ಪುತ್ತೂರು: ಕಾರ್ಗಿಲ್‌ನ ಮೈಕೊರೆವ ಚಳಿ, ಸುರಿವ ಮಂಜು, ಕ್ಷಣ ಕ್ಷಣಕ್ಕೂ ಪ್ರತಿಕೂಲ ಹವಾಮಾನ. ಆದರೆ ಇವ್ಯಾವು ದನ್ನೂ ಲೆಕ್ಕಿಸದೆ ದೇಶ ಸೇವೆಯೊಂದೇ ಉದ್ದೇಶ ಎಂದು ಗಡಿ ಕಾಯುತ್ತಿರುವವರು ಸೈನಿಕ ಕ್ಯಾಪ್ಟನ್ ರಾಧೇಶ್. ರಾಧೇಶ್ ಮೂಲತಃ ಪುತ್ತೂರಿನವರು. ಸದ್ಯ ಕಾರ್ಗಿಲ್‌ನ ದ್ರಾಸ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
2015ರಲ್ಲಿ ಭಾರತೀಯ ಭೂಸೇನೆಗೆ ಅಧಿಕಾರಿಯಾಗಿ ಸೇರಿದ ರಾಧೇಶ್ ದೇಶ ಸೇವೆ ಮಾಡಲು ಅವಕಾಶ ಸಿಕ್ಕಿದ ಬಗ್ಗೆ ಅತೀವ ಹೆಮ್ಮೆ ಪಡುತ್ತಾರೆ. 2016 ಎಪ್ರಿಲ್‌ನಿಂದ ಚೆನ್ನೈಯಲ್ಲಿ ಕಠಿನ ತರಬೇತಿ ಪೂರೈಸಿದ್ದ ಅವರು ಬಳಿಕ ವಿಶ್ವದ ಅತಿ ದುರ್ಗಮ ಯುದ್ಧ ಭೂಮಿ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಲೆಫ್ಟಿನೆಂಟ್ ಆಗಿ ಅಧಿಕಾರ ವಹಿಸಿಕೊಂಡಿದ್ದರು. ಆ ಬಳಿಕ ಅವರೀಗ ಕ್ಯಾಪ್ಟನ್ ಆಗಿ ಪದೋನ್ನತಿ ಹೊಂದಿ ಕಾರ್ಗಿಲ್‌ನ ದ್ರಾಸ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಧೇಶ್ ಅವರ ತಂದೆ ರಾಧಾಕೃಷ್ಣ ಗೌಡ ಪುತ್ತೂರು ಎಪಿಎಂಸಿ ರಸ್ತೆಯ ನಿವಾಸಿ. ಇವರೂ ಸೇನೆಯಲ್ಲಿದ್ದರು ಬಳಿಕ ಎಸ್‌ಬಿಐ ಸೇರಿದ್ದು ಅಲ್ಲೂ ನಿವೃತ್ತರಾಗಿದ್ದಾರೆ. ತಾಯಿ ಉಷಾ ಉಪ್ಪಿನಂಗಡಿ ಸಹಕಾರಿ ಸಂಘದ ಉದ್ಯೋಗಿಯಾಗಿದ್ದಾರೆ. ರಾಧೇಶ್ ಅಣ್ಣ ರಂಜಿತ್ ನೌಕಾದಳದ ಲೆಫ್ಟಿನೆಂಟ್ ಅಧಿಕಾರಿಯಾಗಿದ್ದಾರೆ. ಅಣ್ಣ ಅಧಿಕಾರಿಯಾಗಿ ನೇಮಕವಾಗುತ್ತಿದ್ದಂತೆ ರಾಧೇಶ್ ಅವರಿಗೂ ಈ ಬಗ್ಗೆ ತೀವ್ರ ಒಲವು ಮೂಡಿದ್ದು, ಅಣ್ಣನಂತೆ ತಾನೂ ಆಗಬೇಕೆಂದು ಭೂಸೇನೆಗೆ ಸೇರ್ಪಡೆಯಾಗಲು ಶ್ರಮವಹಿಸಿದರು.
