ಪುತ್ತೂರು: ಕೆಮ್ಮಿಂಜೆ ಗ್ರಾಮದ ಮನೆಯೊಂದರ ಮುಂಭಾಗದ ಸರಿಗೆಯಲ್ಲಿ ಹಾಕಿದ್ದ ಬಟ್ಟೆಗೆ ಬೆಂಕಿ ಹಚ್ಚಿ ಸುಮಾರು 5,000 ರೂ.ನಷ್ಟು ನಷ್ಟಗೊಳಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಗಣೇಶ್ ಕಲ್ಲಗುಡ್ಡೆ ಬಂಧಿತ ಆರೋಪಿ. ವಿದ್ಯುತ್ ಕಾಂಟ್ರಾಕ್ಟರ್ ಅಶೋಕ್ ಪೂಜಾರಿ ಪುತ್ತೂರು ಗ್ರಾಮದ ಕೆಮ್ಮಿಂಜೆ ಗ್ರಾಮದ ಕೊರಂಗು ನಿವಾಸಿ ಗೋಪಾಲ ಮುಗೇರ ಎಂಬುವರ ಮನೆಗೆ ವೈರಿಂಗ್ ಹಾಗೂ ವಿದ್ಯುತ್ ಸಂಪರ್ಕ ಕೆಲಸ ಮಾಡಿದ್ದರು. ಹೀಗಾಗಿ ಅಶೋಕ್ ಪೂಜಾರಿಗೆ 11,500 ರೂ.ಯನ್ನು ಮುಗೇರ ನೀಡಿದ್ದರು.
ಆದರೆ ಈ ಬಗ್ಗೆ ಹೆಚ್ಚುವರಿಯಾಗಿ 4,000 ರೂ. ನೀಡುವಂತೆ ಆರೋಪಿ ಗಣೇಶ್ ಕಲ್ಲಗುಡ್ಡೆ ಒತ್ತಾಯಿಸಿದ್ದರು. ಆದರೆ ಹೆಚ್ಚುವರಿ ಹಣ ನೀಡುವುದಿಲ್ಲ ಎಂದು ಮುಗೇರ ಕುಟುಂಬದವರು ಹೇಳಿದ್ದರು. ಹಣ ಕೊಡದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುತ್ತೇನೆ, ಸುಟ್ಟು ಹಾಕುತ್ತೇನೆ ಎಂದು ಬೆದರಿಕೆ ಹಾಕಿದ ಆರೋಪಿ ಗಣೇಶ್ ಕಲ್ಲಗುಡ್ಡೆ ಅ.29ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮನೆಯ ಎದುರಿನ ಸರಿಗೆಗೆ ಜೋತು ಹಾಕಿದ್ದ ಬಟ್ಟೆಗೆ ಬೆಂಕಿ ಹಚ್ಚಿದ್ದ. ಪರಿಣಾಮ ಬಟ್ಟೆ ಬರೆ, ವಿದ್ಯುತ್ ಮೀಟರ್ ಸುಟ್ಟು ಸುಮಾರು 5,000 ಸಾವಿರ ರೂ. ನಷ್ಟ ಸಂಭವಿಸಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಈ ಬಗ್ಗೆ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Click this button or press Ctrl+G to toggle between Kannada and English