ಮಂಗಳೂರು : ರಾಜ್ಯದ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ನಾನಾ ಪಕ್ಷಗಳ ರಾಜಕೀಯ ಕಸರತ್ತು ಆರಂಭಗೊಂಡಿದೆ. ಅದರಲ್ಲೂ ಜೆಡಿಎಸ್ ಈ ನೆಲೆಯಲ್ಲಿ ಒಂದು ಹೆಜ್ಜೆ ಮುಂದಡಿ ಇಟ್ಟಿದೆ. ಮುಂಬರುವ ಚುನಾವಣೆಯಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಉದ್ಯಮಿ ಎ. ಸದಾನಂದ ಶೆಟ್ಟಿ ಅವರನ್ನು ಘೋಷಿಸಿದೆ.
ಈ ಮೂಲಕ ರಾಜ್ಯದಲ್ಲೇ ಜೆಡಿಎಸ್ ತನ್ನ ಮೊದಲ ಅಭ್ಯರ್ಥಿ ಘೋಷಣೆಯಾದಂತಾಗಿದೆ. ಅದು ಕೂಡ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಈ ಅಂತಿಮ ನಿರ್ಧಾರವನ್ನು ವನ್ನು ಪ್ರಕಟಿಸುವ ಮೂಲಕ ಇಡೀ ಕರಾವಳಿಯಲ್ಲಿ ಸದಾನಂದ ಶೆಟ್ಟರು ಜೆಡಿಎಸ್ ಪಕ್ಷಕ್ಕೆ ಗೆಲ್ಲುವ ಕುದುರೆಯಂತೆ ಭಾಸವಾಗುತ್ತಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇಳಿಸುವ ಕುರಿತು ತಮ್ಮಲ್ಲಿಯೇ ಹೊಡೆದಾಟ ಮಾಡುತ್ತಿರುವ ಬೆನ್ನಿಗೆ ರಾಜ್ಯದಲ್ಲಿರುವ ಬಿಜೆಪಿ ಸರಕಾರದ ಭ್ರಷ್ಟಾಚಾರ, ಗೊಂದಲಗಳ ನಡುವೆ ಸಂಪೂರ್ಣವಾಗಿ ರಾಜ್ಯದ ಜತೆಗೆ ಕರಾವಳಿಯಲ್ಲಿ ಬಿಜೆಪಿಯ ಅಲೆ ತಣ್ಣಾಗಾಗುತ್ತಿದೆ. ಮತ್ತೊಂದೆಡೆ ಕಾಂಗ್ರೆಸ್ ಪಕ್ಷದೊಳಗೆ ನುಸುಕಿನ ಗುದ್ದಾಟ ಕೂಡ ಜೆಡಿಎಸ್ ನ ಅಭ್ಯರ್ಥಿ ಸದಾನಂದ ಶೆಟ್ಟಿಗೆ ವರದಾನವಾಗುವ ಸಾಧ್ಯತೆಗಳು ದಟ್ಟವಾಗುತ್ತಿದೆ.
ಮತ್ತೊಂದೆಡೆ ಉದ್ಯಮಿಯಾಗಿರುವ ಸದಾನಂದ ಶೆಟ್ಟಿಯ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಗಟ್ಟಿಯಾಗುವ ಸೂಚನೆಗಳು ಕಾಣಿಸಿಕೊಳ್ಳುತ್ತಿದೆ. ಶೆಟ್ಟರು ಬರೀ ಉದ್ಯಮ ಕ್ಷೇತ್ರದಲ್ಲಿ ಮಾತ್ರವಲ್ಲದೇ ಶಿಕ್ಷಣ, ಕ್ರೀಡೆ, ಸಮಾಜ ಸೇವೆ ಸೇರಿದಂತೆ ನಾನಾಕ್ಷೇತ್ರಗಳಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ನಾಮಬಲವಿದೆ. ಇಂತಹ ನಾಮಬಲದಿಂದಲೇ ಶೆಟ್ಟರು ಗೆಲ್ಲುವ ಚಾನ್ಸ್ ಬಲವಾಗಿದೆ ಎನ್ನುವುದು ಸಾರ್ವಜನಿಕ ವಲಯದಲ್ಲಿರುವ ಮಾತು.