ರಾಧೇಶ್ ಅವರು ಮಂಜಲ್ಪಡ್ಪು ಸುದಾನ ಶಾಲೆಯಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ, ಮಂಗಳೂರು ಸಂತ ಅಲೋಶಿಯಸ್‌ನಲ್ಲಿ ಪದವಿಪೂರ್ವ, ಪದವಿ ಶಿಕ್ಷಣ ಬಳಿಕ ನೆಹರೂನಗರ ವಿವೇಕಾನಂದ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ, ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಏರೋಸ್ಪೇಸ್ ವಿಭಾಗದಲ್ಲಿ ಎಂ.ಟೆಕ್. ಪದವಿ ಪಡೆದಿದ್ದಾರೆ. ಬಳಿಕ ಭೂಸೇನೆ ಸಂದರ್ಶನದಲ್ಲಿ ತೇರ್ಗಡೆಯಾಗಿದ್ದು, 2015ರಿಂದ ದೇಶಸೇವೆಗೆ ಸಮರ್ಪಿಸಿಕೊಂಡಿದ್ದಾರೆ.
ರಾಧೇಶ್ ಅವರು ಹೇಳುವಂತೆ, ಸೇನೆಯ ಬಗ್ಗೆ ರಾಜ್ಯದ ಜನರಲ್ಲಿ ಹೆಚ್ಚಿನ ತಿಳಿವಳಿಕೆ ಇಲ್ಲ. ಬಂದೂಕು ಹಿಡಿದು ಗಡಿ ಕಾಯುವುದೇ ಸೇನೆಗೆ ಸೇರಿದವರು ಮಾಡುವ ಕೆಲಸ ಎಂದುಕೊಂಡಿರುತ್ತಾರೆ. ಉತ್ತಮ ಶಿಕ್ಷಣ ಪಡೆದವರೂ ಸೇನೆಗೆ ಸೇರಲು ಹಿಂಜರಿಯುತ್ತಾರೆ. ಆದರೆ ಗಡಿ ಕಾಯುವುದಷ್ಟೇ ಸೇನೆಯಲ್ಲಿನ ಕೆಲಸವಲ್ಲ. ಇಲ್ಲಿ ಅಧಿಕಾರಿ ಹುದ್ದೆಗಳಿವೆ. ಇಂತಹ ಹುದ್ದೆಗಳಿಗೆ ಉತ್ತಮ ಶಿಕ್ಷಣ ಪಡೆದವರೂ ಬರಲು ಯತ್ನಿಸಬೇಕು. ಕೆಲವರು ಸೇನೆಗೆ ಸೇರಬೇಕೆಂಬ ಆಸೆ ಹೊಂದಿರುತ್ತಾರೆ. ಇನ್ನು ಕೆಲವರಿಗೆ ಈ ಬಗ್ಗೆ ಸರಿಯಾದ ಮಾರ್ಗದರ್ಶನ ಸಿಕ್ಕಿರುವುದಿಲ್ಲ. ದೇಶ ಸೇವೆಯ ಕೆಲಸಕ್ಕೆ, ಸೇನೆ ಸೇರಲು ಹೆತ್ತವರೂ ಪ್ರೇರೇಪಿಸಬೇಕು.
