ಮಂಗಳೂರು: ಬಸ್ ನಿರ್ವಾಹಕರು ಟಿಕೇಟ್ ನೀಡುತ್ತಿಲ್ಲ, ಚಿಲ್ಲರೆ ನೀಡುತ್ತಿಲ್ಲ, ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸುತ್ತಿಲ್ಲ, ಟ್ರಿಪ್ ಕಟ್ ಮಾಡುತ್ತಾರೆ, ಹಿರಿಯ ನಾಗರಿಕರಿಗೆ ಸೀಟ್ ಒದಗಿಸಿ ಕೊಡುತ್ತಿಲ್ಲ ಇತ್ಯಾದಿ ದೂರುಗಳು ಸಾಮಾನ್ಯವಾಗಿದೆ. ಇದಕ್ಕೆ ಸ್ಪಂದಿಸಿ ಜವಾಬ್ದಾರಿ ಯಿಂದ ಕರ್ತವ್ಯ ನಿರ್ವಹಿಸಬೇಕಾಗಿದೆ. ಮಾಲಕರು ಕೂಡಾ ದಿನ ಬಾಡಿಗೆಗೆ ನೀಡದೆ ತಾವೇ ಮೇಲ್ವಿಚಾರಣೆ ನಡೆಸಬೇಕು ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಹೇಳಿದರು.
ದ.ಕ.ಬಸ್ ಮಾಲಕರ ಸಂಘವು ಸಿಟಿ ಬಸ್ ಚಾಲಕ-ನಿರ್ವಾಹಕರಿಗೆ ಬುಧವಾರ ನಗರದಲ್ಲಿ ಹಮ್ಮಿಕೊಂಡ ಎರಡು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತೀ ವಾರ ನಡೆಯುವ ಪೊಲೀಸ್ ಫೋನ್ ಇನ್ ಕಾರ್ಯಕ್ರಮದಲ್ಲಿ ಸಿಟಿ ಬಸ್ ಚಾಲಕ-ಮಾಲಕರ ಬಗ್ಗೆ ಸಾರ್ವಜನಿಕರಿಂದ ಹೆಚ್ಚಿನ ದೂರುಗಳು ಬರುತ್ತಿವೆ. ಈ ನಿಟ್ಟಿನಲ್ಲಿ ತರಬೇತಿ ಶಿಬಿರ ಆಯೋಜಿಸಿರುವುದು ಶ್ಲಾಘನೀಯ. ಇಲ್ಲಿ ನೀಡಿದ ಸಲಹೆಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು.
ಶಿಬಿರ ನಡೆದ ಬಳಿಕವೂ ತಿದ್ದಿಕೊಳ್ಳದೆ ಹೋದರೆ ಪ್ರಸ್ತುತ ಇರುವ ಸಾರಿಗೆ ವ್ಯವಸ್ಥೆ ನಶಿಸಿ ಹೋಗಿ ಬೇರೆ ಇಲಾಖೆ ಪರ್ಯಾಯ ಕ್ರಮ ಕೈಗೊಳ್ಳುವ ಸಾಧ್ಯತೆ ಎದುರಾಗಬಹುದು ಎಂದರಲ್ಲದೆ, ಸಿಟಿ ಬಸ್ ಚಾಲಕ-ನಿರ್ವಾಹಕರು ಸಾರ್ವಜನಿಕರಿಗೆ ಗುಣಮಟ್ಟದ ಸೇವೆ ನೀಡುವ ಮೂಲಕ ಸಾರಿಗೆ ಸೇವೆಯ ಹಳೆಯ ಪರಂಪರೆಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿದ್ದ ಪ್ರಾದೇಶಿಕ ಸಾರಿಗೆ ಇಲಾಖೆಯ ಉಪ ಆಯುಕ್ತ ಜಿ.ಎಸ್.ಹೆಗ್ಡೆ ಮಾತನಾಡಿ ಬಸ್ ಚಾಲಕರು ನಗರ ವ್ಯಾಪ್ತಿಯಲ್ಲಿ 30 ಕಿ.ಮೀ ವೇಗಕ್ಕಿಂತ ಹೆಚ್ಚು ಚಾಲನೆ ಮಾಡುವಂತಿಲ್ಲ. ಇದರಿಂದ ಅಪಘಾತ ತಡೆಗಟ್ಟಬಹುದು. ಮಂಗಳೂರು ವ್ಯಾಪ್ತಿಯಲ್ಲಿ ಪ್ರತೀ ವರ್ಷ 150-160 ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಚಾಲಕರು ಒಂದಷ್ಟು ಎಚ್ಚರಿಕೆ ವಹಿಸಿದರೆ ಆಗಬಹುದಾದ ಅನಾಹುತ ತಪ್ಪಿಸಬಹುದು ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪಾಡಿ ಬಸ್ ನೌಕರರು, ಸಾರ್ವಜನಿಕರು ಮತ್ತು ವಿದ್ಯಾರ್ಥಿ ಸಮುದಾಯದ ಮಧ್ಯೆ ಮಧುರ ಬಾಂಧವ್ಯ ವಹಿಸಿಕೊಂಡು ಬರುವ ಸದುದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ ಎಂದರು.
ಡಿಸಿಪಿ ಉಮಾ ಪ್ರಶಾಂತ್, ಎಸಿಪಿ ಮಂಜುನಾಥ ಶೆಟ್ಟಿ, ನಿವೃತ್ತ ಸಾರಿಗೆ ಅಧಿಕಾರಿ ಡಾ.ಎಂ.ಆರ್.ಕೇಶವ ಧರಣಿ, ಈಶ್ವರಿ ವಿಶ್ವವಿದ್ಯಾಲಯದ ಬ್ರಹ್ಮಕುಮಾರಿ ವಿಶ್ವೇಶ್ವರಿ, ರಾಜ್ಯ ಬಸ್ ಮಾಲಕರ ಸಂಘದ ಉಪಾಧ್ಯಕ್ಷ ಎ.ಕೆ.ಜಯರಾಮ ಶೇಖ ಮುಖ್ಯ ಅತಿಥಿಗಳಾಗಿದ್ದರು.
ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುಚೇತನ್ ಜಿ ಕಾವೂರು, ಭುಜಂಗ ಶೆಟ್ಟಿ ಗುಡ್ಡೆಗುತ್ತು, ಉಪಾಧ್ಯಕ್ಷ ಬಿ.ಪಿ ದಿವಾಕರ್, ಜತೆ ಕಾರ್ಯದರ್ಶಿ ರಾಮಚಂದ್ರ ಪಿಲಾರ್, ಕೋಶಾಧಿಕಾರಿ ಸತೀಶ್ ತಲಪಾಡಿ ಮೊದಲಾದವರು ಉಪಸ್ಥಿತರಿದ್ದರು. ಚೇತನ್ ಪಿಲಿಕುಳ ಕಾರ್ಯಕ್ರಮ ನಿರೂಪಿಸಿದರು.
Click this button or press Ctrl+G to toggle between Kannada and English