ಪುತ್ತೂರು: ಮಂಜಲ್ಪಡ್ಪು ಬಳಿಯ ಶಿಂಗಾಣಿ ಸೇತುವೆ, ಪ್ರಮುಖ ರಸ್ತೆಗಳ ವಿಸ್ತರಣೆ, ಬಿರುಮಲೆ ಅಭಿವೃದ್ಧಿ,ಉಪ್ಪಿನಂಗಡಿ ಬಳಿಯ ನದಿ ಒತ್ತುವರಿ, ರೈಲ್ವೇ ಮೇಲ್ಸೇತುವೆ, ದಿನವಹಿ ಸಂತೆ ಹೀಗೆ ಹಲವು ವಿಷಯಗಳು ಕ್ರಮೇಣ ಮೂಲೆ ಗುಂಪಾಗುತ್ತಿವೆ.
ಈ ಎಲ್ಲ ಯೋಜನೆಗಳಿಗಾಗಿ ಸಾಕಷ್ಟು ಅನುದಾನ ಬಳಸಿಕೊಳ್ಳಲಾಗಿದೆ. ಒಂದೆಡೆ ಬಳಕೆಗೂ ಲಭ್ಯವಾಗದೆ, ಇನ್ನೊಂದೆಡೆ ಅನುದಾನವೂ ಪೋಲಾಗುವ ಭೀತಿ ಎದುರಾಗಿದೆ. ಲಕ್ಷಾಂತರ ರೂ.ವನ್ನು ಯೋಜನೆಗೆ ವಿನಿಯೋಗಿಸಿದ್ದರೂ ಬಳಕೆಗೆ ಲಭ್ಯವಾಗಿಲ್ಲ. ಇದನ್ನು ಪ್ರಶ್ನಿಸಿದರೆ ಜನಪ್ರತಿನಿಧಿಗಳು ಅಧಿಕಾರಿಗಳ ಕಡೆ ಕೈ ತೋರಿಸುತ್ತಾರೆ. ಅಧಿಕಾರಿಗಳು ಮೇಲಧಿಕಾರಿಗಳ ಹೆಸರನ್ನು ಹೇಳಿ ನುಣುಚಿಕೊಳ್ಳುತ್ತಾರೆ. ಐಎಎಸ್ ಅಧಿಕಾರಿಗಳು ಪುತ್ತೂರಿಗೆ ನೇಮಕವಾದರೂ ಎಲ್ಲ ವಿಚಾರಗಳು ಬಿಡಿಸಲಾಗದ ಕಗ್ಗಂಟಾಗಿ ಉಳಿದಿರುವುದು ವಿಪರ್ಯಾಸವೇ ಸರಿ.
ಪುತ್ತೂರು ಉಪವಿಭಾಗ ಪ್ರೊಬೇಷನರಿ ಐಎಎಸ್ ಅಧಿಕಾರಿಗಳ ಅಕಾಡೆಮಿಯಂತೆ. ಐಎಎಸ್ ಅಧಿಕಾರಿಗಳನ್ನು ಪುತ್ತೂರಿಗೆ ಪೋಸ್ಟಿಂಗ್ ಮಾಡುವಾಗ ಇಲ್ಲಿರುವ ಕೆಎಎಸ್ ಅಧಿಕಾರಿಯನ್ನು ನಿರ್ದಾಕ್ಷಿಣ್ಯವಾಗಿ ಸಾಗಹಾಕಲಾಗುತ್ತದೆ. ಸಹಾಯಕ ಆಯುಕ್ತನಾಗಿ ಬರುವ ಐಎಎಸ್ ಅಧಿಕಾರಿ, ಕೆಲ ಯೋಜನೆಗಳನ್ನು ಕೈಗೆತ್ತಿಕೊಳ್ಳುವಷ್ಟರಲ್ಲಿ ಬಡ್ತಿ ಅಥವಾ ವರ್ಗಾವಣೆ ಆದೇಶ ಕೈಸೇರಿರುತ್ತದೆ.