ಶೆಟ್ಟರ ಜತೆಯಲ್ಲಿ ನಾನಾ ನಾಯಕರು:
ಶ್ರೀದೇವಿ ಶಿಕ್ಷಣ ಸಂಸ್ಥೆಗಳ ಸ್ಥಾಪಕ ಹಾಗೂ ಖ್ಯಾತ ಉದ್ಯಮಿ ಎ. ಸದಾನಂದ ಶೆಟ್ಟಿ ಜೆಡಿಎಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡುತ್ತಿರುವಾಗಲೇ ಹತ್ತಾರು ವೈದ್ಯರು, ವಕೀಲರು, ನಿವೃತ್ತ ಅಧಿಕಾರಿಗಳು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನೂರಾರು ಜನರು ಜೆಡಿಎಸ್ ಗೆ ಸೇರ್ಪಡೆಗೊಳ್ಳುವ ಮೂಲಕ ಶೆಟ್ಟರಿಗೆ ಜನಬಲನೂ ಗಟ್ಟಿಯಾಗಿದೆ ಎನ್ನುವ ವಿಚಾರ ಮತ್ತೆ ಸಾಬೀತಾಗಿತ್ತು. ಇದು ಕರಾವಳಿ ಜಿಲ್ಲೆಯಲ್ಲಿ ಹೊಸ ಬದಲಾವಣೆಗೊಂದು ಮುನ್ನುಡಿಯ ಸೂಚನೆಯಂತೆ ಕಾಣುತ್ತಿದೆ.
ಜೆಡಿಎಸ್ ಮುಖಂಡರಾದ ಎಂ.ಸಿ. ನಾಣಯ್ಯ, ಜಮೀರ್ ಅಹಮ್ಮದ್ ಖಾನ್, ಮಧು ಬಂಗಾರಪ್ಪ, ಶಕೀಲ್ ಅಹ್ಮದ್, ಕೆ. ಅಮರನಾಥ ಶೆಟ್ಟಿ, ಬಿ. ನಾಗರಾಜ ಶೆಟ್ಟಿ, ಎಂ.ಬಿ. ಸದಾಶಿವ, ಶಕೀಲ್ ನವಾಝ್, ನಂದಿನಿ ಗೌಡ, ಶಾಂತು ಅಪ್ಪಯ್ಯ, ಕನ್ಯಾಕುಮಾರಿ, ಪ್ರಸಾದ್ ಬಾಬು, ರಂಜಿತ್ ಮಲ್ಲಿ, ದೇವಿಪ್ರಸಾದ್ ಶೆಟ್ಟಿ, ಯು.ಆರ್. ಸಭಾಪತಿ, ವಿಟ್ಲ ಮಹಮ್ಮದ್ ಕುಂಞಿ, ವಸಂತ ಪೂಜಾರಿ, ರಾಮಚಂದ್ರ ಶೆಟ್ಟಿ, ಚಿತ್ತರಂಜನ್ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ, ಸುಶೀಲ್ ನೊರೊನ್ಹಾ ಮತ್ತಿತ್ತರ ನಾಯಕರು ಸದಾರ ಬೆಂಬಲಕ್ಕೆ ನಿಲ್ಲುತ್ತಿದ್ದಾರೆ.
ಕುಮಾರಣ್ಣರಿಗೆ ನೆಚ್ಚಿನ ಅಭ್ಯರ್ಥಿ `ಸದಾ’ ಶೆಟ್ಟರು:
ಇಲ್ಲಿಯವರೆಗೆ ಕರಾವಳಿಯ ಈ ಭಾಗ ನಮ್ಮ ಕೈ ಹಿಡಿಯಲಿಲ್ಲ ಎಂಬ ಬೇಸರವಿತ್ತು. ಆದರೆ, ಮುಂದೆ ಹಾಗೆ ಆಗಲಾರದು. ನಮ್ಮ ಪಕ್ಷ ಅಧಿಕಾರ ಪಡೆಯಲು ಕರಾವಳಿ ಆಶೀರ್ವಾದ ನೀಡುತ್ತದೆ ಎಂಬ ಭರವಸೆ ಇದೆ. ಅದು ಕೂಡ ಸದಾನಂದ ಶೆಟ್ಟರ ಮೂಲಕ ನಿರ್ಧಾರವಾಗುತ್ತದೆ ಎನ್ನುತ್ತಾರೆ ಮಾಜಿ ಸಿಎಂ ಕುಮಾರಸ್ವಾಮಿ.
