. ಈ ದೇವಸ್ಥಾನದ ಪಡುಗೋಪುರದಲ್ಲಿ ಶಾಸನವು ದೊರೆತ್ತಿದ್ದು ಶಾಸನದ ಎಡದಲ್ಲಿ ಅಂಕುಶದ ಚಿಹ್ನೆ ಇದೆ, ಮಧೂರು ಸಿದ್ಧಿವಿನಾಯಕನ ಹಸ್ತಶೋಭಿ ಒಂದು ಅಂಕುಶವೂ ಇದೆ. ಈ ಹಿನ್ನೆಲೆಯಲ್ಲಿ ಇದು ಎರಡು ದೇವಾಲಯಗಳಿಗೆ ಸಂಬಧಿಸಿರಬಹುದಾದ ಶಾಸನವಾಗಿರಬಹುದು.
ಶಾಸನವು ಬಹಳಷ್ಟು ಸವೆದಿರುವುದರಿಂದ ಓದಲಾಗದ ಸ್ಥಿತಿಯಲ್ಲಿದೆ. ಶ್ರೀಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ಡಾ| ವಿಘ್ನರಾಜರು ಬಹಳ ಪ್ರಯತ್ನಿಸಿ ಶಾಸನವು ತುಳುಲಿಪಿಯಲ್ಲಿದ್ದು ಕೆಲವು ಅಕ್ಷರಗಳನ್ನು ಗುರುತಿಸಬಹುದು ಎಂದಿದ್ದಾರೆ. ‘ಇಲ್’ (ಮನೆ) ಶಬ್ದದಿಂದ ಈ ಊರಿಗೆ ‘ಪರಕ್ಕಿಲ’ ಎಂಬ ಹೆಸರು ಬಂದಿರುವ ಸಾಧ್ಯತೆ ಇದೆ. ಶಾಸನದ ಪಕ್ಕದಲ್ಲಿಯೇ ಕುದುರೆ ಮೇಲೆ ಕುಳಿತ ಯೋಧ, ಹಂದಿ ಮತ್ತು ಆನೆಯ ವಿಗ್ರಹಗಳಿವೆ. ಇವು ಮರದಿಂದ ಮಾಡಿರುವುದಾಗಿದೆ ಎಂಬುದಾಗಿ ಅಭಿಪ್ರಾಯ ಪಟ್ಟಿದ್ದಾರೆ.
ತುಳುವಿನ ತಾಳೆ ಓಲೆ ಗ್ರಂಥಗಳು, ತುಳು ಶಾಸನಗಳು ಕಾಸರಗೋಡಿನ ಪ್ರದೇಶದಲ್ಲಿ ಸಿಗುವುದರಿಂದ ಇದು ತುಳುನಾಡು, ಪ್ರಾಚೀನ ಕರ್ನಾಟಕಾಂತರ್ಗತವಾದ ತುಳುವಿನ ಗಂಡುಮೆಟ್ಟಿನ ನೆಲವೆಂಬುದನ್ನು ಪ್ರತಿಪಾದಿಸುತ್ತದೆ.
Click this button or press Ctrl+G to toggle between Kannada and English