ಹೀಗಿರುವಾಗ ಅಭಿವೃದ್ಧಿ ಕಾಮಗಾರಿ ಮುನ್ನೆಲೆಗೆ ಬರುವುದು ಹೇಗೆ? ಮುಂದೆ ಪ್ರಭಾರ ನೆಲೆಯಲ್ಲಿ ಅಧಿಕಾರಿಯನ್ನು ನೇಮಿಸಲಾಗುತ್ತದೆ. ಮೂಲ ಹುದ್ದೆಯ ಕೆಲಸದ ನಡುವೆ, ಈ ಎಲ್ಲ ಅಭಿವೃದ್ಧಿ ವಿಚಾರಗಳ ಕಡೆಗೆ ಗಮನ ಹರಿಸುವುದು ಯಾವಾಗ? ಐಎಎಸ್ ಅಧಿಕಾರಿಗಳು ನೇಮಕವಾದರೂ ಪುತ್ತೂರು ಅಭಿವೃದ್ಧಿ ಹೊಂದುತ್ತಿಲ್ಲ ಎಂಬ ಸಾರ್ವಜನಿಕರ ಅಭಿಪ್ರಾಯಕ್ಕೆ ಇದು ನಿದರ್ಶನವಾಗುತ್ತಿದೆ.
ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಮಂಜಲ್ಪಡ್ಪುವಿನ ಶಿಂಗಾಣಿ ಪ್ರದೇಶಕ್ಕೆ ನಿರ್ಮಿಸಲಾದ ಸೇತುವೆ ಸಂಪೂರ್ಣ ಅವೈಜ್ಞಾನಿಕತೆಯಿಂದ ಕೂಡಿದೆ. ತೋಡು ದಾಟಲು ಸೇತುವೆ ಅಗತ್ಯವೇನೋ ಸರಿ. ಆದರೆ ಇದು ಇರುವ ರಸ್ತೆಗೆ ಸರಿಯಾಗಿ ಕಟ್ಟಬೇಕಿತ್ತು. ಆದರೆ ಶಿಂಗಾಣಿ ಸೇತುವೆಯನ್ನು ಸಮೀಪದ ಬರೆಗೆ ತಾಗಿ ನಿರ್ಮಿಸಲಾಗಿದೆ. ಬರೆ ಇರುವ ಜಾಗ ತೋಟಗಾರಿಕಾ ಇಲಾಖೆಗೆ ಸೇರಿದ್ದು. ಆ ಜಾಗ ಒತ್ತುವರಿಗೆ ಇಲಾಖೆಯ ಸಹಮತ ಇಲ್ಲ. ಆದ್ದರಿಂದ ನಿರ್ಮಿಸಿದ ಸೇತುವೆ ಬಳಕೆಗೆ ಸಿಗುತ್ತಿಲ್ಲ. ಈ ರಸ್ತೆಯಿಂದ ಸಾಗುವ ಜನರು ಮತ್ತು ವಾಹನಗಳು ತೋಡಿಗೆ ಇಳಿದು, ನಡೆದುಕೊಂಡು ಹೋಗಬೇಕು.
ಸ್ಥಳ ಪರಿಶೀಲನೆ ನಡೆಸಿದ ಶಾಸಕಿ, ಸಹಾಯಕ ಆಯುಕ್ತರು ಒಂದು ವಾರದೊಳಗೆ ಕಡತ ನೀಡುವಂತೆ ನಗರಸಭೆಗೆ ಸೂಚಿಸಿದರು. ಸದ್ಯಕ್ಕೆ ಕಡತ ಸಹಾಯಕ ಆಯುಕ್ತರ ಕಚೇರಿ ತಲುಪಿದೆ. ಯೋಜನೆಯ ಉದ್ದೇಶ, ಕಾಮಗಾರಿ ರೂಪುರೇಷೆ ಅಥವಾ ಅವ್ಯವಹಾರದ ಸುಳಿವು ಇದರಲ್ಲಿ ದೊರಕುವ ಸಾಧ್ಯತೆ ಇದೆ. ಆದರೆ ಸಹಾಯಕ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿ ಭಡ್ತಿ ಪಡೆದು ತೆರಳಿದ್ದಾರೆ. ಕಡತ ಪಡೆದು ಕಲೆ ಹಾಕಿದ ಮಾಹಿತಿ ಇದೆಯೇ ಎಂದು ಕೇಳಿದರೆ, ಯಾರ ಬಳಿಯೂ ಉತ್ತರ ಇಲ್ಲ. ಸ್ವತಃ ಶಾಸಕಿ ಬಳಿಯೂ.