ಒಗ್ಗಟ್ಟಿನಿಂದ ಒಂದೇ ಧ್ವನಿಯಿಂದ ಪಕ್ಷಕ್ಕಾಗಿ ಕೆಲಸ ಮಾಡಿದರೆ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೆಡಿಎಸ್ ಇನ್ನಷ್ಟು ಬಲಿಷ್ಠವಾಗಲಿದೆ. ಎ.ಸದಾನಂದ ಶೆಟ್ಟಿ ಅವರನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಟಿಕೆಟ್ ನೀಡುವುದರಿಂದ ಅವರ ವಿರುದ್ಧ ಯಾವುದೇ ಪಕ್ಷದ ಅಭ್ಯರ್ಥಿಗಳು ಕೂಡ ಬೇಗನೆ ನಿಲ್ಲುವ ಧೈರ್ಯ ಮಾಡುವುದು ಕಡಿಮೆ ಎಂಬ ಮಾತು ಕೂಡ ಮತದಾರರಲ್ಲಿ ಓಡಾಡುತ್ತಿದೆ.
ಬಂಟರ ಓಟ ಜೆಡಿಎಸ್ ಕಡೆ:
ಕರಾವಳಿಯಲ್ಲಿ ಅದರಲ್ಲೂ ದ.ಕ. ಜಿಲ್ಲೆಯಲ್ಲಿ ಜನತಾ ದಳವನ್ನು ಕಟ್ಟಿ ಬೆಳೆಸುವುದು ಸಾಧ್ಯವೇ ಇಲ್ಲ ಎಂಬಂತಹ ಸ್ಥಿತಿಯಲ್ಲಿದ್ದ ಪಕ್ಷಕ್ಕೆ ಪುನರ್ಶಕ್ತಿ ಒದಗಿಸಲು ಖುದ್ದು ಎಚ್.ಡಿ.ಕುಮಾರಸ್ವಾಮಿಯೇ ನಿಂತಿದ್ದು, ಜಿಲ್ಲೆಯ ಉಳಿದ ಪಕ್ಷಗಳ ರಾಜಕೀಯ ನಾಯಕರಲ್ಲಿ ನಡುಕ ಹುಟ್ಟಿಸಿದಂತಿದೆ.
ಎಚ್.ಡಿ. ಕುಮಾರಸ್ವಾಮಿ ಪಕ್ಷವನ್ನು ದ.ಕ. ಜಿಲ್ಲೆಯಲ್ಲಿ ಸಂಘಟಿಸಲು ಅಣಿಯಾಗಿ ಇಲ್ಲಿಯ ಪ್ರಭಾವಿ ನಾಯಕರನ್ನು ಸೆಳೆಯುತ್ತಿದ್ದಾರೆ. ಕಾಕತಾಳಿಯೋ ಉದ್ದೇಶಪೂರ್ವಕವೂ ಕುಮಾರಸ್ವಾಮಿಯ ಬಲೆಯಲ್ಲಿ ಕೆಡಹಲು ಬಯಸಿರುವ ನಾಯಕರಲ್ಲಿ ಬಹುತೇಕರು ಬಂಟರಾಗಿದ್ದಾರೆ.
ಬಿಲ್ಲವರ ಬಳಿಕ ದ.ಕ. ಜಿಲ್ಲೆಯಲ್ಲಿ ಪ್ರಭಾವಿ ಸಮುದಾಯವಾಗಿ ಗುರುತಿಸಿಕೊಂಡಿರುವುದು ಬಂಟ ಸಮುದಾಯ. ಈವರೆಗೆ ದ.ಕ. ಜಿಲ್ಲೆಯಲ್ಲಿ ಮುಸ್ಲಿಮರ ಪ್ರಭಾವ ವಲಯದಲ್ಲಿದ್ದ ಜೆಡಿಎಸ್ ಈಗ ಬಂಟರ ಪ್ರಭಾವಕ್ಕೆ ಒಳಗಾಗುವ ಲಕ್ಷಣಗಳು ಗೋಚರಿಸುತ್ತಿವೆ.
ಎಲ್ಲ ಪಕ್ಷಗಳೊಂದಿಗೂ ಸಮಾನ ಮಿತ್ರರನ್ನು ಹೊಂದಿರುವ ಕಾಂಗ್ರೆಸಿಗರೊಂದಿಗೆ ಹೆಚ್ಚೇ ಎನಿಸುವಷ್ಟು ಒಡನಾಟ ಹೊಂದಿದ್ದ ಸದಾನಂದ ಶೆಟ್ಟರು ಬಹಳ ಹಿಂದೆಯೇ ಕುಮಾರ ಸ್ವಾಮಿಯೊಂದಿಗೆ ಮಿತ್ರತ್ವ ಹೊಂದಿದ್ದರು. ಬಹಿರಂಗವಾಗಿ ಪಕ್ಷದ ವೇದಿಕೆಯಲ್ಲಿ ಕಾಣಿಸಿಕೊಂಡಿರಲಿಲ್ಲ. ಜಿಲ್ಲೆಯ ಜೆಡಿಎಸ್ ಗೊಂದಲದಿಂದಲೂ ದೂರವೇ ಇದ್ದವರು ಈಗ ಸಕ್ರಿಯರಾಗುವ ಲಕ್ಷಣ ತೋರಿಸಿದ್ದಾರೆ.
