ಮಂಗಳೂರು : ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು ಸೇವಾ ಸಪ್ತಾಹದ ಅಂಗವಾಗಿ ದಿನಾಂಕ 21 ಆಗಸ್ಟ್ 2018ರಂದು ಸಂಜೆ ಕಾಲೇಜಿನ ಎಲ್.ಸಿ.ಅರ್. ಐ. ಸಭಾಂಗಣದಲ್ಲಿ ‘ಅಂತರ್-ಧರ್ಮೀಯ ಸಾಮರಸ್ಯ ದಿವಸ’ವನ್ನು ಬಕ್ರಿದ್ ಆಚರಣೆಯ ಸಲುವಾಗಿ ಹಮ್ಮಿಕೊಂಡಿತ್ತು. ಉದಯವಾಣಿಯ ಮುಖ್ಯ ಸಂಪಾದಕರಾದ, ಶ್ರೀ ಮನೋಹರ್ ಪ್ರಸಾದ್, ಸಂತ ಜೋಸೆಫ್ ಸೆಮಿನರಿಯ ರೆ. ಫಾ. ಕ್ಲಿಫರ್ಡ್ ಫೆರ್ನಾಂಡಿಸ್, ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಸಹಪ್ರಾಧ್ಯಾಪಕರಾದ ಡಾ. ಅಬೂಬಕರ್ ಸಿದ್ದಿಕ್ ರವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾಲೇಜಿನ ಪ್ರಾಂಶುಪಾಲ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ.ರವರು ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ‘ಮಾನವತೆಯೇ ಮಹಾನ್ ಧರ್ಮ’ ಎಂಬ ಶ್ರೇಷ್ಠ ಚಿಂತನೆಯ ಜೊತೆಗೆ ನಂಬಿಕೆ, ತ್ಯಾಗ, ಶಾಂತಿ ಮತ್ತು ಸಂತೋಷದ ಮೂಲತತ್ವವನ್ನು ಹರಡುವುದರ ಜೊತೆಗೆ ಇದ್-ಉಲ್-ಅಧಾವನ್ನು ಆಚರಿಸಲಾಯಿತು. ಮೂರು ಭಿನ್ನ ಸಮುದಾಯಗಳ ಮುಖ್ಯ ಅತಿಥಿಗಳು ಬಕ್ರಿದ್ ಹಬ್ಬದ ಸಂದೇಶವನ್ನು ಬಹಳ ವಿಭಿನ್ನವಾಗಿ ತಿಳಿಸಿ ಮುಸ್ಲಿಮ್ ಬ್ಬಾಂಧವರಿಗೆ ಶುಭಾಶಯ ಕೋರಿದರು. ವಿದ್ಯಾರ್ಥಿಗಳು ಬಕ್ರಿದ್ ಹಬ್ಬದ ಸಂದೇಶ ಸಾರುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.
ಡಾ. ಅಬೂಬಕರ್ ಸಿದ್ದಿಕ್‍ರವರು ತಮ್ಮ ಸಂದೇಶದಲ್ಲಿ ಮೊದಲಿಗೆ ಇಂತಹ ಅಭೂತಪೂರ್ವ ಕಾರ್ಯಕ್ರಮವನ್ನು ಹಮ್ಮಿಕೊಂಡಿದುದಕ್ಕೆ ಸಂತ ಅಲೋಶಿಯಸ್ ಕಾಲೇಜಿಗೆ ಅಭಿನಂದನೆ ಸಲ್ಲಿಸಿದರು. ಅವರು ಬಕ್ರಿದ್ ಹಬ್ಬದ ಸಂದೇಶವನ್ನು ಪ್ರೊಫೆಟ್ ಇಬ್ರಾಹಿಂ ಮತ್ತು ಅವರ ಮಗ ಇಸ್ಮಾಯಿಲ್‍ರವರ ನೈಜಕಥೆಯನ್ನು ಹೇಳುವುದರ ಮೂಲಕ ತಿಳಿಸಿದರು. ಬಕ್ರಿದ್ ಎಂದರೆ ತ್ಯಾಗ ಮತ್ತು ಶಾಂತಿಯ ಸಂಕೇತ. ಈ ಹಬ್ಬವು ಅಲಾಹುವಿಗೆ ಸತ್ಯ ಮತ್ತು ನಿಷ್ಠೆಯನ್ನು ತೋರ್ಪಡಿಸುವ ಹಬ್ಬವಾಗಿದೆ ಎಂದರು. ಮಾಂಸ ಅಥವಾ ರಕ್ತವು ಅಲ್ಲಾಹುವಿಗೆ ತಲುಪಲಾರದು ಆದರೆ ನಿಜವಾದ ಭಕ್ತಿ ಮಾತ್ರ ಅಲ್ಲಾಹುವಿಗೆ ತಲುಪಲು ಸಾಧ್ಯ ಎಂದು ನುಡಿದರು. ಜನರು ಬಕ್ರಿದ್ ಹಬ್ಬದ ಅರ್ಥವನ್ನು ತಿಳಿದುಕೊಂಡು ಸರಿಯಾದ ರೀತಿಯಲ್ಲಿ ಹಬ್ಬವನ್ನು ಆಚರಿಸಬೇಕು ಎಂದು ತಿಳಿಸಿದರು.