ಉಪ್ಪಿನಂಗಡಿ ಬಳಿ ನದಿ ಅತಿಕ್ರಮಣ ನಡೆದಿದೆ ಎಂದು ಹಿಂದಿನ ಸಹಾಯಕ ಆಯುಕ್ತರಾಗಿದ್ದ ಐಎಎಸ್ ಅಧಿಕಾರಿಗೆ ದೂರು ನೀಡಲಾಗಿತ್ತು. ಈ ಬಗ್ಗೆ ಅವರು, ತನಿಖೆಗೆ ಸೂಚಿಸಿದ್ದರು. ತನಿಖೆ ಕೈಗೆತ್ತಿಕೊಳ್ಳುವ ಮೊದಲೇ ಅವರ ವರ್ಗಾವಣೆ ಆಯಿತು.
ಬಿರುಮಲೆ ಅಭಿವೃದ್ಧಿ, ರೈಲ್ವೇ ಮೇಲ್ಸೇತುವೆ, ಪುತ್ತೂರು ದಿನವಹಿ ಸಂತೆ, ರಸ್ತೆ ಅಗಲೀಕರಣ ಹೀಗೆ ಹಲವು ಸಮಸ್ಯೆಗಳ ಕಡತ ರಾಶಿ ಬಿದ್ದಿದೆ. ಅವುಗಳನ್ನು ಬಗೆಹರಿಸಲು ಸಮರ್ಥ ಅಧಿಕಾರಿಯ ಆವಶ್ಯಕತೆ ಪುತ್ತೂರಿಗೆ ಇದೆ. ಪುತ್ತೂರು ಅಭಿವೃದ್ಧಿ ಆಗಬೇಕು ಎಂದು ಬೊಬ್ಬಿಡುವ ಜನಪ್ರತಿನಿಧಿಗಳು, ಇದರತ್ತ ಗಮನಹರಿಸುವ ಅನಿವಾರ್ಯ ಇದೆ. ಜಿಲ್ಲಾ ಕೇಂದ್ರ ಆಗಬೇಕು ಎಂಬ ಆಶಯ ಎಲ್ಲರಿಗೂ ಇದೆ. ಆದರೆ ಇದಕ್ಕೆ ಪೂರಕ ಅಭಿವೃದ್ಧಿ ಕೆಲಸ ನಡೆಯದೇ ಇದ್ದರೆ, ಜಿಲ್ಲಾ ಕೇಂದ್ರ ಕನಸಿನ ಗಂಟಾದೀತು!
ಐಎಎಸ್ ಅಧಿಕಾರಿಗಳನ್ನು ವರ್ಷದೊಳಗೆ ವರ್ಗಾವಣೆ ಮಾಡಲಾಗುತ್ತದೆ. ಆದ್ದರಿಂದ ಇದೀಗ ಐಎಎಸ್ ಅಧಿಕಾರಿಗಳು ಬೇಡ, ಅನುಭವಿ ಕೆಎಎಸ್ ಅಧಿಕಾರಿಗಳನ್ನು ನೀಡುವಂತೆ ಕೇಳಿಕೊಂಡಿದ್ದೇನೆ. ಚುನಾವಣೆಯೂ ಹತ್ತಿರ ಇರುವುದರಿಂದ ಉತ್ತಮ ಅಧಿಕಾರಿ ಬೇಕು. ಅಭಿವೃದ್ಧಿ ಕಾರ್ಯದ ದೃಷ್ಟಿಯಿಂದಲೂ ಇದು ಅನಿವಾರ್ಯ. ಒಂದು ವಾರದಲ್ಲಿ ಅಧಿಕಾರಿಯನ್ನು ನೀಡಲಾಗುವುದು ಎಂದು ಮೇಲಧಿಕಾರಿಗಳು ತಿಳಿಸಿದ್ದಾರೆ.
Click this button or press Ctrl+G to toggle between Kannada and English