ಮಂಗಳೂರು :ಎಂಡೋಸಲ್ಫಾನ್ ಬಾಧಿತರಿಗೆ ಸೂಕ್ತ ರೀತಿಯ ಪರಿಹಾರ ಹಾಗೂ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿ ಬುಧವಾರ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ವಿಭಾಗ ವತಿಯಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೊಕ್ಕಡ ಗ್ರಾಮದ ಎಂಡೋಸಲ್ಫಾನ್ ಹೋರಾಟ ಸಮಿತಿಯ ಅಧ್ಯಕ್ಷ ಶ್ರೀಧರ್ ಮಾತನಾಡಿ, 1980ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಸುಮಾರು 92 ಗ್ರಾಮಗಳಲ್ಲಿ ಎಂಡೋಸಲ್ಫಾನನ್ನು ಹೆಲಿಕಾಫ್ಟರ್ ಮುಖಾಂತರ ಸಿಂಪಡನೆ ಮಾಡಲಾಯಿತು.1980ರ ಸಂದರ್ಭದಲ್ಲಿ ಗೇರು ಬೆಳೆಗೆ ನುಸಿ ಬಾಧೆ ಪ್ರಾರಂಭವಾದ ಸಂದರ್ಭದಲ್ಲಿ ಕೇರಳ ಗೇರು ಬೀಜ ನಿಗಮ ಈ ರೋಗವನ್ನು ನಿಯಂತ್ರಿಸಲು ಕಾಸರಗೋಡು ಪ್ರದೇಶದಲ್ಲಿ ಇದನ್ನು ಸಿಂಪಡನೆ ಮಾಡಲಾಯಿತು. ಕೇವಲ ಕಾಸರಗೋಡಿನಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕೂಡ 92 ಗ್ರಾಮಗಳಲ್ಲಿ ಈ ಕೀಟ ನಾಶಕವನ್ನು ಸಿಂಪಡನೆ ಮಾಡಲಾಯಿತು. ವಿಷಕಾರಕ ಕೀಟನಾಶಕವಾದ ಇದನ್ನು ಜಗತ್ತಿನಾದ್ಯಂತ 73 ರಾಷ್ಟ್ರಗಳಲ್ಲಿ ನಿಷೇಧ ಮಾಡಲಾಗಿದೆ. ಆದರೆ ಭಾರತದಲ್ಲಿ ಮಾತ್ರ ಇನ್ನೂ ಇದನ್ನು ನಿಷೇಧಿಸಲು ಮೀನಾಮೇಷ ಎಣಿಸುತ್ತಿದ್ದಾರೆ. ಇದರ ಪರಿಣಾಮವಾಗಿ ಜಿಲ್ಲೆಯ ಸುಮಾರು 92 ಗ್ರಾಮಗಳಲ್ಲಿ ಅನೇಕ ವಿಕಲಚೇತನ, ಕ್ಯಾನ್ಸರ್, ಚರ್ಮರೋಗ, ಮಹಿಳೆಯರಲ್ಲಿ ಬಂಜೆತನ, ದೃಷ್ಟಿಹೀನತೆ ಮೊದಲಾದ ಹಲವು ಸಮಸ್ಯೆಗಳಿಂದ ಜನರು ಬಳಲುತ್ತಿದ್ದಾರೆ. ನಮ್ಮ ಸರಕಾರಗಳು ಖಾಸಗಿ ಕಂಪನಿಗಳ ನಿಯಂತ್ರಣದಲ್ಲಿರುವುದೇ ಈ ಎಲ್ಲಾ ಬೆಳವಣಿಗೆಗೆ ಕಾರಣ. ಸರಕಾರವು ಈ ಕೂಡಲೆ ಎಂಡೋಸಲ್ಫಾನ್ ಕೀಟನಾಶಕವನ್ನು ನಿಷೇಧಿಸಿ ಅದರಿಂದ ತೊಂದರೆಗೊಳಗಾಗಿರುವವರಿಗೆ ಶೀಘ್ರದಲ್ಲಿಯೇ ಶಾಶ್ವತ ಪರಿಹಾರ ಒದಗಿಸಿಕೊಡಬೇಕೆಂದು ಅವರು ಆಗ್ರಹಿಸಿದರು.
ಎಬಿವಿಪಿ ರಾಜ್ಯ ಕಾರ್ಯದರ್ಶಿ ರಮೇಶ್ ಕೆ. ಮಾತನಾಡಿ, ಎಂಡೋಸಲ್ಫಾನ್ ಪರಿಣಾಮಗಳಿಂದ ಬೇಸತ್ತು ಕೆಲ ಮಕ್ಕಳ ಹೆತ್ತವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸರಕಾರ ಅವರಿಗೆ ಯಾವುದೇ ರೀತಿಯ ಶಾಶ್ವತ ಪರಿಹಾರ ಒದಗಿಸದೇ ಇರುವುದರಿಂದ ಈ ಜನರು ನಿರ್ಗತಿಕರಾಗಿದ್ದಾರೆ. ಆದ್ದರಿಂದ ಇವರಿಗೆ ಕೂಡಲೆ ಶಾಶ್ವತ ಪರಿಹಾರ ಒದಗಿಸಬೇಕೆಂದು ಆಗ್ರಹಿಸಿದರು.
Click this button or press Ctrl+G to toggle between Kannada and English