ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರು ತಾಲೂಕಿನ ಇಚಿಲಂಪಾಡಿ ಗ್ರಾಮದ ಕಾಯರ್ತಡ್ಕ ಎಂಬಲ್ಲಿ ಆರು ದಿನಗಳ ಹಿಂದೆ ರೇಬಿಸ್ನಿಂದ ಮೃತಪಟ್ಟ ಯುವಕನ ಅಂತಿಮ ದರ್ಶನದಲ್ಲಿ ಭಾಗವಹಿಸಿದ್ದ ನೂರಾರು ಮಂದಿ ಇದೀಗ ಆತಂಕದಲ್ಲಿದ್ದಾರೆ.
ವೈರಾಣು ಹರಡುವಿಕೆಯಿಂದ ಆತಂಕಕ್ಕೊಳಗಾಗಿರುವ ಸ್ಥಳೀಯರು ಇದೀಗ ಆ್ಯಂಟಿ ರೇಬಿಸ್ ಇಂಜೆಕ್ಷನ್ ಹಾಕಿಸಿಕೊಳ್ಳುತ್ತಿದ್ದಾರೆ. ಸುಳ್ಯದ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಮುಗಿಸಿ ಉದ್ಯೋಗದ ನಿರೀಕ್ಷೆಯಲ್ಲಿದ್ದ ಇಚ್ಲಂಪಾಡಿಯ ಕಾಯರ್ತಡ್ಕ ನಿವಾಸಿ ಆಶಿತ್ ಪೂಜಾರಿ (24) ಇತ್ತೀಚೆಗೆ ನಿಧನರಾಗಿದ್ದರು.
ಹಠಾತ್ ಅನಾರೋಗ್ಯಕ್ಕೀಡಾಗಿ ಆ. 28 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟ ಆಶಿತ್, ರೇಬಿಸ್ ವೈರಾಣುವಿನಿಂದ ಮೃತಪಟ್ಟಿರುವ ಬಗ್ಗೆ ಆಸ್ಪತ್ರೆಯ ವೈದ್ಯರು ಸ್ಪಷ್ಟಪಡಿಸಿದ್ದರು.
ಮೃತದೇಹವನ್ನು ಪ್ಯಾಕ್ ಮಾಡಿಕೊಡುವಾಗ ಮನೆಯವರಿಗೆ ನೇರವಾಗಿ ಸ್ಮಶಾನಕ್ಕೆ ಕೊಂಡೊಯ್ಯುವಂತೆ ಆಸ್ಪತ್ರೆಯ ವೈದ್ಯರು ಸೂಚಿಸಿದ್ದರು. ಅದರಂತೆ ಮನೆಯವರು ಸಹಜವಾಗಿಯೇ ಅಂತ್ಯಕ್ರಿಯೆ ನಡೆಸಿದ್ದರು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಗ್ರಾಮಸ್ಥರು ಸೇರಿದಂತೆ ಸುಮಾರು 600 ಕ್ಕೂ ಹೆಚ್ಚು ಮಂದಿ ಮೃತರ ಅಂತಿಮ ದರ್ಶನ ಪಡೆದಿದ್ದರು.
ಇದೀಗ ಆಶಿತ್, ರೇಬಿಸ್ ವೈರಾಣುವಿನಿಂದ ಮೃತಪಟ್ಟಿರುವ ವಿಚಾರದಿಂದ ಗ್ರಾಮದೆಲ್ಲೆಡೆ ಆತಂಕ ಸೃಷ್ಟಿಯಾಗಿದೆ. ಗ್ರಾಮಸ್ಥರು ಸೇರಿದಂತೆ ನೂರಾರು ಮಂದಿ ಭಯಭೀತರಾಗಿದ್ದಾರೆ. ಮೃತದೇಹದ ಅಂತಿಮ ದರ್ಶನಕ್ಕೆ ತೆರಳಿದ್ದ 200ಕ್ಕೂ ಹೆಚ್ಚು ಮಂದಿ ಇದೀಗ ‘ಆ್ಯಂಟಿ ರೇಬಿಸ್ ಚುಚ್ಚುಮದ್ದು’ ಹಾಕಿಸಿಕೊಳ್ಳುತ್ತಿದ್ದಾರೆ.
Click this button or press Ctrl+G to toggle between Kannada and English