ಮಂಗಳೂರು: ಶಾಸಕ ಬಿ.ಎ. ಮೊಯ್ದೀನ್ ಬಾವಾ ಅವರು ಇಲ್ಲಿನ ಕೈಗಾರಿಕಾಭಿವೃದ್ಧಿ ಅಧಿಕಾರಿ ಪ್ರಕಾಶ್ ಎನ್ನುವವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಈ ಘಟನೆ ವೈರಲ್ c ಆಗಿದೆ.
ಜೋಕಟ್ಟೆ-ಬೈಕಂಪಾಡಿ ರಸ್ತೆ ಕಾಮಗಾರಿ ವಿಚಾರದಲ್ಲಿ ಸಾರ್ವಜನಿಕರ ಜೊತೆ ಕಚೇರಿಗೆ ನುಗ್ಗಿದ ಶಾಸಕ ಮೊಯ್ದೀನ್ ಬಾವಾ ಅಧಿಕಾರಿ ಜೊತೆ ಅನುಚಿತವಾಗಿ ವರ್ತಿಸಿದ್ದಲ್ಲದೆ ಏಕವಚನದಲ್ಲಿ ಮಾತನಾಡಿ ಪ್ರಕಾಶ್ ಅವರನ್ನು ಎದ್ದು ನಿಂತು ಕ್ಷಮಾಪಣೆ ಕೇಳುವಂತೆ ಒತ್ತಾಯಿಸಿದ್ದಾರೆ ಎನ್ನಲಾಗುತ್ತಿದೆ.
ಇದಕ್ಕೂ ಮುನ್ನ ಸಾರ್ವಜನಿಕರ ಜೊತೆ ಅಧಿಕಾರಿ ಪ್ರಕಾಶ್ ಉಡಾಫೆಯಿಂದ ವರ್ತಿಸಿದ್ದರು. ಇದನ್ನು ಪ್ರಶ್ನಿಸಲು ಶಾಸಕರು ಸ್ಥಳೀಯರ ಜೊತೆ ಪ್ರಕಾಶ್ ಅವರ ಕಚೇರಿಗೆ ತೆರಳಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗುತ್ತಿದೆ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಶಾಸಕ ಮೊಯ್ದಿನ್ ಬಾವಾ, ಕೆಐಎಡಿಬಿ ಅಧಿಕಾರಿಗೆ ನಾನು ಬೈದಿಲ್ಲ, ಅಧಿಕಾರಿಯು ಐಎಸ್‌ಪಿಆರ್‌ಎಲ್ ಕಂಪೆನಿ ಪರ ನಿಂತಿದ್ದು ಜನರಿಗೆ ಸಮಸ್ಯೆಯಾದರೂ ಸಹ ಪೈಪ್‌ಲೈನ್ ಮುಚ್ಚುವ ಕೆಲಸ ಮಾಡಿಲ್ಲ. ಕಂಪನಿ ಬರುವಾಗ ಜನರಿಗೆ ಆಶ್ವಾಸನೆ ನೀಡಿತ್ತು. ಅಭಿವೃದ್ಧಿಗಾಗಿ ಅಧಿಕಾರಿಯನ್ನು ಹತ್ತು ಬಾರಿ ಕರೆದಿದ್ದೆ, ಕೆಐಎಡಿಬಿ ರಸ್ತೆ ಅಭಿವೃದ್ಧಿಗಾಗಿ ಜನರು ಅಧಿಕಾರಿ ಬಳಿ ಹೋಗಿದ್ದರು. ಈ ವೇಳೆ ಜನರನ್ನು ಅಧಿಕಾರಿ ಪ್ರಕಾಶ್ ಗೆಟೌಟ್ ಎಂದು ಹೊರ ಕಳುಹಿಸಿದ್ದರು.
ಹಾಗಾಗಿ ನಾನು ಜನರನ್ನು ಶಾಂತಗೊಳಿಸಲು ಅವರ ಕಚೇರಿಗೆ ಹೋಗಿದ್ದೆ. ಈ ಬಗ್ಗೆ ಅವರ ಮೇಲಾಧಿಕಾರಿ ಮತ್ತು ಸಿಎಂಗೆ ವರ್ಗಾವಣೆ ಮಾಡಲು ಪತ್ರ ಸಹ ನೀಡಿದ್ದೇನೆ ಎಂದಿದ್ದಾರೆ.
Click this button or press Ctrl+G to toggle between Kannada and English