ಕುಮಾರಸ್ವಾಮಿ ಬಲೆ ಬೀಸಿರುವ ಬಂಟರಲ್ಲಿ ಶಕುಂತಳಾ ಶೆಟ್ಟರೂ ಇದ್ದಾರೆ. ಹಾಲಾಡಿ ಶ್ರೀನಿವಾಸ ಶೆಟ್ಟರೂ ಇದ್ದಾರೆ ಎಂಬುದು ಬಹಿರಂಗ ಸುದ್ದಿ. ಬಹಿರಂಗವಾಗದ ಇನ್ನೊಂದು ಸುದ್ದಿ ಎಂದರೆ ಎ.ಜೆ. ಶೆಟ್ಟರದ್ದು. ಕುಮಾರಸ್ವಾಮಿ ಆರ್ಥಿಕವಾಗಿ ಬಲಾಢ್ಯ ಬಂಟರನ್ನು ಬಲೆಗೆ ಕೆಡಹುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಅಮರನಾಥ್ ಶೆಟ್ಟರು ಜೆಡಿಎಸ್ ಗೆ ಬಲವಾಗಿ ಮೊದಲಿನಿಂದಲೇ ಇದ್ದಾರೆ. ಅವರಿಗೆ ಹೆಗಲು ಕೊಡಲು ಬಂದವರು ಯುವ ನಾಯಕ ಶ್ರೀನಾಥ ರೈ, ಸುರೇಶ್ಚಂದ್ರ ಶೆಟ್ಟಿ ಬಂದಿದ್ದಾರೆ. ಬಂಟ ಯುವ ಮುಂದಾಳು ಶಶಿರಾಜ್ ಶೆಟ್ಟಿ ಕೊಳಂಬೆ ಈಗಾಗಲೇ ಜೆಡಿಎಸ್ ಸೇರಿ ಸಕ್ರಿಯರಾಗಿದ್ದಾರೆ.
ಜೆಡಿಎಸ್ ಗೆ ಶಕ್ತಿ ಒದಗಿಸಲು ಸಿದ್ದರಾಗಿರುವ ಬಂಟ ನಾಯಕರಲ್ಲಿ ಐಕಳ ಹರೀಶ್ ಶೆಟ್ಟಿ ಕೂಡ ಇದ್ದಾರೆ. ಮೂಲತಃ ಮುಲ್ಕಿಯವರಾದ ಐಕಳ ಹರೀಶ್ ಶೆಟ್ಟರು ಮುಂಬೈಯಲ್ಲಿ ಉದ್ಯಮಿಯಾಗಿ ಬೆಳೆದಿದ್ದಾರೆ. ಹಾಗೆಂದು ಹುಟ್ಟೂರಿನ ನಂಟು ಕಳೆದುಕೊಂಡವರಲ್ಲ. ನಾಗಮಂಡಲದಂತಹ ಧಾರ್ಮಿಕ ಕಾರ್ಯಕ್ರಮಗಳು ಸಂಘಟಿಸಿ ಗಮನ ಸೆಳೆದಿದ್ದಾರೆ. ಅವರೀಗ ಜೆಡಿಎಸ್ ಮೂಲಕ ರಾಜಕೀಯ ಅಖಾಡಕ್ಕೆ ಇಳಿಯಲು ಸಿದ್ಧರಾಗಿದ್ದಾರೆ. ಅವರದು ಮುಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಮೇಲೆ ಕಣ್ಣು. ಅದೇ ರೀತಿ ದಶಕದ ಹಿಂದೆ ಜಿಲ್ಲೆಯಲ್ಲಿ ಕಾರ್ಮಿಕರ ಪರವಾಗಿ ಧ್ವನಿ ಎತ್ತಿ ಪ್ರತಿಭಟನೆಗೆ ಇಳಿದಿದ್ದ ಕ್ರಾಂತಿ ಪರಿಷತ್ತಿನ ಮುಖಂಡ, ಡಿಗ್ಗರ್ಸ್ ಇಂಡಿಯಾದ ಮಾಲಕ ಜೈರಾಜ್ ಶೆಟ್ಟಿ ಅವರನ್ನೂ ಎಚ್.ಡಿ. ಕುಮಾರ ಸ್ವಾಮಿ ಸಂಪರ್ಕಿಸಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ.
Click this button or press Ctrl+G to toggle between Kannada and English