ಮಂಗಳೂರು: ಟಿಪ್ಪು ಜಯಂತಿಯಂದು ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಜ್ಜಾಗಿದೆ. ಈ ನಿಟ್ಟಿನಲ್ಲಿ ನಾಳೆ ಬೆಳಗ್ಗೆ ಆರು ಗಂಟೆಯಿಂದ ನ. 12ರ ಸಂಜೆ ಆರು ಗಂಟೆಯವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದ್ದಾರೆ.
ಟಿಪ್ಪು ಜಯಂತಿ ಆಚರಣೆಯಂಗವಾಗಿ ನಡೆದ ಪೂರ್ವಭಾವಿ ಸಭೆಗೂ ಮುನ್ನ ಸುದ್ದಿಗಾರರೊಂದಿಗೆ ಮಾತಣಾಡಿದ ಅವರು, ನಿಷೇಧಾಜ್ಞೆಯಿಂದ ಯಾವುದೇ ಸಾರ್ವಜನಿಕ ಹಾಗೂ ಮದುವೆ ಅಥವಾ ಇನ್ನಿತರ ಕಾರ್ಯಕ್ರಮಗಳಿಗೆ ಧಕ್ಕೆಯಾಗುವುದಿಲ್ಲ. ಆದರೆ, ಕೋಮು ಪ್ರಚೋದನಕಾರಿ ಭಾಷಣ, ಪ್ರತಿಭಟನೆಯಂತಹ ಕಾರ್ಯಕ್ರಮಗಳಿಗೆ ನಿಷೇಧ ಹೇರಲಾಗಿದೆ. ನಿಯಮ ಮೀರಿದವರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ ಮಾತನಾಡಿದ ಪೊಲೀಸ್ ಕಮಿಷನರ್ ಚಂದ್ರಶೇಖರ್, ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಕಳುಹಿಸಿದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಗ್ರೂಪ್ ಅಡ್ಮಿನ್‌ಗಳು ಇಂಥಹ ಸಂದೇಶಗಳಿಗೆ ಜವಾಬ್ದಾರರಾಗುತ್ತಾರೆ ಎಂದು ತಿಳಿಸಿದರು.
ಈಗಾಗಲೇ ನಗರದ ಕೆಲ ಬೀದಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಇನ್ನಷ್ಟು ಸಿಸಿಟಿವಿಗಳನ್ನು ಹಾಕಲಾಗಿದೆ. ನಾಲ್ಕು ಹೈ ರೆಸೆಲ್ಯೂಶನ್ ಡ್ರೋನ್ ಕ್ಯಾಮರಾಗಳು ಕಾರ್ಯಾಚರಿಸಲಿವೆ. ಇನ್ನು ಅಲ್ಲಲ್ಲಿ ಪೊಲೀಸ್ ಕಣ್ಗಾವಲಿರುತ್ತದೆ. ಗಡಿ ಪ್ರದೇಶಗಳಲ್ಲಿಯೂ ಪೊಲೀಸರು ಕಟ್ಟೆಚ್ಚರ ವಹಿಸಲಿದ್ದಾರೆ. ಹಾಗಂತ ಸಾರ್ವಜನಿಕರು ಯಾವುದೇ ಭಯಪಡಬೇಕಾಗಿಲ್ಲ. ಅವರ ಸಂಪೂರ್ಣ ಜವಾಬ್ದಾರಿ ಪೊಲೀಸರ ಮೇಲಿದೆ ಎಂದು ಅಭಯ ನೀಡಿದ್ದಾರೆ.
ಇನ್ನು ಟಿಪ್ಪು ಜಯಂತಿ ಆಚರಣೆಗೆ ಅಡಚಣೆಯಾಗದಂತೆ ಈಗಾಗಲೇ ಜಿಲ್ಲಾ ಎಸ್ಪಿ ವ್ಯಾಪ್ತಿಯಲ್ಲಿ 190 ಮಂದಿ ಹಾಗೂ ಕಮಿಷನರೇಟ್ ವ್ಯಾಪ್ತಿಯಲ್ಲಿ 106 ಮಂದಿಯಿಂದ ಬಾಂಡ್ ಬರೆಸಿಕೊಳ್ಳಲಾಗಿದೆ ಎಂದು ಕಮೀಷನನರ್ ತಿಳಿಸಿದ್ದಾರೆ.
Click this button or press Ctrl+G to toggle between Kannada and English