ಮಂಗಳೂರು: ಯಾವುದೇ ಧಮ೯,ದೇವರನ್ನು ನಿಂದಿಸುವುದು ಅಥವಾ ಅವಹೇಳನ ಮಾಡುವುದು ಸಹಿಸಲು ಸಾಧ್ಯವಿಲ್ಲ. ಅಂತಹ ಕಿಡಿಗೇಡಿಗಳ ವಿರುದ್ಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಆಹಾರ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಕಟೀಲು ಪರಮೇಶ್ವರಿ ದೇವಸ್ಥಾನದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಟೀಕೆಗಳನ್ನು ಬರೆದಿರುವುದು ಅಕ್ಷಮ್ಯ ಅಪರಾಧ. ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಲು ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.
ಫೇಸ್‌ಬುಕ್‌ನಲ್ಲಿ ಈ ರೀತಿ ಬರೆದ ಆರೋಪಿ ಮುಸ್ಲಿಂ ಆಗಿದ್ದರೆ ಅವನು ನೈಜ ಮುಸ್ಲಿಮನಾಗಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಯಾರು ಯಾರದ್ದೋ ಹೆಸರಿನಲ್ಲಿ ವಿವಿಧ ಬರಹಗಳನ್ನು ಬರೆದು ಸಮಾಜದಲ್ಲಿ ಅಶಾಂತಿ ಸೃಷ್ಟಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ ಎಂದಿದ್ಧಾರೆ.
ಈ ಹಿಂದೆ ಇಂತಹ ಹಲವಾರು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ಯಾವುದೇ ಧಮ೯ದ ನೈಜ ಅನುಯಾಯಿಗಳು ಇತರ ಧಮ೯ ನಿಂದಿಸುವುದನ್ನು ಬೆಂಬಲಿಸುವುದಿಲ್ಲ. ಇದು ನಮ್ಮ ದೇಶದ ಸಂಸ್ಕೃತಿ. ಎಲ್ಲರೂ ತಾಳ್ಮೆಯಿಂದ ಇದ್ದು, ತನಿಖೆಗೆ ಸಹಕರಿಸಿ ಎಂದು ಖಾದರ್ ಕೋರಿದ್ದಾರೆ.
ವಿವಿಧ ಧಮ೯ಗಳ ಹಬ್ಬಗಳು ಜತೆಜತೆಯಾಗಿ ಬರುತ್ತಿದ್ದು, ನಾವು ಇದೇ ರೀತಿ ಜತೆಜತೆಯಾಗಿ ಸಾಗುವ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English