ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರಸಭೆ ಬಿಜೆಪಿ ಪಾಲಾಗಿದೆ. ಆಗಸ್ಟ್ 31 ರಂದು ದಕ್ಷಿಣ ಕನ್ನಡ ಜಿಲ್ಲೆಯ 2 ನಗರಸಭೆ ಹಾಗೂ 1 ಪುರಸಭೆಗೆ ಚುನಾವಣೆ ನಡೆದಿತ್ತು. ಪುತ್ತೂರು ನಗರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜಿದ್ದಾಜಿದ್ದಿಯ ಹೋರಾಟದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ.
ಪುತ್ತೂರಿನಲ್ಲಿ ಬಿಜೆಪಿ ದಾಖಲೆಯ ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಧೂಳಿಪಟವಾಗಿದೆ. ಇಲ್ಲಿ ಇನ್ನೊಂದು ಗಮನಾರ್ಹ ಸಂಗತಿ ಎಂದರೆ ಇದೇ ಮೊದಲಬಾರಿಗೆ ಪುತ್ತೂರು ನಗರಸಭೆಯಲ್ಲಿ ಎಸ್ ಡಿಪಿಐ ಖಾತೆ ತೆರೆದಿದೆ.
ಆಗಸ್ಟ್ 31 ರಂದು ಪುತ್ತೂರು ನಗರಸಭೆಗೆ ನಡೆದ ಚುನಾವಣೆಯ ಮತ ಎಣಿಕೆಯ ಕಾರ್ಯ ಪುತ್ತೂರಿನ ಮಿನಿ ವಿಧಾನ ಸೌಧದಲ್ಲಿ ನಡೆಯಿತು. ಪುತ್ತೂರು ನಗರಸಭೆಯ ಒಟ್ಟು 31 ವಾರ್ಡುಗಳ ಪೈಕಿ ಬಿಜೆಪಿ 25 ವಾರ್ಡ್ ಗಳಲ್ಲಿ ಜಯಗಳಿಸುವ ಮೂಲಕ ಜಯಭೇರಿ ಬಾರಿಸಿದೆ. ಕಾಂಗ್ರೆಸ್ ಕೇವಲ 5 ಸ್ಥಾನಗಳಿಗೆ ತೃಪ್ತಿ ಪಟ್ಟರೆ, ಎಸ್.ಡಿ.ಪಿ.ಐ 1 ಸ್ಥಾನದೊಂದಿಗೆ ಖಾತೆ ತೆರೆದಿದೆ.
ಕಳೆದ ಬಾರಿ ಚುನಾವಣೆಯಲ್ಲಿ 27 ವಾರ್ಡ್ ಗಳಲ್ಲಿ 15 ನ್ನು ಕಾಂಗ್ರೆಸ್ ಗೆದ್ದಿದ್ದರೆ, ಬಿಜೆಪಿ 12 ವಾರ್ಡ್ ಗಳಲ್ಲಿ ಗೆಲುವು ಸಾಧಿಸಿತ್ತು. ನಗರಸಭೆಯಾದ ಬಳಿಕ ವಾರ್ಡ್ ಗಳ ಸಂಖ್ಯೆ 27 ರಿಂದ 31. ಕ್ಕೆ ಏರಿಕೆಯಾಗಿದೆ. ಪುತ್ತೂರಿನಲ್ಲಿ ಕೇವಲ 5 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಭಾರೀ ಮುಖಭಂಗ ಅನುಭವಿಸಿದೆ.
ಈ ಫಲಿತಾಂಶ ಕಾಂಗ್ರೆಸ್ ನ ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಅವರ ಭವಿಷ್ಯದ ಮೇಲೆ ಪ್ರಶ್ನೆ ಮೂಡಿಸಿದೆ. ಕಾಂಗ್ರೆಸ್ ನ ಈ ಸೋಲಿಗೆ ಪುತ್ತೂರು ಕಾಂಗ್ರೆಸ್ ಪಾಳಯದಲ್ಲಿರುವ ಕಚ್ಚಾಟ ಹಾಗು ಶಕುಂತಾಲಾ ಶೆಟ್ಟಿ ಅವರ ಮೇಲಿರುವ ಅಸಮಾಧಾನ ಕಾರಣ ಎಂದು ಹೇಳಲಾಗುತ್ತಿದೆ.
ಉಳ್ಳಾಲ ನಗರಸಭೆ: ಕಾಂಗ್ರೆಸ್ 13, ಬಿಜೆಪಿ 6, ಎಸ್ಡಿಪಿಐ 6, ಜೆಡಿಎಸ್ 4, ಪಕ್ಷೇತ್ತರ 2
ಬಂಟ್ವಾಳ ಪುರಸಭೆ: ಕಾಂಗ್ರೆಸ್ 12, ಬಿಜೆಪಿ 11, ಎಸ್ಡಿಪಿಐ 4
ಪುತ್ತೂರು ನಗರಸಭೆ: ಬಿಜೆಪಿ 25, ಕಾಂಗ್ರೆಸ್ 5, ಎಸ್ಡಿಪಿಐ 1
Click this button or press Ctrl+G to toggle between Kannada and English