ಶ್ರೀ ಮನೋಹರ್ ಪ್ರಸಾದ್‍ರವರು ತಮ್ಮ ಅಭೂತಪೂರ್ವ ಮಾತಿನ ಶೈಲಿಯೊಂದಿಗೆ ನೆರೆದವರನ್ನು ರಂಜಿಸಿದರು. ಅವರು ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಟಿಶ್ಯೂ ಕಲ್ಚರ್‍ನ ವಿಷಯದಲ್ಲಿ ಒಂದು ಲೇಖನವನ್ನು ಸಿದ್ಧಪಡಿಸಿದ ಬಗ್ಗೆ ತಿಳಿಸಿದರು. ಬಕ್ರಿದ್ ಹಬ್ಬದ ನಿಜವಾದ ಅರ್ಥವನ್ನು ತಿಳಿಸಿದ ಅವರು, ಸಂತ ಅಲೋಶಿಯಸ್ ಕಾಲೇಜು ಇಂತಹ ಅರ್ಥಪೂರ್ಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದನ್ನು ಶ್ಲಾಘಿಸಿದರು. ಅಲ್ಲದೆ ಈ ಕಾಲೇಜು ಜಾತಿ-ಧರ್ಮವನ್ನು ನೆಲೆಗಟ್ಟನ್ನು ಲೆಕ್ಕಿಸದೆ ಹಲವಾರು ರೀತಿಯಲ್ಲಿ ಮಾನವೀಯ ಸೇವೆಯನ್ನು ಸಮಾಜಕ್ಕೆ ನೀಡುತ್ತಿದೆ ಎಂದು ಕೊಂಡಾಡಿದರು. ನಾವು ಅಂತರ್ಮುಖಿಗಳಾಗಿರದೆ, ಸಮಾಜಮುಖಿಗಳಾಗಿ ಬದುಕಲು ಪ್ರಯತ್ನಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ರೆ. ಫಾ. ಕ್ಲಿಫರ್ಡ್ ಫೆನಾಂಡಿಸ್‍ರವರು ತಮ್ಮ ಸಂದೇಶದಲ್ಲಿ ಮೊದಲಿಗೆ ಎಲ್ಲರೂ ‘ಮಾನವತೆ’ ಎಂಬ ಒಂದು ಧರ್ಮವನ್ನು ಪಾಲಿಸಬೇಕು ಹಾಗೂ ಮಾನವತೆಯ ಅರ್ಥವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ‘ಬದುಕಿ ಮತ್ತು ಇತರರಿಗೆ ಬದುಕಲು ಬಿಡಿ’ ಎಂಬ ಸಂದೇಶವನ್ನು ಸಾರಿದರು. ‘ವಿಧವೆಯ ಕಣ್ಣೀರನ್ನು ಒರೆಸದ ಧರ್ಮದಲ್ಲಿ ನನಗೆ ವಿಶ್ವಾಸವಿಲ್ಲ’ ಎಂಬ ಸ್ವಾಮಿ ವಿವೇಕಾನಂದರ ನುಡಿಗಳನ್ನು ನೆನಪಿಸಿದರು. ಮೋಸ, ವೇಷ, ದ್ವೇಷ ಎಂಬ ಮೂರು ಸಾಮಾಜಿಕ ಪಿಡುಗುಗಳನ್ನು ದೂರಗೊಳಿಸಿ ಸಾಮರಸ್ಯದಿಂದಿರಲು ವಿದ್ಯಾರ್ಥಿಗಳಿಗೆ ಸಲಹೆ ನೀಡಿ, ಎಲ್ಲಾ ಮುಸ್ಲಿಂ ಬಾಂಧವರಿಗೆ ಬಕ್ರಿದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು.