ಸಿಯಾಚಿನ್‌ನಲ್ಲಿ ಸೇವೆ ಸಲ್ಲಿಸಿ ಅಪೂರ್ವ ಅನುಭವ ಪಡೆದಿರುವ ರಾಧೇಶ್ ಹೇಳುವಂತೆ, ಸಿಯಾಚಿನ್‌ಗೆ ಸೈನಿಕರು ಹಂತ ಹಂತವಾಗಿ ಸುಮಾರು 80 ಕಿ.ಮೀ. ನಡೆಯಬೇಕಾಗುತ್ತದೆ. ಈ ವೇಳೆ ನಿಗದಿಪಡಿಸಿದ ದಾರಿಯಲ್ಲೇ ಸಾಗಬೇಕು. ಕೆಲವೆಡೆ ಮೇಲ್ಮೆ„ ಹಿಮಗಡ್ಡೆಯಂತೆ ಕಂಡು ಬಂದರೂ ಕೆಲವೆಡೆ ಮೈನಸ್ 40 ಡಿ. ಸೆ.ನಿಂದ ಮೈನಸ್ 50ಡಿ. ಸೆ. ನಷ್ಟು ಉಷ್ಣತೆಯಲ್ಲಿ ಕರಗಿದ ಹಿಮವೂ ಇರುತ್ತದೆ. ಇದರಲ್ಲಿ ನಡೆದರೆ ಅಪಾಯ ಕಟ್ಟಿಟ್ಟದ್ದು. ಸಿಯಾಚಿನ್ ನ ನಿರ್ದಿಷ್ಟ ಪ್ರದೇಶ ತಲುಪಿದ ಮೇಲೆ ಹೆಲಿಕಾಪ್ಟರ್ ಮೂಲಕವೇ ಆಹಾರ ಪೂರೈಕೆ ಆಗುತ್ತಿರುತ್ತದೆ.
ಸೇನೆ, ಗಡಿ ಕಾಯುವುದೂ ಸಹಿತ ಯಾವುದೇ ಸಂದರ್ಭಕ್ಕೂ ಯಾವುದೇ ಕ್ಷಣದಲ್ಲೂ ಪರಿಸ್ಥಿತಿ ಎದುರಿಸಲು ಸನ್ನದ್ಧವಾಗಿರುತ್ತದೆ. ಇಲ್ಲಿ ಮೇಲಧಿಕಾರಿಗಳ ಮಾತುಗಳನ್ನು ನಾವು ಶಿರಸಾವಹಿಸಿ ಪಾಲಿಸುತ್ತೇವೆ. ದೇಶದಲ್ಲಿ ನಮಗೆ ಬೇಕಾದಂತೆ ಬದುಕಲು ಅವಕಾಶವಿದೆ. ಸಂಬಳ ಹೆಚ್ಚು ಮಾಡಿಲ್ಲ ಎಂದು ಕೆಲವೆಡೆ ಪ್ರತಿಭಟನೆ ನಡೆದ ಬಗ್ಗೆಯೂ ಕೆಲವೊಮ್ಮೆ ವರದಿಯಾಗಿದೆ. ಆದರೆ ಇವೆಲ್ಲದಕ್ಕಿಂತ ದೇಶದ ಅಭಿವೃದ್ಧಿಯೇ ಮುಖ್ಯವಾಗಬೇಕು.
ದೇಶದಷ್ಟೇ ಮಕ್ಕಳೂ ನನಗೆ ಮುಖ್ಯ. ಓರ್ವ ನೌಕಾದಳದಲ್ಲಿ ಮತ್ತೋರ್ವ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾನೆ. ಕಳೆದ 6 ತಿಂಗಳಿಂದ ರಾಧೇಶ್, ಕಾರ್ಗಿಲ್‌ನ ದ್ರಾಸ್ ನಲ್ಲಿದ್ದಾನೆ. ಈ ಜನವರಿಯಲ್ಲಿ ಬರಬೇಕಿತ್ತು. ಆದರೆ ಮಾರ್ಚ್‌ಗೆ ಮುಂದೂಡಲಾಗಿದೆ. ಸೇನೆಗೆ ಸೇರಿದ ಮಗನ ಬಗ್ಗೆ ಅತೀವ ಹೆಮ್ಮೆಯಿದೆ.
Click this button or press Ctrl+G to toggle between Kannada and English