ಮಂಗಳೂರು: ಕರೆದಲ್ಲಿಗೆ ಬಾರದ, ಅಧಿಕ ದರ ವಸೂಲಿ ಮಾಡುವ ಬಾಡಿಗೆ ಆಟೋಗಳ ವಿರುದ್ಧ ಕ್ರಮ ತೆಗೆದುಕೊಳ್ಳಲು ಪೊಲೀಸರು ಮುಂದಾಗಿದ್ದಾರೆ. ಅಂತಹ ರಿಕ್ಷಾಗಳ ಸಂಖ್ಯೆಯನ್ನು ದಾಖಲಿಸಿ ನಿಯಂತ್ರಣ ಕೊಠಡಿ, ದೂರವಾಣಿ 100ಗೆ ದೂರು ನೀಡುವಂತೆ ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ತಿಳಿಸಿದ್ದಾರೆ.
ಅವರ ಕಚೇರಿಯಲ್ಲಿ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಕರೆ ಮಾಡಿದ ಸಾರ್ವಜನಿಕರು, ಆಟೋ ರಿಕ್ಷಾ ಚಾಲಕರು ಕರೆದಲ್ಲಿಗೆ ಬರುತ್ತಿಲ್ಲ ಹಾಗೂ ಅಧಿಕ ಬಾಡಿಗೆ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಆಯುಕ್ತರು, ಆಟೋ ನಿಲ್ದಾಣದಲ್ಲಿ ಎಷ್ಟು ಆಟೋಗಳಿಗೆ ಪಾರ್ಕಿಂಗ್ ಮಾಡಲು ಅವಕಾಶವಿದೆ, ಎಷ್ಟು ಅಧಿಕೃತ ಹಾಗೂ ಅನಧಿಕೃತ ರಿಕ್ಷಾಗಳಿವೆ ಎಂಬ ಪಟ್ಟಿ ತಯಾರಿಸಲಾಗುತ್ತಿದೆ ಎಂದು ಹೇಳಿದರು.
ನಗರದ ಅತ್ರೆಬೈಲ್‌ಗೆ ಬಸ್‌ಗಳು ಬರುತ್ತಿಲ್ಲ. ಖಾಸಗಿ ಬಸ್‌ಗಳು ಬಾರದಿದ್ದರೆ ಲ್ಯಾಂಡ್ಲಿಂಕ್ಸ್ ತನಕ ಸರ್ಕಾರಿ ಬಸ್ ವ್ಯವಸ್ಥೆ ಕಲ್ಪಿಸಲು ಕೆಎಸ್ಆರ್‌ಟಿಸಿ ವಿಭಾಗಾಧಿಕಾರಿಗಳ ಜೊತೆಗೆ ಚರ್ಚಿಸಲಾಗುವುದು. ಶೀಘ್ರದಲ್ಲೇ ಇದಕ್ಕೆ ಪರಿಹಾರ ಲಭಿಸಲಿದೆ ಎಂದು ಅವರು ಭರವಸೆ ನೀಡಿದರು.
ಕೆಲವು ಎಕ್ಸ್‌ಪ್ರೆಸ್ ಬಸ್‌ಗಳು ಸುರತ್ಕಲ್‌ನಲ್ಲಿ ನಿಲುಗಡೆ ನೀಡುತ್ತಿಲ್ಲ ಎಂದು ಮಹಿಳೆಯೊಬ್ಬರು ನೀಡಿದ ದೂರಿಗೆ, ನಿಯಮದಂತೆ ಸುರತ್ಕಲ್‌ನಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳು ನಿಲುಗಡೆಗೆ ಅವಕಾಶವಿಲ್ಲ. ಆದರೆ ಸರ್ವಿಸ್ ಬಸ್‌ಗಳು ನಿಲುಗಡೆಯಾಗುತ್ತಿವೆ ಎಂದು ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಸ್ಪಷ್ಟಪಡಿಸಿದರು.
ಬಂದರು ಪೊಲೀಸ್ ಠಾಣೆಯಲ್ಲಿ `ನನ್ನ ವಿರುದ್ಧ ರೌಡಿ ಶೀಟರ್ ದಾಖಲಾಗಿದೆ. ನಾನು ಇದೀಗ ಕಾಸರಗೋಡಿನಲ್ಲಿ ವಾಸಿಸುತ್ತಿದ್ದೇನೆ. ಯಾವುದೇ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿಲ್ಲ. ಆದರೂ ಆಗಾಗ ಠಾಣೆಗೆ ಹೋಗಬೇಕಾಗಿದೆ. ನನ್ನ ಹೆಸರನ್ನು ರೌಡಿ ಶೀಟರ್ ಪಟ್ಟಿಯಿಂದ ತೆಗೆದು ಹಾಕಿ’ ಎಂದು ಕಾಸರಗೋಡಿನಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ಒತ್ತಾಯಿಸಿದ ವಿದ್ಯಮಾನ ನಡೆಯಿತು.
ಹಾಗೆಯೇ ‘ಮುಡಿಪುನ ಕ್ಲಿನಿಕ್‌ನಲ್ಲಿ ವೈದ್ಯರು ರೋಗಿಯ ತಪಾಸಣೆ ನಡೆಸುತ್ತಿರಬೇಕಾದರೆ ಹೊರಗೆ ಕಿಟಕಿಯಿಂದ ಯಾರೋ ಇಣುಕಿ ನೋಡುತ್ತಾರೆ. ಇದರಿಂದ ನನಗೆ ಬಹಳ ತೊಂದರೆಯಾಗುತ್ತಿದೆ’ ಎಂದು ವೈದ್ಯರೊಬ್ಬರು ಅಹವಾಲು ಹೇಳಿಕೊಂಡ ಘಟನೆಯೂ ನಡೆಯಿತು.
Click this button or press Ctrl+G to toggle between Kannada and English