ಪ್ರಾಂಶುಪಾಲ, ರೆ. ಡಾ. ಪ್ರವೀಣ್ ಮಾರ್ಟಿಸ್‍ರವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಎಲ್ಲಾ ಮುಸ್ಲಿಂ ಬಾಂಧವರಿಗೆ ಬಕ್ರಿದ್ ಹಬ್ಬದ ಶುಭಾಶಯಗಳನ್ನು ತಿಳಿಸಿದರು. ‘ಹಂಚಿಕೆ ಮತ್ತು ಆರೈಕೆ’ ಎಂಬ ಮಾನವೀಯ ಸಂದೇಶವನ್ನು ಸಾರುವ ಬಕ್ರಿದ್ ಹಬ್ಬದ ಮಹತ್ವವನ್ನು ತಿಳಿಸಿದರು. ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿಗಳು ಯಾವಾಗಲೂ ಸಾಮಾಜಿಕ ಕಳಕಳೀಯನ್ನು ಹೊಂದಿದ್ದು, ಇತ್ತೀಚಿನ ಅತಿವೃಷ್ಠಿಯ ದುರಂತಕ್ಕೆ ಬಲಿಯಾದ ಕೇರಳ ಮತ್ತು ಕೊಡಗು ರಾಜ್ಯಗಳ ಸಂತ್ರಸ್ತರಿಗೆ ರೂ. 2,00,000 ಸಂಗ್ರಹಿಸಿ ನೀಡಿದ್ದನ್ನು ಕೊಂಡಾಡಿದರು. ನಾವು ಬಹು-ಸಾಂಸ್ಕೃತಿಕ, ಬಹು-ಭಾಷಾ ಹಾಗೂ ಬಹು ಧರ್ಮೀಯ ದೇಶದಲ್ಲಿ ಬಾಳುತ್ತಿದ್ದೇವೆ ಅದಕ್ಕಾಗಿ ಕಾಲೇಜಿನಲ್ಲಿ ಬಕ್ರಿದ್ ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಿದೆವು ಎಂದು ಹೇಳಿದರು.
ಕುಲಸಚಿವ ಡಾ. ಎ.ಎಂ. ನರಹರಿ, ಹಣಕಾಸು ಅಧಿಕಾರಿ, ಫಾ. ಪ್ರದೀಪ್ ಸಿಕ್ವೇರಾ ಎಸ್.ಜೆ., ಶಿಕ್ಷಕ ಮತ್ತು ಶಿಕ್ಷಕೇತರ ಸಿಬ್ಬಂದಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಯೋಕೆಮಿಸ್ಟ್ರಿ ವಿಭಾಗದ ಶಮೀಮ ಕೆ.ಎ. ಸ್ವಾಗತಿಸಿದರು. ಇಂಗ್ಲಿಷ್ ವಿಭಾಗದ ಅನೂಪ್ ಡೆನ್ಜಿಲ್ ಡಿಸೋಜ ಅತಿಥಿಗಳನ್ನು ಪರಿಚಯಿಸಿದರು. ನಿಶತ್ ಫಾತಿಮ ಕಾರ್ಯಕ್ರಮ ನಿರೂಪಿಸಿದರು.ಅಲ್ಫಾಜ್ ಹಮೀದ್ ವಂದಿಸಿದರು.
Click this button or press Ctrl+G to toggle between Kannada and English